*ವಂದೇ ಭಾರತ್ ರೈಲು ಬೆಳಗಾವಿಗೆ ವಿಸ್ತರಿಸಲು ತಾಂತ್ರಿಕ ಸಮಸ್ಯೆ; ಮಾಹಿತಿ ನೀಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಂದೇ ಭಾರತ್ ರೈಲು ಬೆಳಗಾವಿ ವರೆಗೂ ಬರುವುದಕ್ಕೆ ಕೆಲವು ತಾಂತ್ರಿಕ ಸಮಸ್ಯೆ ಇದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.
ಶುಕ್ರವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಂದೇ ಭಾರತ್ ರೈಲು ಬೆಂಗಳೂರಿನಿಂದ 110 ಕಿ.ಮೀ ವೇಗದಲ್ಲಿ ಧಾರವಾಡದ ಮಾರ್ಗದಲ್ಲಿ ಸಂಚರಿಸುತ್ತದೆ. ಅದು ಬೆಂಗಳೂರಿನಿಂದ ಧಾರವಾಡಕ್ಕೆ ಬರಲು ಆರೂವರೆ ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಅದನ್ನು 130 ಕಿ.ಮೀ ವೇಗ ಮಾಡಿ ನಾಲ್ಕುವರೆಯಿಂದ ಐದು ಗಂಟೆಯವರೆಗೆ ಪ್ರಯಾಣ ಮುಗಿಸುವ ಯೋಜನೆ ರೂಪಿಸಲಾಗುತ್ತಿದೆ. ಧಾರವಾಡ ದಾಟಿ ಬೆಳಗಾವಿಗೆ ತೆಗೆದುಕೊಳ್ಳಬೇಕು ಎನ್ನುವಾಗ ನಮ್ಮಲ್ಲಿ ಡಬಲಿಂಗ್ ಕಾಮಗಾರಿ ಮಾಡುತ್ತಿರುವುದರಿಂದ ವಂದೇ ಭಾರತ್ ರೈಲನ್ನು ಇಲ್ಲಿಗೆ ತರಲು ಸಾಧ್ಯವಾಗಲಿಲ್ಲ ಎಂದರು.
ಈಗ ಒಂದು ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿದ್ದಾರೆ. ಧಾರವಾಡದಿಂದ ಬೆಳಗಾವಿಗೆ ಬರಬೇಕಾದರೆ ಸುಮಾರು ಎರಡೂವರೆ ತಾಸು ಸಮಯ ತೆಗೆದುಕೊಳ್ಳುತ್ತಿದೆ. ಅಲ್ಲಿಯ ಸಮಯ ಇಲ್ಲಿ ಕವರ್ ಮಾಡಲು ಸಾಧ್ಯವಾಗುತ್ತಿಲ್ಲ. ಕಾರಣ ಟ್ರಾö್ಯಕ್ ಕರವ್ ಇರುವುದ ರಿಂದ ಇಲ್ಲಿ ಸಮಯ ವಾಗುತ್ತಿಲ್ಲ. ಅದು ಬಗೆ ಹರಿದ ಮೇಲೆ ಇಲ್ಲಿಗೆ ತರಲಾಗುವುದು ಎಂದರು.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ರಚನೆಯಾಗಿ 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಕಾಲ ಘಟಕದಲ್ಲಿ ಮಾಡಿರುವ ಸಾಧನೆಯನ್ನು ಮೆಲಕು ಹಾಕಲು ಒಂದು ತಿಂಗಳ ಕಾಲ ವಿಶೇಷ ಕಾರ್ಯಕ್ರಮ ಭಾನುವಾರ ಗಾಂಧಿ ಭವನದಲ್ಲಿ ಮಾಡಲಾಗುತ್ತಿದೆ ಎಂದರು.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಕೇಂದ್ರದ ಸಚಿವರಿಬ್ಬರು ಆಗಮಿಸಲಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನೀಡಿದ ಭರವಸೆಯಂತೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ, ಭದ್ರೀನಾಥ, ಕೇದಾರನಾಥ, ಉಜ್ಜಯಿನಿಯಲ್ಲಿ ಮಾಡಿರುವ ಕಾರಿಡಾರ್, ನೂತನ ಸಂಸತ್ತಿನ ಕಟ್ಟಡ ಲೋಕಾಪರ್ಣೆ, ಆನ್ ಲೈನ್ ವ್ಯವಹಾರ, ಉಜ್ವಲ ಯೋಜನೆ ಸೇರಿದಂತೆ ಸಾಕಷ್ಟು ಕೊಡುಗೆಯನ್ನು ದೇಶದ ಜನರಿಗೆ ನೀಡಿದ್ದಾರೆ ಎಂದರು.
ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದು ಹಾಕಿದ್ದು, ತ್ರಿವಳಿ ತಲಾಖೆ ನಿಷೇಧ, ನಾಗರಿಕ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದೇವೆ ಎಂದರು.
ಮುದ್ರಾ ಯೋಜನೆ, ಸ್ಟಾಟ್೯ ಅಪ್ ಇಂಡಿಯಾ, ಪಿಎಂ ಕಿಸಾನ್ ನಿಧಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ದೇಶದ ಎಲ್ಲ ಜನರಿಗೆ ಜನ್ ಧನ್ ಖಾತೆ, ಅಟಲ್ ಪಿಂಚಣಿ ಯೋಜನೆ, ಜಲಜೀವನ ಮಿಷನ್ ಯೋಜನೆ, ರಕ್ಷಣಾ ಕ್ಷೇತ್ರದಲ್ಲಿ ಅನೇಕ ಘಟನೆಗಳು ನಡೆದವು. ಬೇರೆ ಬೇರೆ ದೇಶದಲ್ಲಿ ಭೂಕಂಪ, ಯುದ್ಧ ನಡೆದ ಸಂದರ್ಭದಲ್ಲಿ ಕೇಂದ್ರ ಸರಕಾರ ಭಾರತದ ಜನರ ರಕ್ಷಣೆ ಮಾಡಿ ದೇಶದ ಜನರ ರಕ್ಷಣೆಗೆ ಮೋದಿ ಕಂಕಣ ಬದ್ಧರಾಗಿದ್ದಾರೆ ಎಂದರು.
ಕೋವಿಡ್ ಸಂದರ್ಭದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ನಡೆದುಕೊಂಡಿದ್ದು ಜನತೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಭಾರತದ ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ ಶ್ರೇಯ ಮೋದಿ ಅವರಿಗೆ ಸಲ್ಲುತ್ತದೆ ಎಂದರು.
ಸಂಸದೆ ಮಂಗಳಾ ಅಂಗಡಿ, ಬೆಳಗಾವಿ ಬಿಜೆಪಿ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ನಗರ ಘಟಕದ ಅಧ್ಯಕ್ಷ ಅನಿಲ್ ಬೆನಕೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ