ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಶಾಸಕ ಗಣೇಶ ಹುಕ್ಕೇರಿ ಮಾಡಿದ ತಮಾಷೆಯ ಮಾತೊಂದು ಗಂಭೀರತೆ ಪಡೆದು ರಾಜಕೀಯದಲ್ಲಿ ಗೊಂದಲ ಸೃಷ್ಟಿಸಿದೆ.
ಭಾನುವಾರ ಬೆಳಗ್ಗೆ ಟಿವಿ ವಾಹಿನಿಯೊಂದರ ವರದಿಗಾರರು ಕರೆ ಮಾಡಿದ್ದರು. ತಾವು ಬಿಜೆಪಿ ಸೇರುತ್ತೀರಿ ಎನ್ನುವ ವದಂತಿ ಇದೆಯಲ್ಲ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಗಣೇಶ, ಹಂಡ್ರೆಡ್ ಪರ್ಸೆಂಟ್ ಎಂದಿದ್ದಾರೆ. ಯಾವಾಗ ಸೇರುತ್ತೀರಿ ಎಂದು ಪ್ರಶ್ನಿಸಿದಾಗ, ಇದೇ 19ರಂದು, ಯಡಿಯೂರಪ್ಪ ನೇತೃತ್ವದಲ್ಲಿ ಸೇರುತ್ತೇನೆ ಎಂದಿದ್ದಾರೆ. ಯಾರ್ಯಾರು ಹೋಗುತ್ತೀರಿ ಎಂದಾಗ, ಬೇರೆಯವರದ್ದೆಲ್ಲ ಗೊತ್ತಿಲ್ಲ, ನಾನಂತೂ ಹೋಗುತ್ತೇನೆ ಎಂದು ಹೇಳಿದ್ದಾರೆ.
ಇದರ ಆಡಿಯೋ ಕ್ಲಿಪಿಂಗ್ ಟಿವಿ ವಾಹಿನಿಯಲ್ಲಿ ಬಿಗ್ ಬ್ರೇಕಿಂಗ್ ಎಂದು ಬಿತ್ತರವಾಗುತ್ತಿದ್ದಂತೆ ಎಲ್ಲೆಡೆ ಭಾರೀ ಚರ್ಚೆಯಾಗತೊಡಗಿತು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದೆ ಶೋಭಾ ಕರಂದ್ಲಾಚೆ, ಬಿಜೆಪಿಗೆ ಯಾರು ಬರುವುದಿದ್ದರೂ ಸ್ವಾಗತ. ಆದರೆ ಗಣೇಶ ಹುಕ್ಕೇರಿ ಕಾಂಗ್ರೆಸ್ ಬಿಟ್ಟ ಮೇಲೆ ನಾವು ಸ್ವಾಗತಿಸುತ್ತೇವೆ. ಅಲ್ಲಿಯವರೆಗೆ ನಮಗೂ ಅವರ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ ಎಂದರು.
ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಅಪ್ಪ-ಮಗ (ಗಣೇಶ ಹುಕ್ಕೇರಿ ಮತ್ತು ಪ್ರಕಾಶ ಹುಕ್ಕೇರಿ) ಇಬ್ಬರನ್ನೂ ನಾನು ಹಲವು ವರ್ಷದಿಂದ ನೋಡುತ್ತ ಬಂದಿದ್ದೇನೆ. ಅವರು ಯಾವತ್ತೂ ಸತ್ಯ ಹೇಳಿದವರಲ್ಲ. ಈಗಲೂ ಕಾಂಗ್ರೆಸ್ ಪಕ್ಷಕ್ಕೆ ಬ್ಲ್ಯಾಕ್ ಮೇಲ್ ಮಾಡೋಕೆ ಈ ರೀತಿ ಹೇಳಿರಬಹುದು. ಈ ವಿಷಯ ನಮಗಂತೂ ಗೊತ್ತಿಲ್ಲ ಎಂದರು.
ಅರಣ್ಯ ಸಚಿವ ಸತೀಶ್ ಜಾರಕಿಹೊಳಿ, ಇದೆಲ್ಲ ಸುಳ್ಳು. ಯಾರೂ ಕಾಂಗ್ರೆಸ್ ಬಿಡುವುದಿಲ್ಲ. ಬಿಜೆಪಿಯವರು ಕಳೆದ 6 ತಿಂಗಳಿನಿಂದಲೂ ಪ್ರಯತ್ನ ಮಾಡುತ್ತಲೇ ಇದ್ದಾರೆ ಎಂದರು.
ಸಂಸದ ಪ್ರಕಾಶ ಹುಕ್ಕೇರಿ, ನಾನಾಗಲಿ, ಗಣೇಶನಾಗಲಿ ಕಾಂಗ್ರೆಸ್ ಬಿಡುವುದಿಲ್ಲ. ನಾವು ಲೋಕಸಭೆ ಚುನಾವಣೆಗೆ ತಯಾರಿ ಮಾಡುತ್ತಿದ್ದೇವೆ. ಬಿಜೆಪಿ ಸೇರುವುದೆಲ್ಲ ವದಂತಿ. ಅದಕ್ಕೆ ಮಹತ್ವ ಕೊಡಬೇಡಿ ಎಂದರು.
ಕೊನೆಗೆ ಗಣೇಶ ಹುಕ್ಕೇರಿ ಸ್ಪಷ್ಟನೆ ನೀಡಿ, ನಾನು ತಮಾಷೆಗಾಗಿ ಹಾಗೆ ಹೇಳಿದ್ದೇನೆ. ನಮಗೆ ಕಾಂಗ್ರೆಸ್ ಎಲ್ಲವನ್ನೂ ಕೊಟ್ಟಿದೆ. ಹಾಗಾಗಿ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಹೋಗುವುದಿಲ್ಲ ಎಂದ ಮೇಲೆ ದಿನಾಂಕ ನಿಗದಿಪಡಿಸುವ ಪ್ರಶ್ನೆಯೂ ಬರುವುದಿಲ್ಲ ಎಂದರು.
ಒಟ್ಟಾರೆ, ಅವರ ತಮಾಷೆ ಪ್ರಸ್ತುತ ರಾಜಕೀಯ ಗೊಂದಲಗಳಿಗೆ ಮತ್ತಷ್ಟು ಗೊಂದಲವನ್ನು ಸೇರಿಸಿ ಎಲ್ಲೆಡೆ ಚರ್ಚೆಗೆ ಕಾರಣವಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ