Latest

ವಿಶ್ವ ಕಾಂಗರೂ ಮಾದರಿ ಆರೈಕೆ ದಿನಾಚರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಅಭಿವೃದ್ದಿ ಹೊಂದುತ್ತಿರುವಂತಹ ನಮ್ಮ ದೇಶದಲ್ಲಿ ಶೇಕಡಾ ೪೫ ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ರೋಗಗ್ರಸ್ಥ ಹಾಗೂ ಮರಣವನ್ನಪ್ಪುತ್ತಿವೆ. ಆದ್ದರಿಂದ ತಾಯ್ತನದ ಬಂಧವನ್ನು ಬಿಗಿಗೊಳಿಸಲು ಕಾಂಗರೂ ಮಾದರಿ ಆರೈಕೆ ಅತ್ಯಗತ್ಯವಾಗಿದೆ ಎಂದು ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕ ಡಾ. ಹೆಚ್ ಬಿ ರಾಜಶೇಖರ ಆತಂಕ ವ್ಯಕ್ತಪಡಿಸಿದರು.

ಅವರು ಇಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಚಿಕ್ಕಮಕ್ಕಳ ವಿಭಾಗ ಹಾಗೂ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದಿಂದ  ವಿಶ್ವ ಕಾಂಗರೂ ಮಾದರಿ ಆರೈಕೆ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ‍್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ತಾಯಿ ಮಗುವಿನ ಭಾಂದವ್ಯ ಅನನ್ಯವಾದುದು. ಅದು ಬಿಡಿಸಲಾರದ ಬಂಧನವಾಗಿದೆ. ಅದನ್ನು ಇನ್ನಷ್ಟು ಗಟ್ಟಿಗೊಳಿಸಲು ಕಾಂಗರೂ ಮಾದರಿ ಆರೈಕೆ ಅತ್ಯಗತ್ಯವಾಗಿದೆ. ಇದು ಅನಾದಿ ಕಾಲದಿಂದಲೂ ರೂಢಿಯಲ್ಲಿದ್ದರೂ ಅದು ಪ್ರಗತಿಹೊಂದುತ್ತ, ಸಂಶೋಧನೆಗೊಳಪಡುತ್ತ ಇಂದು ತನ್ನದೇ ವಿವಿಧ ರೂಪುರೇಷೆಗಳಿಂದ ಶ್ರೀಮಂತವಾಗಿದೆ. ಅದನ್ನು ಉಪಯೋಗಿಸಿಕೊಂಡು ಆರೋಗ್ಯಯುತ ತಾಯ್ತನದ ಸುಖವನ್ನು ಅನುಭವಿಸಲು ಅನುವು ಮಾಡಿಕೊಡಿ  ಎಂದು ತಾಯಂದಿರು ಮತ್ತು ಆಶಾ ಕಾರ್ಯಕರ್ತೆಯರಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕ ಡಾ. ಎಸ್ ಸಿ ಧಾರವಾಡ ಮಾತನಾಡುತ್ತ, ಆರೋಗ್ಯ ಶಿಕ್ಷಣವೆನ್ನುವುದು ಜೀವ ಉಳಿಸುವ ಜ್ಞಾನವಾಗಿದೆ. ಇದು ಶಿಶುವಿನ ಜನನದಿಂದ ಹಿಡಿದು ಬೆಳೆದು ದೊಡ್ಡದಾಗಿ ಆರೋಗ್ಯಯುತ ಜೀವನಹೊಂದಿ ಮರಣ ಹೊಂದುವವರೆಗಿನ ಪಯಣವನ್ನು ಸರಾಗಗೊಳಿಸುವ ದಾರಿದೀಪವಾಗಿದೆ. ಕಾಂಗರೂ ಮಾದರಿ ಆರೈಕೆ ಎನ್ನುವುದು ಕಡಿಮೆ ತೂಕ ಇರುವ ಮಕ್ಕಳು ಮತ್ತು ದಿನ ತುಂಬದೆ ಹೆರಿಗೆ ಆದ ಮಕ್ಕಳನ್ನು ತನ್ನ ಚರ್ಮಕ್ಕೆ ಚರ್ಮ ತಾಗುವಂತೆ ತನ್ನ ಎದೆಯ ಮೇಲೆ ಹಾಕಿಕೊಂಡು ೬ ರಿಂದ ೮ ಘಂಟೆಗಳ ಕಾಲ ಆರೈಕೆ ಮಾಡಬೇಕು. ಇದರಿಂದ ತಾಯಿ ಮತ್ತು ಮಗುವಿನ ಬಾಂಧವ್ಯ ಹೆಚ್ಚುವುದಲ್ಲದೇ ಮಗುವಿನ ಉಸಿರಾಟ ಕ್ರಿಯೆಗೆ ಸಹಕಾರಿಯಾಗಿ ದೈಹಿಕ ಚಟುವಟಿಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ಗುಣಾತ್ಮಕ ಬೆಳವಣಿಗೆಯಾಗಿ ಸಮಾಜಕ್ಕೆ ಒಬ್ಬ ಒಳ್ಳೆಯ ವ್ಯಕ್ತಿಯನ್ನು ಕೊಡುಗೆಯಾಗಿ ನೀಡಬಹುದು ಎಂದರು.

ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಎಮ್ ಎಸ್ ರಡ್ಡಿ ಕಾಂಗರೂ ಮಾದರಿ ಆರೈಕೆಯ  ಅಭಿವೃದ್ದಿ ಬೆಳವಣಿಗೆಗಳ ಬಗ್ಗೆ ಪರಿಚಯಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿದ್ದ ಹಿರಿಯ ಮಕ್ಕಳ ಮಕ್ಕಳ ತಜ್ಞ ಡಾ. ಸುರೇಶ ಕಾಖಂಡಕಿ ಇಂಪೊರ್ಟೆನ್ಸ್ ಆಂಡ್ ಬೆನಿಫಿಟ್ಸ್ ಆಫ್ ಕೆಎಮ್‌ಸಿ ಇನ್ ಲೊ ಬರ್ತ್ ವೇಟ್ ಬೇಬಿಸ್ ಎಂಬ ವಿಷಯದ ಬಗ್ಗೆ ಹಾಗೂ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ. ರಾಜೇಶ್ವರಿ ಕಡಕೋಳ, ರೋಲ್ ಆಂಟೆನಟಲ್ ಕೇರ್ ಇನ್ ಕಾಂಗರೂ ಮದರ ಕೇರ್ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕೆ ಎಲ್ ಇ ಹೋಮಿಯೋಪಥಿಕ್ ಕಾಲೇಜಿನ ಪ್ರಾಂಶುಪಾಲ ಡಾ. ಎಮ್ ಎ ಉಡಚನಕರ ಮತ್ತು ಕೆ ಎಲ್ ಇ ಸೆಂಟಿನರಿ ಇನ್ಸಿಟ್ಯುಟ್ ಆಪ್ ನರ್ಸಿಂಗ ಸೈನ್ಸನ ಪ್ರಾಂಶುಪಾಲ ವಿಕ್ರಾಂತ ನೆಸರಿ ಮತ್ತು ವಿದ್ಯಾರ್ಥಿಗಳು ಹಾಗೂ  ತಜ್ಞ ವೈದ್ಯರುಗಳಾದ ಡಾ.ಅನಿತಾ ಮೋದಗೆ, ಸೌಮ್ಯ ವೇರ್ಣೇಕರ, ಡಾ.ಸಂತೋಷಕುಮಾರ ಕರಮಸಿ, ಡಾ.ಬಸವರಾಜ ಕುಡಸೋಮನ್ನವರ ಹಾಗೂ ಸ್ತ್ರೀ ರೋಗ ಹಾಗೂ ಪ್ರಸೂತಿ ವಿಭಾಗದ ವೈದ್ಯರುಗಳಾದ ಡಾ. ವಿದ್ಯಾ ಕಾಖಂಡಕಿ, ಡಾ. ಸತೀಶ ಧಾಮನಕರ, ಡಾ. ರವೀಂದ್ರ ನರಸಾಪುರೆ, ಡಾ. ಗೀತಾಂಜಲಿ ತೋಟಗಿ, ಡಾ.ದರ್ಶಿತ್ ಶೆಟ್ಟಿ, ಯು ಎಸ್ ಎಮ್ ಕೆ ಎಲ್ ಇ ಯ ಸಮುದಾಯ ವಿಭಾಗದ ಡಾ.ಮೂಹನ ಸುಂಕದ ಹಾಗೂ ಆಸ್ಪತ್ರೆಯ ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಭಾವತಿ ಪಾಟೀಲ ನಿರೂಪಿಸಿದರು. ಹಿರಿಯ ಮಕ್ಕಳ ತಜ್ಞ ಡಾ. ಸುರೇಶ ಕಾಖಂಡಕಿ ಸ್ವಾಗತಿಸಿದರು. ಡಾ. ಅನುರಾಧಾ ಉಗಲೆ ವಂದಿಸಿದರು. ಕಾರ್ಯಕ್ರಮದಲ್ಲಿ ೭೦ ಕ್ಕೂ ಅಧಿಕ ಆಶಾ ಕಾರ್ಯಕರ್ತೆಯರು, ೫೦ಕ್ಕೂ ಅಧಿಕ ಜಿಎನ್‌ಎಮ್ ವಿದ್ಯಾರ್ಥಿಗಳು ಹಾಗೂ ೧೬ ಹೋಮ್ ನರ್ಸಿಂಗ್ ಕೋರ್ಸ್‌ನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Home add -Advt

Related Articles

Back to top button