Latest

“ಸಂಕ್ರಾಂತಿ ಸಂಭ್ರಮ-2019” -ಕಾಲೇಜಿನಲ್ಲೊಂದು ವಿಶಿಷ್ಟ ಕಾರ್ಯಕ್ರಮ

 

   ಪ್ರಗತಿವಾಹಿನಿ ಸುದ್ದಿ, ಚನ್ನಮ್ಮ ಕಿತ್ತೂರು
ನಮ್ಮ ಸಂಸ್ಕೃತಿಯ ಸೊಬಗನ್ನು ಹಾಗೂ ಹಬ್ಬ-ಹರಿದಿನಗಳ ಮಹತ್ವವನ್ನು ಇಂದಿನ ಪೀಳಿಗೆಗೆ ತಿಳಿಸಲು ಶೈಕ್ಷಣಿಕ ಕೇಂದ್ರಗಳಲ್ಲಿ ಹಬ್ಬಗಳನ್ನು ಆಚರಿಸುವುದು ಅವಶ್ಯಕವಾಗಿದೆ ಎಂದು ಕಿತ್ತೂರ ನಾಡ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಜಗದೀಶ ವಸ್ತ್ರದ ಹೇಳಿದರು.
ಸ್ಥಳೀಯ ಕಿ.ನಾ.ವಿ.ವ.ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಮಹಿಳಾ ವೇದಿಕೆ ಹಾಗೂ ಪರಂಪರೆ ಕೂಟ ಇವುಗಳ ಸಂಯುಕ್ತಾಶ್ರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ “ಸಂಕ್ರಾಂತಿ ಸಂಭ್ರಮ-೨೦೧೯” ಉದ್ಘಾಟಿಸಿ ಮಾತನಾಡಿದ ಜಗದೀಶ ವಸ್ತ್ರದ, ಇಂದಿನ ಯಾಂತ್ರಿಕ ಯುಗದಲ್ಲಿ ನಾವು ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ, ಅಲ್ಲದೇ ನಮ್ಮ ಪೂರ್ವಜರು ಪ್ರತಿಯೊಂದು ಕಾಲದಲ್ಲಿ ಅದಕ್ಕೆ ಅನುಗುಣವಾಗಿ ಹಬ್ಬಗಳನ್ನು ಆಚರಿಸುತ್ತಿದ್ದರು. ಇದರಿಂದ ನಮ್ಮ ಆರೋಗ್ಯ ಸುಧಾರಣೆಯೊಂದಿಗೆ ನಮ್ಮ ಬಾಂಧವ್ಯಗಳು ಸಹ ಬೆಸೆಯಲ್ಪಡುತ್ತಿದ್ದವು. ಇಂದಿನ ಪೀಳಿಗೆ ಆಧುನಿಕತೆಗೆ ಮಾರು ಹೋಗಿ ನಾವು ನಮ್ಮ ಮನೆಯಲ್ಲಿಯೇ ಅಪರಿಚಿತರಾಗುತ್ತಿದ್ದೇವೆ. ಆದ್ದರಿಂದ ನಮ್ಮ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ, ಹಬ್ಬಗಳ ಆಚರಣೆ ಮಹತ್ವ ತಿಳಿಸುವುದು ಅನಿವಾರ್ಯವಾಗಿದೆ ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಮಹಾವಿದ್ಯಾಲದ ಪ್ರಾಚಾರ್ಯ ಡಾ. ಜಿ ಕೆ ಭೂಮನಗೌಡರ ನಮ್ಮ ಹಬ್ಬಗಳು ಒಂದು ಕಾಲದಲ್ಲಿ ಭಾವೈಕತೆಯ ಪ್ರತೀಕವಾಗಿದ್ದವು. ಇಡೀ ಸಮಾಜದಲ್ಲಿ ಎಲ್ಲರೂ ಸೇರಿ ಆಚರಿಸುತ್ತಿದ್ದರು. ಹಬ್ಬಗಳನ್ನು ಆಚರಿಸಿ ಆಯಾ ಹಬ್ಬಗಳಲ್ಲಿ ಆಯಾ ಕಾಲಮನಕ್ಕೆ ನಮ್ಮ ದೇಹಕ್ಕೆ ಹಾಗೂ ಆರೋಗ್ಯಕ್ಕೆ ಅವಶ್ಯಕವಾಗುವ ಆಹಾರ ಸಿದ್ಧಪಡಿಸಿ ಹಬ್ಬಗಳನ್ನು ಎಲ್ಲರೊಂದಿಗೆ ಕೂಡಿ ಆಚರಿಸುತ್ತಿದ್ದರು. ಇದರಿಂದ ಸಮಾಜದಲ್ಲಿ ಐಕ್ಯತೆ ಬರಲು ಸಾಧ್ಯ ಎಂದು ಹೇಳಿದರು.
ಸಂಕ್ರಾಂತಿ ಸಂಭ್ರಮ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಷಯದ ಹಿರಿಯ ಉಪನ್ಯಾಸಕ ಎಸ್.ಎಸ್.ಬಿರಾದಾರಪಾಟೀಲ, ಇಂದಿನ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುತ್ತದೆ. ಅಲ್ಲದೆ ಇಂದಿನ ಜಟಿಲ ಕಾರ್ಯಗಳಲ್ಲಿ ಒಂದು ದಿನ ವಿದ್ಯಾರ್ಥಿಗಳಿಗೆ ಮನರಂಜನೆಯೊಂದಿಗೆ ನಮ್ಮ ಸಂಸ್ಕೃತಿ ಆಚರಣೆಗಳನ್ನು ಅರಿಯಲು ಸಹಕಾರಿಯಾಗಿದೆ ಎಂದರು.

ಸಂಕ್ರಾಂತಿ ಆಚರಣೆಯೊಂದಿಗೆ ಉಪನ್ಯಾಸಕಿ ರಶ್ಮಿ ಪತಂಗೆ, ಸಂಗೀತ ಶಿಕ್ಷಕ ಈಶ್ವರ ಗಡಿಬಿಡಿ, ರೂಪಾ ಶೀಲವಂತರ, ನಾಸರೀನ್ ಹಂಚಿನಮನಿ ಇತರರು ಸಂಕ್ರಾಂತಿಯ ಮಹತ್ವ ತಿಳಿಸುವ ಜಾನಪದ ಗೀತೆ, ಭಾವಗೀತೆಗಳನ್ನು ಹಾಡಿ ಎಲ್ಲರ ಮನರಂಜಿಸಿದರು. ವಿದ್ಯಾರ್ಥಿನಿಯರು ತಾವು ತಂದ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಎಲ್ಲರಿಗೂ ಉಣಬಡಿಸಿ ಅತೀ ಉತ್ಸಾಹದಿಂದ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಕಿನಾವಿವ ಸಂಘದ ವಾಯ್ಸಿ-ಚೇರಮನ್ನ ವ್ಹಿ.ಆರ್.ಶೆಟ್ಟರ, ನಿರ್ದೇಶಕರಾದ ಜೆ.ಎಸ್.ಬಿಕ್ಕಣ್ಣವರ, ಎಸ್.ಎಸ್.ವಂಸಂಗ, ಎನ್.ಎಸ್.ಹಿರೇಮಠ, ಉಮಾಕಾಂತ ಭಾರತಿ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಮ್.ಎಸ್.ಪಾಟೀಲ ಕಾರ್ಯಕ್ರಮದಲ್ಲಿ ಹಾಜರಿದ್ದರು. ಮಹಿಳಾ ವೇದಿಕೆ ಚೇರಮನ್ನರಾದ ಹಿರಿಯ ಉಪನ್ಯಾಸಕಿ ಆರ್.ಎನ್.ಶೆಟ್ಟರ ಎಳ್ಳು-ಬೆಲ್ಲವನ್ನು ಬೀರುವುದರ ಮೂಲಕ ಸಂಕ್ರಾಂತಿ ಆಚರಣೆಗೆ ಚಾಲನೆ ನೀಡಿದರು. ಉಪನ್ಯಾಸಕಿ ಸಂಗೀತಾ ತೋಲಗಿ ಸ್ವಾಗತಿಸಿದರು, ಪ್ರಿಯಾಂಕಾ ದಾಮೊನೆ ವಂದಿಸಿದರು, ಪರಂಪರೆ ಕೂಟದ ಚೇರಮನ್ನರಾದ ಡಾ. ನರಹರಿ ಕೆ.ಎನ್. ಕಾರ್ಯಕ್ರಮ ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button