ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
500 ಹೆಣ್ಣು ಮಕ್ಕಳು ಸೇರಿದಂತೆ 2 ಸಾವಿರ ಜನರಿಗೆ ವೇದ ಕಲಿಸುವ ಮೂಲಕ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದ ಗುರುಕುಲ ಕ್ರಾಂತಿಯನ್ನೆ ಮಾಡಿದೆ ಎಂದು ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಅವರು ಗುರುವಾರ ನಗರದ ಲಕ್ಷ್ಮೀಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಇಷ್ಟ ಲಿಂಗ ಪೂಜೆ ಸಾಮೂಹಿಕ ರುದ್ರಪಠಣ ಮಹಿಳೆಯರಿಂದ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಗಡಿ ಭಾಗದಲ್ಲಿ ಸಾಹಿತ್ಯ, ಸಂಸ್ಕೃತಿ, ಪರಿಸರ ಸೇರಿದಂತೆ ಸಮಾಜದ ಸುಧಾರಣೆಯ ಕಾಳಜಿಯನ್ನು ತೋರಿಸುತ್ತಿದ್ದಾರೆ. ಅದರಲ್ಲಿಯೂ ವೇದವನ್ನು ಮಹಿಳೆಯರಿಗೆ ಕಲಿಸುವುದರ ಮುಖಾಂತರ ಅದ್ಬುತ ಕ್ರಾಂತಿ ಮಾಡಿದ್ದಾರೆ ಎಂದರು.
ಮನೆಯೇ ಮೊದಲ ಪಾಠಶಾಲೆ, ಜನನಿತಾನೇ ಮೊದಲು ಗುರು ಎನ್ನುವ ಹಾಗೆ ತಾಯಂದಿರು ಸಂಸ್ಕಾರವನ್ನು ಹೊಂದಿದ್ದೇ ಆದರೆ ಇಡೀ ಮನೆ ಸಂಸ್ಕಾರಯುತವಾಗಿರಲು ಸಾಧ್ಯವಾಗುತ್ತದೆ. ಆ ಒಂದು ಜವಾಬ್ದಾರಿಯ ವಿಚಾರ ಅರಿತು ಶ್ರೀಗಳು ಮಹಿಳೆಯರಿಗೆ ರುದ್ರ ಪಾರಾಯಣವನ್ನು ಕಲಿಸಿರುವುದು ಅಭಿಮಾನದ ಸಂಗತಿ ಎಂದರು.
ಬೆಳಗಾವಿ ನಗರದಲ್ಲಿ ಸುವರ್ಣ ವಿಧಾನಸೌಧದ ಕನಸನ್ನು ಕಟ್ಟಿಕೊಂಡವರು ಸಿಎಂ ಕುಮಾರಸ್ವಾಮಿ. ಆದರೆ ವಿಟಿಯು ವಿಭಜನೆಗೆ ಮುಂದಾಗಿರುವುದು ಅಪಾಯದ ಬೆಳವಣಿಗೆ. ಉತ್ತರ ಕರ್ನಾಟಕದ ಜನರಿಗೆ ನ್ಯಾಯ ಒದಗಿಸಬೇಕಾಗಿತ್ತು ಎಂದರೆ ತಾಳ್ಮೆಯಿಂದ ಈ ಭಾಗದ ಜನರ ಸಮಸ್ಯೆ ಅರಿತು ಮುಂದುವರೆಯುವುದು ತುಂಬಾ ಯೋಗ್ಯ ಎಂದು ಸಲಹೆ ನೀಡಿದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಾರತ ದೇಶದ ಸಂಸ್ಕಾರವನ್ನು ಹೊರ ದೇಶದವರು ಪ್ರೀತಿಸುತ್ತಿದ್ದಾರೆ. ನಮ್ಮ ಸಂಸ್ಕಾರವನ್ನು ನಾವು ಬಿಟ್ಟ ಮರುಕ್ಷಣವೇ ನಮ್ಮ ದೇಶಕ್ಕೆ ಅನಾಹುತ. ಅದಕ್ಕಾಗಿ ನಮ್ಮ ಸಂಸ್ಕಾರ ಎತ್ತಿ ಹಿಡಿಯುವ ಕಾರ್ಯವನ್ನು ಎಲ್ಲರೂ ಮಾಡಬೇಕಾಗಿದೆ ಎಂದರು.
ಬೆಳಗಾವಿ,ಧಾರವಾಡ, ಗದಗದಿಂದ ಬಂದ ಭಕ್ತರು ಸಾಮೂಹಿಕವಾಗಿ ಲಿಂಗಪೂಜೆಯಲ್ಲಿ ಪಾಲ್ಗೊಂಡರು.
ನೂರಾರು ಜನ ಹೆಣ್ಣು ಮಕ್ಕಳು ವೇದವನ್ನು ಪಠಿಸುವ ಮೂಲಕ ಗುರುಗಳ ಸಾಮೂಹಿಕ ಲಿಂಗಪೂಜೆಯಲ್ಲಿ ಭಾಗಿಯಾಗಿದ್ದರು.
ಯೋಗ ಗುರು ಬ್ರಹ್ಮಾನಂದ ಸ್ವಾಮೀಜಿ, ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ಮೇಕನಮರಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.