ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಹಾನಗಲ್ಲ ಶ್ರೀ ಗುರುಕುಮಾರ ಮಹಾಶಿವಯೋಗಿಗಳವರ ಕರಕಮಲ ಸಂಜಾತರಾದ ಕನ್ನಡ ನಾಡಿಗೆ ನಾಗನೂರು ಸ್ವಾಮಿಗಳೆಂದು ಪ್ರಸಿದ್ಧರಾದ ಶ್ರೀ ಶಿವಬಸವ ಮಹಾಸ್ವಾಮಿಗಳು ಅನ್ನದಾಸೋಹ, ಜ್ಞಾನದಾಸೋಹ, ಸಂಸ್ಕಾರ ದಾಸೋಹವನ್ನು ಸಮಾಜದ ಜನತೆಗೆ ಕರುಣಿಸಿ ತ್ರಿವಿಧ ದಾಸೋಹಿಗಳಾಗಿದ್ದಾರೆ. ಸಮಾಜ ಬದಲಾವಣೆ ಮಾಡಿದ ಕ್ರಾಂತಿಪುರುಷರಾಗಿದ್ದಾರೆ. ಇವರಿಂದ ನಾಗನೂರುಮಠ ನಾಡಗುರುವಿನ ಮಠವಾಯಿತು ಎಂದು ಶೇಗುಣಿಸಿ ವಿರಕ್ತಮಠದ ಉತ್ತರಾಧಿಕಾರಿ ಶ್ರೀ ಮಹಾಂತ ದೇವರು ಹೇಳಿದರು.
ಬೆಳಗಾವಿಯ ಶ್ರೀ ಕಾರಂಜಿಮಠದಲ್ಲಿ ೨೨೦ನೇ ಶಿವಾನುಭವ ಕಾರ್ಯಕ್ರಮದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ನಾಗನೂರ ಅಜ್ಜನವರ ಸಮಾಜ ಸೇವೆ ಕುರಿತು ಅವರು ಮಾತನಾಡಿದರು.
ಸಮಾರಂಭದ ಸಾನಿಧ್ಯವಹಿಸಿದ್ದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು, ಪ್ರತಿವರ್ಷ ಡಿಸೆಂಬರ್ ಮೊದಲನೇ ಸೋಮವಾರ ಕಾರಂಜಿಮಠದಲ್ಲಿ ನಾಗನೂರು ಅಜ್ಜನವರ ಜಯಂತಿಯನ್ನು ಆಚರಿಸುತ್ತೇವೆ. ಶ್ರೀ ಶಿವಬಸವ ಸ್ವಾಮಿಗಳು, ಶ್ರೀ ಪ್ರಭುಸ್ವಾಮಿಗಳಿಬ್ಬರೂ ನಮಗೆ ಗುರುಗಳಿದ್ದಂತೆ, ಇವರಿಬ್ಬರ ಇಚ್ಚಾಶಕ್ತಿಯನ್ನು ಕ್ರಿಯಾಶಕ್ತಿಯನ್ನಾಗಿ ಪರಿವರ್ತಿಸಿ, ಶ್ರೀ ರುದ್ರಾಕ್ಷಿಮಠದ ಶಿಕ್ಷಣ ಸಂಸ್ಥೆಗಳನ್ನು ವಿಸ್ತಾರೋನ್ನತವಾಗಿ ಬೆಳೆಸಿದವರು ಶ್ರೀ ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮಿಗಳವರು ಎಂದು ಕಾರಂಜಿಮಠದ ಶ್ರೀಗಳು ಹೇಳಿದರು.
ಶ್ರೀ ಶಿವಯೋಗಿ ದೇವರು ನೇತೃತ್ವವಹಿಸಿದ್ದ ಈ ಸಮಾರಂಭದಲ್ಲಿ ಸಾಹಿತ್ಯ ಸಾಧನೆಗಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ ರಮಣಶ್ರೀ ಪ್ರಶಸ್ತಿ ಪುರುಷ್ಕೃತರಾದ ಸಾಹಿತಿ ಪ್ರಕಾಶ ಗಿರಿಮಲ್ಲನವರನ್ನು ಶ್ರೀಗಳು ಸನ್ಮಾನಿಸಿದರು.
ಬೆಳಗಾವಿಯ ಲಿಂಗಾಯತ ಸಂಘಟನೆಯ ಅಧ್ಯಕ್ಷ ಶಶಿಭೂಷಣ ಪಾಟೀಲ ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಪ್ರೊ. ವಿ. ಬಿ. ದೊಡಮನಿ ಸ್ವಾಗತಿಸಿದರು. ಪ್ರೊ. ಶ್ರೀಕಾಂತ ಶಾನವಾಡ ಅತಿಥಿ ಪರಿಚಯ, ಪ್ರೊ. ಎ. ಕೆ. ಪಾಟೀಲ ನಿರೂಪಣೆ, ವಿ. ಕೆ. ಪಾಟೀಲ ಶರಣು ಸಮರ್ಪಣೆ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ