ಪ್ರಗತಿವಾಹಿನಿ ಸುದ್ದಿ, ಹಾಸನ:
ಸರ್ಕಾರಿ ಶಾಲೆ ಶಿಕ್ಷಕ ವರ್ಗಕ್ಕೆ ಪರೀಕ್ಷೆ ನಡೆಸಿ, ಅವರ ಬೋಧನಾ ಕ್ರಮವನ್ನೇ ಬದಲಾಯಿಸುವ ಮೂಲಕ ಹಾಸನದ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಈ ವರ್ಷದ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಹಾಸನ ರಾಜ್ಯದಲ್ಲೇ ಮೊದಲ ಸ್ಥಾನಕ್ಕರುವಂತೆ ಮಾಡಿದ್ದಾರೆ.
ಎಸ್‍ಎಸ್‍ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯನ್ನು ರಾಜ್ಯದಲ್ಲೇ ಮೂರನೇ ಸ್ಥಾನಕ್ಕೇರಿಸುವ ಆಸೆಯನ್ನು ರೋಹಿಣಿ ಸಿಂಧೂರಿ ಹೊಂದಿದ್ದರು. ಅವರು ಅಂದು ಕೈಗೊಂಡ ಕ್ರಮ ಇಂದು ಫಲ ನೀಡಿದೆ. ಮೂರನೇ ಸ್ಥಾನ ಅಲ್ಲ, ಮೊದಲ ಸ್ಥಾನವೇ ಬಂದಿದೆ.
ಗಣಿತ, ವಿಜ್ಞಾನ ಹಾಗೂ ಸಮಾಜ-ವಿಜ್ಞಾನ ಬೋಧಿಸುವ 6ರಿಂದ 10ನೇ ತರಗತಿಯವರೆಗಿನ ಎಲ್ಲಾ ಸರ್ಕಾರಿ ಶಿಕ್ಷಕರಿಗೆ ಪರೀಕ್ಷೆ ಬರೆಸಿದ್ದರು. ರೋಹಿಣಿ ಸಿಂಧೂರಿಯವರೇ ಖುದ್ದು ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ರೂಪಿಸಿದ್ದರು.
ವಿವಿಧ ಇಲಾಖೆಗಳ ಜತೆ ಸಭೆ ನಡೆಸುತ್ತಿದ್ದ ರೋಹಿಣಿ ಅವರು, ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ರೀತಿ ಪರೀಕ್ಷೆ ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಂಡರು. ಈ ಮೂರು ವಿಷಯಗಳಲ್ಲಿ ರಾಜ್ಯಪಠ್ಯ ಕ್ರಮವನ್ನು ಕೇಂದ್ರ ಪಠ್ಯಕ್ರಮಕ್ಕೆ ಉನ್ನತೀಕರಿಸಲು ನಿರ್ಧರಿಸಿದರು.
ಪಠ್ಯಕ್ರಮ ಅಪ್ಡೇಟ್ ಮಾಡಿಸಿದ ಬಳಿಕ, ಶಿಕ್ಷಕರು ಅಪ್ಡೇಟ್ ಆಗುವುದು ಮುಖ್ಯವಾಗಿತ್ತು. ಕೆಲವರು ಬಿಟ್ಟರೆ, ಉಳಿದವರು ಇನ್ನೂ ತಮ್ಮನ್ನು ಅಪ್ ಡೇಟ್ ಮಾಡಿಕೊಂಡಿರಲಿಲ್ಲ. ಇದು ವಿದ್ಯಾರ್ಥಿಗಳಿಗೆ ಸಮಸ್ಯೆ ತಂದೊಡ್ಡುತ್ತಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಶಿಕ್ಷಕರಿಗೆ ಒಂದು ಪರೀಕ್ಷೆ ಹಮ್ಮಿಕೊಳ್ಳಲು ನಿರ್ಧರಿಸಿದರು.
ಎಲ್ಲಾ ಶಿಕ್ಷಕರಿಗೆ ನೂತನ ಪಠ್ಯಕ್ರಮವನ್ನು ಮನನ ಮಾಡಿಕೊಳ್ಳಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು. 2018ರ ಜುಲೈ 28ರಂದು ಪರೀಕ್ಷೆ ನಡೆಸಲಾಗಿತ್ತು. ರೋಹಿಣಿ ಸ್ವತಃ ಪ್ರಶ್ನೆ ಪತ್ರಿಕೆ ಸಿದ್ದಪಡಿಸಿದ್ದರು, ಗಣಿತ, ವಿಜ್ಞಾನ, ಸಮಾಜಶಾಸ್ತ್ರದ ಮೇಲೆ ಹೆಚ್ಚಿನ ಒತ್ತು ನೀಡಲಾಗಿತ್ತು.
“ಈ ವರ್ಷ ಎಸ್‍ಎಸ್‍ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆ ಉತ್ತಮ ಸ್ಥಾನ ಪಡೆಯಲೇಬೇಕು. ಕರಾವಳಿ ಜಿಲ್ಲೆಗಳಂತೆ ನಮ್ಮ ಜಿಲ್ಲೆ ಕೂಡ ಎಸ್‍ಎಸ್‍ಎಲ್‍ಸಿಯಲ್ಲಿ ರಾಜ್ಯದಲ್ಲಿ ಮೂರನೇ ಸ್ಥಾನದೊಳಗಿರಬೇಕು. ಇದು ನಮ್ಮ ಗುರಿ. ಈ ಹಿನ್ನೆಲೆಯಲ್ಲಿ ಆರಂಭದಿಂದಲೇ ಪ್ರಯತ್ನ ಆರಂಭಿಸುತ್ತಿದ್ದೇವೆ,” ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ