ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ವಿಶಿಷ್ಟ ಕಾರ್ಯಕ್ರಮಗಳಿಂದ ಹೆಸರು ಮಾಡಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಈ ಭಾನುವಾರ ಮತ್ತೊಂದು ವಿನೂತನ ಕಾರ್ಯಕ್ರಮ ಆಯೋಜಿಸುವ ಮೂಲಕ ಇತಿಹಾಸ ನಿರ್ಮಿಸಿದರು.
ಸುಮಾರು 20 ದಿನದ ಹಿಂದೆ ಅಭಯ ಪಾಟೀಲ ಆರಂಭಿಸಿದ್ದ ಹೊಸ ಕಾರ್ಯಕ್ರಮ ಹಳೆಯ ವಿದ್ಯಾರ್ಥಿಗಳಿಂದ ಶಾಲೆಗೆ ಬಣ್ಣ ಬಳಿಯುವ ಕಾರ್ಯಕ್ರಮದಲ್ಲಿ ಇಂದು ಮೂರು ತಲೆಮಾರಿನವರು ಮತ್ತು ಒಂದೇ ಮನೆಯ ನಾಲ್ವರು ಪಾಲ್ಗೊಳ್ಳುವ ಮೂಲಕ ಇತಿಹಾಸ ಬರೆದರು.
ಜೈಲ್ ಶಾಲೆ ಎಂದೇ ಕರೆಯಲ್ಪಡುವ ಇಲ್ಲಿಯ ವಡಗಾವಿಯ 14ನೇ ನಂಬರ್ ಶಾಲೆ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. 1948ರಿಂದ ಇಲ್ಲಿ ಕಲಿತ ಅನೇಕರು ಶಾಲೆಗೆ ಬಂದು ಬಣ್ಣ ಬಳಿಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಒಂದು ಕುಟುಂಬದ ತಂದೆ, ಮಗ, ಮೊಮ್ಮಗ ಮತ್ತು ಮೊಮ್ಮಗಳು ಬಣ್ಣ ಬಳಿಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಿತ್ತೂರು ಎನ್ನುವವರ ಕುಟುಂಬದ 8 ಜನ ಇದೇ ಶಾಲೆಯಲ್ಲಿ ಕಲಿತಿದ್ದು, ಅವರಲ್ಲಿ ನಾಲ್ವರು ಭಾನುವಾರ ಆಗಮಿಸಿ ಬಣ್ಣ ಬಳಿದರು.
ಇಂತದೊಂದು ವಿಶಿಷ್ಟ ಕಾರ್ಯಕ್ರಮ ಮಾಡುವ ಉದ್ದೇಶ ಬೇರೆ ಕಡೆಗಳಲ್ಲೂ ತಾವು ಕಲಿತ ಶಾಲೆಗಾಗಿ ಜನರು ಏನಾದರೂ ಕೊಡುಗೆ ನೀಡುವ ಪ್ರೇರಣೆ ನೀಡುವುದಾಗಿದೆ. ನಾವು ಬಣ್ಣ ಬಳಿಯುವ ಈ ಅಪರೂಪದ ಕಾರ್ಯಕ್ರಮಆರಂಭಿಸಿದ ನಂತರ ರಾಷ್ಟ್ರದ ಬೇರೆ ಬೇರೆ ಭಾಗಗಳಲ್ಲಿಯ ಜನರು ಪೋನ್ ಮಾಡಲು ಆರಂಭಿಸಿದ್ದಾರೆ. ಅನೇಕ ಕಡೆ ಹಳೆಯ ವಿದ್ಯಾರ್ಥಿಗಳು ಈಗಾಗಲೆ ಬಣ್ಣ ಬಳಿಯಲು ಆರಂಭಿಸಿದ್ದಾರೆ ಎಂದು ಅಭಯ ಪಾಟೀಲ ಪ್ರಗತಿವಾಹಿನಿಗೆ ತಿಳಿಸಿದರು.
ಕಳೆದ 20 ದಿನದಿಂದ ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆಬಣ್ಣ ಬಳಿಯಲಾಗುತ್ತಿದೆ. ಕ್ಷೇತ್ರದ ಸುಮಾರು 60 ಶಾಲೆಗಳಿಗೆ ಬಣ್ಣ ಬಳಿಯಲಾಗುವುದು. ಅನೇಕರು ತಾವಾಗಿಯೇ ಸ್ವಂಯಂ ಸ್ಫೂರ್ತಿಯಿಂದ ಬಂದು ಪಾಲ್ಗೊಳ್ಳುತ್ತಿದ್ದಾರೆ ಎಂದು ಗಜಾನನ ಗುಂಜೇರಿ ತಿಳಿಸಿದರು.
ವಡಗಾವಿ ಭಾಗದ ವೃದ್ದರು, ಮಹಿಳೆಯರು ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಅಪರೂಪದ ಕಾರ್ಯಕ್ರಮ ನೋಡಿ ಕೆಲವು ಹಿರಿಯರು ಸ್ಥಳದಲ್ಲೇ ಕಿಸೆಯಲ್ಲಿದ್ದಷ್ಟು ಹಣವನ್ನು ತೆಗೆದು ದೇಣಿಗೆ ನೀಡುವ ಮೂಲಕ ಭಾವಸ್ಪರ್ಷಿ ವಾತಾವರಣ ಮೂಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ