ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನಮ್ಮಲ್ಲಿರುವ ಸಂಪ್ರದಾಯ, ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ಧಾರೆ ಎರೆಯಬೇಕು. ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಯಲ್ಲಿ ಹೆಚ್ಚೆಚ್ಚು ಯುವಜನಾಂಗ ಸದಸ್ಯರಾಗುವ ಬಗ್ಗೆ ಆದ್ಯತೆ ನೀಡಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾದ ಪದ್ಮಾ ಶೇಷಾದ್ರಿ ಹೇಳಿದರು.
ಇಲ್ಲಿನ ಆದರ್ಶ ನಗರದಲ್ಲಿರುವ ಐಎಂಇಆರ್ ಆಡಿಟೋರಿಯಂನಲ್ಲಿ ಭಾನುವಾರ ಆಯೋಜಿಸಲಾಗಿದ್ದ ಪರಂಪರಾ ಬ್ರಾಹ್ಮಣ ಮಹಿಳಾ ಒಕ್ಕೂಟದ ಪ್ರಥಮ ವಾರ್ಷಿಕೋತ್ಸವ, ಮಹಿಳಾ ದಿನಾಚರಣೆ, ಸಾಧಕಿಯರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಬ್ರಾಹ್ಮಣ ಜನಾಂಗದವರು ಈ ಬಾರಿ ತಪ್ಪದೇ ಮತದಾನ ಮಾಡಲೇಬೇಕು. ಮತದಾನದ ದಿನ ಪಿಕ್ನಿಕ್, ಟೂರ್ ಹೋಗದೆ ಮತದಾನ ಮಾಡಬೇಕು. ಇಂದಿನ ಯುವ ಜನರಿಗೆ ಆಸಕ್ತಿ ಮೂಡುವಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಮಾಡಬೇಕು. ‘ಹೊಸ ಚಿಗುರು-ಹಳೇಬೇರು’ ಎಂಬಂತೆ ಜತೆಯಲ್ಲಿ ಸಾಗಬೇಕೆಂದು ಅವರು ಸಲಹೆ ನೀಡಿದರು.
ಸ್ತ್ರೀ ಪರಂಪರಾ ಶಕ್ತಿಗಳು ಪುರಾಣ ಕಾಲದಿಂದಲೇ ಇದ್ದು, ಅಂದಿನಿಂದ ಇಂದಿನ ತನಕ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ತ್ರೀ ತನ್ನದೇ ಆದ ಛಾಪುಗಳನ್ನು ಮೂಡಿಸಿದ್ದಾರೆ. ಇಂದು ಮಹಿಳೆ ಮನೆ ಯಿಂದ ಹೊರ ಬಂದು ತನ್ನ ಸುಪ್ತ ಶಕ್ತಿಯನ್ನು ಹೊರಚೆಲ್ಲಿ ಎಲ್ಲೆಡೆಯೂ ತಮ್ಮ ಪ್ರತಿಭೆಯನ್ನು ಸೂಸುತ್ತಿದ್ದಾರೆ. ಇಂತಹ ಸಾಧಕಿಯರಿಗೆ ಸದಾ ಪ್ರೋತ್ಸಾಹ ನೀಡಬೇಕು ಎಂದು ಸಮಾರಂಭದ ಮತ್ತೋರ್ವ ಗೌರವ ಅತಿಥಿಯಾಗಿದ್ದ ಬೆಳಗಾವಿಯ ವಿದ್ಯಾ ಜಕಾತಿ ಹೇಳಿದರು.
ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷೆ ಪ್ರಿಯಾ ಪುರಾಣಿಕ್ ಅವರು ಪ್ರಾಸ್ತಾವಿಕ ಮಾತನಾಡಿದರು. ಅನುಶ್ರೀ ದೇಶಪಾಂಡೆ ಕಾರ್ಯಕ್ರಮ ನಿರೂಪಿಸಿದರು. ಶಿಲ್ಪಾ ಕುಲಕರ್ಣಿ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಮಧುಮತಿ ಮುತಾಲಿಕ ದೇಸಾಯಿ ವಂದಿಸಿದರು.
ಸಮಾರಂಭದಲ್ಲಿ ಐವರು ಸಾಧಕಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಎಲ್ಲ ಗ್ರುಪ್ ಗಳಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ