Latest

ವಿಟಿಯು ವಿಭಜನೆ ; ಸರಕಾರದ ಅನುಚಿತ ನಡೆ

ಗದಗ-ಡಂಬಳ ಜಗದ್ಗುರು ಡಾ. ತೋಂಟದ ಸಿದ್ಧರಾಮ ಸ್ವಾಮಿಜಿ ಅಸಮಾಧಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಬೆಳಗಾವಿಯಲ್ಲಿರುವ ಕರ್ನಾಟಕದ ಏಕೈಕ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜಿಸುತ್ತಿರುವ ಸರಕಾರದ ನಡೆ ಅನುಚಿತವಾಗಿದೆ ಎಂದು ಗದಗ-ಡಂಬಳ ಜಗದ್ಗುರು ಡಾ. ತೋಂಟದ ಸಿದ್ಧರಾಮ ಸ್ವಾಮಿಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತರತ್ನ ವಿಶ್ವೇಶ್ವರಯ್ಯನವರ ಹೆಸರಿನಲ್ಲಿರುವ ಈ ವಿಶ್ವವಿದ್ಯಾಲಯಕ್ಕೆ ಅದರದೇ ಆದ ಘನತೆ-ಗೌರವಗಳಿವೆ. ವಿಶ್ವವಿದ್ಯಾಲಯದ ಆಡಳಿತ ನಿರ್ವಹಣೆಗಾಗಿ ಹಾಗೂ ವಿದ್ಯಾರ್ಥಿಗಳ ತೊಂದರೆಯನ್ನು ನಿವಾರಿಸುವುದಕ್ಕಾಗಿ ವಿಭಾಗ ಮಟ್ಟದಲ್ಲಿ ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ. ಎಂ. ವಿಶ್ವೇಶ್ವರಯ್ಯನವರ ಜನ್ಮಸ್ಥಳ ಮುದ್ದೇನಹಳ್ಳಿಯಲ್ಲಿ ಪೂರ್ಣಪ್ರಮಾಣದ ಮತ್ತು ವಿಶ್ವವಿದ್ಯಾಲಯಕ್ಕೆ ಸರಿಸಮನಾದ ತಾಂತ್ರಿಕ ಸಂಸ್ಥೆಯನ್ನು ನಡೆಸಲಾಗುತ್ತಿದೆ. ವಸ್ತುಸ್ಥಿತಿ ಹೀಗಿದ್ದರೂ ಸರಕಾರವು ಯಾವ ಪುರುಷಾರ್ಥಕ್ಕಾಗಿ  ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜಿಸುತ್ತಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಗಡಿಭಾಗದ ಅತಿಸೂಕ್ಷ್ಮ ಪ್ರದೇಶವಾಗಿರುವ ಬೆಳಗಾವಿಯಲ್ಲಿ ಸರಕಾರದ ಕಚೇರಿಗಳನ್ನು ಹೆಚ್ಚಿಸಬೇಕೇ ಹೊರತು ಸ್ಥಳಾಂತರಿಸುವುದು ಆತ್ಮಘಾತಿ ಕ್ರಮವಾಗುತ್ತದೆ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಪ್ರಕಟಣೆ  ಬಿಡುಗಡೆ ಮಾಡಿರುವ ಅವರು, ಸರಕಾರದ ಈ ಕ್ರಮದಿಂದ ಉತ್ತರ ಕರ್ನಾಟಕದ ಜನರಲ್ಲಿ ಅಭಿವೃದ್ಧಿಯ ವಿಷಯದಲ್ಲಿ ಸರಕಾರ ತಾರತಮ್ಯ ಮಾಡುತ್ತಿದೆ ಎಂಬ ಭಾವನೆ ಬಲವಾಗುತ್ತಿದೆ. ಕರ್ನಾಟಕದ ಸಮಗ್ರತೆ ಮತ್ತು ಏಕತೆಗೆ ಧಕ್ಕೆ ಉಂಟಾಗುವಂತಹ ಯಾವ ಕ್ರಮವನ್ನೂ ಸರಕಾರ ಕೈಕೊಳ್ಳಬಾರದು. ಅದರಲ್ಲೂ ಬೆಳಗಾವಿಯ ಗಡಿಸಮಸ್ಯೆ ಇತ್ಯರ್ಥವಾಗದ ಈ ಸಂದರ್ಭದಲ್ಲಿ ಸರಕಾರದ ಈ ನಿರ್ಣಯ ಸೂಕ್ತವಾದುದಲ್ಲ. ಸರಕಾರವು ತಾಂತ್ರಿಕ ವಿಶ್ವವಿದ್ಯಾಲಯದ ವಿಭಜನೆಯ ನಿರ್ಧಾರವನ್ನು ಹಿಂಪಡೆಯಬೇಕು. ಈ ದಿಶೆಯಲ್ಲಿ ಮುಖ್ಯಮಂತ್ರಿಗಳು ಸ್ಪಷ್ಟೀಕರಣ ನೀಡದಿದ್ದರೆ ಮತ್ತೊಂದು ಜನಾಂದೋಲನಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ. ಜನರಿಗೆ ವಿನಾಕಾರಣ ತೊಂದರೆಯನ್ನುಂಟು ಮಾಡುವ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯನ್ನುಂಟುಮಾಡುವ ಚಳವಳಿ ಅಥವಾ ಸಂಘರ್ಷಕ್ಕೆ ಸರಕಾರ ಅವಕಾಶ ಕಲ್ಪಿಸಿಕೊಡಬಾರದು ಎಂದು ಸ್ವಾಮಿಜಿ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ.

Related Articles

Back to top button