ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ:
ಮಾಜಿ ಸಂಸದ, ಬಿಜೆಪಿ ನಾಯಕ ರಮೇಶ ಕತ್ತಿ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಅವರನ್ನು ಸ್ವಾಗತಿಸುತ್ತೇವೆ. ಆದರೆ ಅವರಿಗೆ ಈ ಬಾರಿ ಲೋಕಸಭೆಗೆ ಟಿಕೆಟ್ ಕೊಡುವುದಿಲ್ಲ. ಅವರು ಪಕ್ಷದ ಸಂಘಟನೆಗೆ ಪ್ರಾಮಾಣಿಕವಾಗಿ ದುಡಿಯಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಹೇಳಿದರು.
ಚಿಕ್ಕೋಡಿಯ ಕಾಂಗ್ರೆಸ್ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಪ್ರಕಾಶ ಹುಕ್ಕೇರಿಗೆ ಟಿಕೇಟ್ ಖಚಿತವಾಗಿದ್ದು, ಅವರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ಬಾರಿಯೂ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದರು.
ಕಳೆದ ಬಾರಿ ಕಡಿಮೆ ಅಂತರದಿಂದ ಗೆದ್ದ ಪ್ರಕಾಶ ಹುಕ್ಕೇರಿ ಈ ಬಾರಿ ಪಕ್ಷದ ಸಂಘಟನೆಯ ಬಲದಿಂದಾಗಿ ಬಹುದೊಡ್ಡ ಅಂತರದ ಗೆಲವು ಸಾಧಿಸಲಿದ್ದಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಬಡವರಿಗಾಗಿ ಕೆಲಸ ಮಾಡುತ್ತ ಬಂದಿದ್ದು, ಈ ಬಾರಿ ಅಧಿಕಾರಕ್ಕೆ ಬಂದರೆ ಬಡವರಿಗೆ ಮಾಸಿಕ 6 ಸಾವಿರ ರೂ.ಗಳಂತೆ ವಾರ್ಷಿಕ 72 ಸಾವಿರ ರೂ. ನೀಡಲಾಗುವುದು. ಯಾವುದೇ ಜಾತಿ ಭೇದವಿಲ್ಲದೆ ಎಲ್ಲ ಬಡವರಿಗೂ ಹಣ ದೊರೆಯಲಿದ್ದು, ಇದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಕನಸಿನ ಯೋಜನೆಯಾಗಿದೆ. ಇದು ಬಡವರ ಕಷ್ಟವನ್ನು ನಿರ್ನಾಮ ಮಾಡಲಿದೆ. ದೇಶದ 5 ಕೋಟಿ ಬಡವರು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ಚಿಂಗಳೆ ಹೇಳಿದರು.
ಈ ಸಂದರ್ಭದಲ್ಲಿ ಅಶೋಕ ಅರಗೆ, ರವಿ ಮಿರ್ಜೆ, ಮಹಾವೀರ ಮೋಹಿತೆ, ಗುಲಾಬಹುಸೇನ್, ಸತೀಶ್ ಕುಲಕರ್ಣಿ, ಪಿರೋಜ್ ಕಲಾವಂತ, ಮಾಣಿಕ ಕುಂಬಾರ, ಪ್ರಭಾಕರ ಕೋರೆ ಸೇರಿ ಹಲವು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ