ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ಬಂಡಾಯ ಶಾಸಕ ರಮೇಶ್ ಜಾರಕಿಹೊಳಿಗೆ ಮತ್ತೆ ಸಚಿವ ಸ್ಥಾನದ ಆಫರ್‌ನ್ನು ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ನೀಡಿ ಅಸಮಾಧಾನ ತಣಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಸಚಿವ ಸ್ಥಾನ ಕೈತಪ್ಪಿದ ಬಳಿಕ ಪಕ್ಷದ ಮೇಲೆ ಅಸಮಾಧಾನಗೊಂಡು ರೆಬೆಲ್ ಆಗಿರುವ ಶಾಸಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಚರ್ಚೆಯ ಕೇಂದ್ರವಾಗಿರುವಾಗಲೇ ಸಿಎಂ ನೀಡಿದ್ದಾರೆನ್ನಲಾದ ಆಫರ್ ಕುತೂಹಲಕ್ಕೆ ಕಾರಣವಾಗಿದೆ.
ರಮೇಶ್ ಜಾರಕಿಹೊಳಿ ಅವರಿಗೆ ಸ್ವತಃ ದೂರವಾಣಿ ಕರೆ ಮಾಡಿ ಆಫರ್ ನೀಡಿದ ಸಿಎಂ, ರಾಜೀನಾಮೆ, ಗೀಜಿನಾಮೆ ಎಲ್ಲ ಬಿಟ್ಹಾಕಿ ಬ್ರದರ್. ಬನ್ನಿ ಬ್ರದರ್, ನಿಮಗೆ ಸಚಿವ ಸ್ಥಾನ ಕೊಡ್ತೀವಿ ಎಂದು ರಮೇಶ್ಗೆ ಸಚಿವ ಸ್ಥಾನದ ಭರವಸೆ ನೀಡಿದ್ದಾರೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಪಾಳಯದಲ್ಲಿ ದೊಡ್ಡ ಮಟ್ಟದ ಗೊಂದಲ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಣ್ಣ ಸಣ್ಣ ಸಮಸ್ಯೆಯನ್ನೂ ನಿರ್ಲಕ್ಷಿಸುವ ಸ್ಥಿತಿಯಲ್ಲಿ ಕುಮಾರಸ್ವಾಮಿ ಇಲ್ಲ. ಹಾಗಾಗಿ ರಮೇಶ ಜಾರಕಿಹೊಳಿಯನ್ನು ಮತ್ತೆ ಸಚಿವರನ್ನಾಗಿಸುವ ಮೂಲಕ ಹೇಗಾದರೂ ಮಾಡಿ ತೇಪೆ ಹಚ್ಚುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.
ರಮೇಶ್ ಗೆ ಮತ್ತೆ ಸಚಿವಸ್ಥಾನ ನೀಡಿದರೆ ಒಂದೇ ಮನೆಯಲ್ಲಿ ಇಬ್ಬರನ್ನು ಮಂತ್ರಿ ಮಾಡುವುದರಿಂದ ಉಂಟಾಗಬಹುದಾದ ಸಮಸ್ಯೆಗಳನ್ನು ಊಹಿಸಿಯೂ ಸರಕಾರ ಉಳಿಸಿಕೊಳ್ಳುವುದಕ್ಕಾಗಿ ಈ ರಿಸ್ಕ್ ತೆಗೆದುಕೊಳ್ಳಲು ಅವರು ಮುಂದಾಗಿದ್ದಾರೆನ್ನಲಾಗಿದೆ.
ಆದರೆ ಕುಮಾರಸ್ವಾಮಿ ಆಫರ್ ಗೆ ರಮೇಶ ಪ್ರತಿಕ್ರಿಯೆ ಏನು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಅವರು ಈಗಾಗಲೆ ಬಿಜೆಪಿಯಲ್ಲಿ ಒಂದು ಕಾಲಿಟ್ಟಿರುವುದರಿಂದ ಹಿಂತೆಗೆಯುವ ಸ್ಥಿತಿಯಲ್ಲಿಲ್ಲ ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ