Latest

ರೈತಪರ ಕಾರ್ಯಕ್ರಮ ಪ್ರಚಾರಕ್ಕೆ ಬಿಜೆಪಿ ರೈತ ಮೋರ್ಚಾದಿಂದ ಹಲವು ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಕೇಂದ್ರ ಸರ್ಕಾರ ರೈತರಿಗೆ ನೀಡಿದ ಕೊಡುಗೆಗಳನ್ನು ಕೃಷಿಕರಿಗೆ ಹಾಗೂ ಸಾರ್ವಜನಿಕರಿಗೆ ತಿಳಿಸಲು ಮತ್ತು ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ಅಂಶಗಳನ್ನು ಪ್ರಚಾರ ಮಾಡಲು ಕರ್ನಾಟಕ ಪ್ರದೇಶ ಬಿಜೆಪಿ ರೈತ ಮೋರ್ಚಾ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಭಾನುವಾರ ನಡೆದ ರೈತಮೋರ್ಚಾ ಸಭೆಯಲ್ಲಿ ತೆಗೆದುಕೊಂಡ ವಿವರಗಳನ್ನು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ಸವದಿ ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ವಿವರಿಸಿದರು. 

ರೈತ ಮೋರ್ಚಾ ರಾಜ್ಯ ಪದಾಧಿಕಾರಿಗಳ ರಾಜ್ಯ ಪ್ರವಾಸ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ೫ ವರ್ಷಗಳ ರಾಜ್ಯ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು ೧೦ ತಂಡಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.

ಫೆ.೫ರಂದು ರಾಜಾದ್ಯಂತ ಮೋದಿ ಬಜೆಟ್ ಅಭಿನಂದನಾ ಸಮಾರಂಭ: ಈ ಬಾರೀ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ೧,೪೯,೯೮೧ಕೋಟಿ ಹಣವನ್ನು ಮೀಸಲಿಟ್ಟಿರುವುದನ್ನು ಅಭಿನಂದಿಸಿ ಹಾಗೂ ಶೇ.೮೭ರಷ್ಟು ರೈತರಿಗೆ ಪ್ರತಿವರ್ಷ ರೂ ೬೦೦೦ ರೂ.ಗಳನ್ನು ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿಯಲ್ಲಿ ಗೌರವ ಧನವಾಗಿ, ಶಾಶ್ವತವಾಗಿ ಬ್ಯಾಂಕ್ ಖಾತೆ ಮೂಲಕ ನೀಡುವ ಯೋಜನೆಯನ್ನು ಅಭಿನಂದಿಸಲು ಫೆ.೫ರಂದು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮೋದಿ ಬಜೆಟ್ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ.

ಬಜೆಟ್‌ನಲ್ಲಿ ರೈತ ಪರವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವುದಕ್ಕೆ ನರೇಂದ್ರ ಮೋದಿ ಹಾಗೂ ಸಚಿವ ಪಿಯೂಷ್ ಗೋಯಲ್ ಅವರಿಗೆ ಕರ್ನಾಟಕ ಬಿಜೆಪಿ ರೈತ ಮೋರ್ಚಾ ವತಿಯಿಂದ ಅಭಿನಂದನೆ ಸಲ್ಲಿಸುವ ನಿರ್ಣಯವನ್ನು ರೈತಮೋರ್ಚಾ ಸಭೆ ತೆಗೆದುಕೊಂಡಿದೆ.  ಬಿಜೆಪಿ ರೈತ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷ ಶಂಕರಗೌಡ ಪಾಟೀಲ್ ಅವರು ಅಭಿನಂದನಾ ನಿರ್ಣಯ ಮಂಡಿಸಿ, ಮೋದಿಯವರು ಈ ಸಾಲಿನ ಬಜೆಟ್‌ನಲ್ಲಿ ರೈತ ವರ್ಗಕ್ಕೆ ವಿಶೇಷ ಪ್ರಾಶಸ್ತ್ಯ ನೀಡಿರುವುದು ಅತ್ಯಂತ ಹೆಮ್ಮೆಯ ಸಂಗತಿ ಹಾಗೂ ರಾಷ್ಟ್ರದ ಇನ್ನಿತರ ಬಡ ಕೂಲಿ ಕಾರ್ಮಿಕರ ವರ್ಗ ಹಾಗೂ ಮಧ್ಯಮ ವರ್ಗದವರಿಗೆ ವಿಶೇಷ ಕೊಡುಗೆಗಳನ್ನು ನೀಡಿರುವುದನ್ನು ಪ್ರಸ್ತಾಪಿಸಿದರು. 

 ಫೆ. ೧೮ ರಂದು ರಾಜ್ಯಾದ್ಯಂತ ನಾಲ್ಕು ಸಾವಿರ ತಾಲೂಕು ಪಂಚಾಯ್ತಿ ಕ್ಷೇತ್ರಗಳಲ್ಲಿ ಗೋ ಪೂಜೆ ಕಾರ್ಯಕ್ರಮ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಸಾಲಿನ ಬಜೆಟ್‌ನಲ್ಲಿ ಸ್ವದೇಶಿ ಗೋ ತಳಿಗಳ ರಕ್ಷಣೆಗಾಗಿ ಮತ್ತು ಅಭಿವೃದ್ಧಿಗಾಗಿ ಮೊದಲ ಹಂತದಲ್ಲಿ ೮೫೦ಕೋಟಿ ರೂ ಮೀಸಲಿಟ್ಟು ಕಾಮಧೇನು ಆಯೋಗ ರಚಿಸಿರುವುದನ್ನು ರಾಜ್ಯಾದ್ಯಂತ ನಾಲ್ಕು ಸಾವಿರ ತಾಲೂಕು ಪಂಚಾಯ್ತಿ ಕ್ಷೇತ್ರಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಗೋ ಭಕ್ತರು, ಸಾರ್ವಜನಿಕರು ಒಟ್ಟಾಗಿ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಗೋ ಪೂಜೆ ಸಲ್ಲಿಸಿ, ಗೋವಿನ ಮಹತ್ವವನ್ನು ಜನತೆಗೆ ತಿಳಿಸಲಿದ್ದಾರೆ.

೨೩, ೨೪ ರಂದು ಉತ್ತರ ಪ್ರದೇಶದ ಗೋರಖಪುರದಲ್ಲಿ ರಾಷ್ಟ್ರೀಯ ರೈತ ಸಮಾವೇಶ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ ಪೆ.೨೩, ೨೪ರಂದು ಉತ್ತರ ಪ್ರದೇಶದ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಗೋರಖಪುರದಲ್ಲಿ ರಾಷ್ಟ್ರೀಯ ರೈತ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ವಿಶೇಷವಾಗಿ ರಾಷ್ಟ್ರದ ಸಮಸ್ಯೆಗಳ ಪರಿಹಾರ ಹಾಗೂ ಕೃಷಿಕರಿಗೆ ಸಂಬಂಧಪಟ್ಟ ವಿಚಾರಗಳನ್ನು ಚರ್ಚಿಸಲಾಗುವುದು. ದೇಶದೆಲ್ಲೆಡೆಯಿಂದ ೧ ಲಕ್ಷಕ್ಕೂ ಅಧಿಕ ರೈತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕದಿಂದ ಸುಮಾರು ೨೫೦ಕ್ಕಿಂತ ಹೆಚ್ಚು ಆಯ್ದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಪ್ರಧಾನಮಂತ್ರಿ  ನರೇಂದ್ರಮೋದಿ ಅವರು ೨೪ರಂದು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button