ಸತ್ಯ ಘಟನೆ
ಪೂರ್ಣಿಮಾ ಹೆಗಡೆ
ಇಬ್ಬರು ನ್ಯಾಯವಾದಿಗಳ ವಾಗ್ವಾದ ಜೋರಾಗಿ ನಡೆಯುತ್ತಿತ್ತು. ಅದು ವಾದ ವಿವಾದವಲ್ಲ ಎನ್ನುವುದು ಕಟಕಟೆಯಲ್ಲಿ ನಿಂತ ಸಾಕ್ಷಿಯನ್ನು ನೋಡಿ ತಿಳಿಯಿತು. ಸರಕಾರಿ ವಕೀಲರು ಭಾಗಿಯಾಗಿದ್ದು ನೋಡಿ, ಅದು ಕ್ರಿಮಿನಲ್ ಕೇಸ್ ಅಂತ ಅನಾಯಾಸವಾಗಿ ದ್ರಷ್ಟಿ ಅಪರಾಧಿಯ ಕಟಕಟೆಯತ್ತ ತಿರುಗಿತು. ಒಂದು ಕ್ಷಣ ದಂಗಾಗಿದ್ದಂತೂ ನಿಜ.
ತುಂಬಾ ಚಂದದ ಮುಗ್ಧ ಮುಖದ ಸಣ್ಣ ವಯಸ್ಸಿನ ಹೆಂಗಸು. ವಯಸ್ಸು 30 ಎಂದು ಅಂದಾಜು ಮಾಡಿದೆ. 6 ವರ್ಷದ ಮಗನಿದ್ದಾನೆಂದರೆ, 30 ಆಗಿರಬಹುದು.
ಸರಕಾರಿ ವಕೀಲರು ಡಿಫೆನ್ಸ ಲಾಯರಿಗೆ ಕೇಳ್ತಾ ಇದ್ದರು “ನೀವೇನು ಮೋಟಿವ್ ಇತ್ತಂತೀರೀ ವಕೀಲ್ರೆ”, ನಾವು 307(attempt to murder) ನ್ನೇ ಒಪ್ಪೋದಿಲ್ಲ” ಎಂದು ಡಿಫೆನ್ಸ ಲಾಯರ್ ಅಂತಿದ್ದ್ರು. ಆದರೆ ನನ್ನ ಮನಸ್ಸಿನಲ್ಲಿ ಪ್ರಶ್ನೆಗಳ ಮಹಾಪೂರ, ಯಾರೀಕೆ? ಯಾರೀತ? ಏನು ಸಂಬಂಧ? ಏನು ಕೇಸು? ??? ಕುತೂಹಲ ತಣಿಯಲು ಅಲ್ಲೇ ಕುಳಿತು ಕೊಳ್ಳುವುದು ಅನಿವಾರ್ಯವಾಗಿತ್ತು, ನಾಲ್ಕೈದು ಪ್ರಶ್ನೆ ಕಿವಿಗೆ ಬಿದ್ದರೂ ಸಾಕು. ವಿಷಯ ಅರಿಯಬಹುದು…
ಕಟಕಟೆಯಲ್ಲಿರುವ ವ್ಯಕ್ತಿ ಕುಮಾರ, ಅಪರಾಧಿ ಸ್ಥಾನದಲ್ಲಿರುವವಳು ಸ್ನೇಹಿತನ ಪತ್ನಿ, ಜೋಸ್ನಾ, ಕುಮಾರ ಮತ್ತು ಜೋಸ್ನಾಳ ಪತಿಗೆ ಒಂದೇ ಕೇಡರ್ ಕೆಲಸ, ವಸತಿಯು ಸಮೀಪ, ಕೌಟುಂಬಿಕ ಸ್ನೇಹವೂ ಇತ್ತು, ಮಕ್ಕಳಿಬ್ಬರೂ ಸೇರಿ ಆಟ ಪಾಠ, ಒಟ್ಟಾರೆ ಕೌಟುಂಬಿಕ ಸಂಬಂಧ ಏರ್ಪಟ್ಟಿತ್ತು. ಹೀಗಿರುವಾಗ ಅದ್ಯಾರ ಕಾಕ ದೃಷ್ಟಿ ಬಿತ್ತೋ ತಿಳಿಯದು, ಇದ್ದಕ್ಕಿದ್ದಂತೆ ಜೋಸ್ನಾ ಬದಲಾಗ ತೊಡಗಿದಳು. ಮೊದಲಿನಂತೆ ಕುಮಾರನ ಕುಟುಂಬದ ಜೊತೆ ಆತ್ಮೀಯತೆ ಇರಲಿಲ್ಲ. ಮಗನನ್ನ ಕುಮಾರನ ಮಗಳ ಜೊತೆ ಆಡಲು ಬಿಡುತ್ತರಲಿಲ್ಲ. ಎರಡೂ ಕುಟುಂಬಗಳು ಸೇರುವ ಅವಕಾಶವನ್ನ ಏನೋ ನೆವದಿಂದ ತಪ್ಪಿಸುತ್ತಿದ್ದಳು. ಅದರ ಅರಿವು ಕುಮಾರನ ಮನೆಯವರಿಗೂ ಬಂದಿತ್ತು. ಕಾರಣ ಮಾತ್ರ ಯಾರಿಗೂ ತಿಳಿಯುತ್ತಿರಲಿಲ್ಲ.
ಒಂದು ರಾತ್ರಿ, ತಡವಾಗಿ ಮನೆಗೆ ಬರುತ್ತಿದ್ದ ಕುಮಾರನಿಗೆ ಸ್ನೇಹಿತನ ಮನೆಯಲ್ಲಿ ಬೆಂಕಿ ಕಂಡು ಆಕಡೆ ಧಾವಿಸಿದ್ದ. ತಾಯಿಮಗ ಹೊರಗಡೆ ನಿಂತು ಸಹಾಯಕ್ಕೆ ಇವನನ್ನ ಕರೆಯುತ್ತಿದ್ದರು. ಒಳಹೋದ ಕುಮಾರನಿಗೆ ಮಲಗುವ ಕೋಣೆಯಲ್ಲಿ ಬೆಂಕಿ ಬಿದ್ದಿರುವುದು ತಿಳಿದು ಬಂತು. ಬಾಗಿಲು ತೆಗೆದು ನೊಡಿದಾಗ ಆಘಾತವಾಗಿತ್ತು. ಸ್ನೇಹಿತ ಹಾಸಿಗೆಯಲ್ಲಿ ಬೆಂಕಿಯೊಂದಿಗೆ ಸೆಣೆಸುತ್ತಿದ್ದ. ಸುಮಾರು ಭಾಗ ಸುಟ್ಟು ಕೊಂಡಿದ್ದ ಸ್ನೇಹಿತ. ಬೆಂಕಿ ಆರಿಸಿ, ಸ್ನೇಹಿತನನ್ನ ಆಸ್ಪತ್ರಗೆ ಸೇರಿಸಿ ಪೋಲೀಸರಿಗೆ ದೂರಿತ್ತ. ಪೋಲೀಸರು ತನ್ನನ್ನ ಕೇಳಿದ ಪ್ರಶ್ನೆಗೆ ತಾನು ಕೊಟ್ಟ ಉತ್ತರದಿಂದ ಹೌಹಾರಿ ಹೋದ, ಮಲಗುವ ಕೋಣೆಯ ಬಾಗಿಲು ಹೊರಗಡೆಯಿಂದ ಅಗಳಿ ಹಾಕಿತ್ತು.!!!!!!. ಅಂದರೆ???
ತನ್ನ ಗಂಡ ಮತ್ತು ಕುಮಾರನ ಹೆಂಡತಿಯ ಮೇಲೆ ಜೋಸ್ನಾಳಿಗೆ ಅನುಮಾನದ ಕೀಟ ಕೊರೆಯಲಾರಂಭಿಸಿತು. ದಿನೇ ದಿನೇ ಒಳ ಒಳಗೆ ಬೇಗುದಿ, ಬೆಂದು ಬೆಂದು ವಿವೇಚನೆ ಕಳೆದುಕೊಂಡ ಜೋಸ್ನಾ ಒಂದು ರಾತ್ರಿ ಪತಿ ಮತ್ತು ಮಗ ಘಾಡ ನಿದ್ರೆಯಲ್ಲಿರುವಾಗ ಮಗನನ್ನು ತಂದು ಹೊರಗಡೆ ಮಲಗಿಸಿ ಗಂಡನ ಹಾಸಿಗೆಗೆ ಬೆಂಕಿ ಹಾಕಿ ಹೊರಗಿನಿಂದ ಅಗಳಿ ಹಾಕಿದ್ದಳು.
ಕೋಪದ ಕೈಗೆ ಬುದ್ಧಿ ಕೊಟ್ಟು, ವಿವೇಚನೆಯನ್ನು ಕಳೆದುಕೊಂಡ ಹೆಂಗಸು ಮಾಡಿದ್ದೇನು?
ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟದಲ್ಲಿ ತಂದೆ…. ಕೊಲೆ ಅಪಾದನೆಯಲ್ಲಿ ಜೈಲಿನಲ್ಲಿರುವ ತಾಯಿ…. ಆ ಆರು ವರ್ಷದ ಕಂದಮ್ಮನ ಗತಿ ಏನು? ಅದು ಮಾಡಿದ ತಪ್ಪಾದರೂ ಏನು?
ಅಪ್ಪ ಅಮ್ಮ ಜಗಳದಲ್ಲಿ…..
(ಲೇಖಕಿ ಬೆಳಗಾವಿಯ ಹಿರಿಯ ನ್ಯಾಯವಾದಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ