Latest

*ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.15ರಷ್ಟು ಎನ್ ಆರ್ ಐ ಕೋಟಾಗೆ ಕೇಂದ್ರಕ್ಕೆ ಪತ್ರ ಬರೆದ ಸಚಿವ ಶರಣಪ್ರಕಾಶ್ ಪಾಟೀಲ್*

ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜುಗಳಲ್ಲಿ 2025-26ನೇ ಶೈಕ್ಷಣಿಕ ವರ್ಷದಿಂದ ಅನಿವಾಸಿ ಭಾರತೀಯ (ಎನ್ ಆರ್ಐ) ಕೋಟಾ ಆರಂಭಿಸಲು ಸೂಪರ್ ನ್ಯೂಮರರಿ ಎಂಬಿಬಿಎಸ್ ಸೀಟುಗಳನ್ನು ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆ ಪತ್ರ ಬರೆದಿದೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‍ಎಂಸಿ) ಅಧ್ಯಕ್ಷರಿಗೆ ಈಕುರಿತು ಪತ್ರ ಬರೆದಿದ್ದು, ರಾಜ್ಯದಲ್ಲಿರುವ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ 508 ಹೆಚ್ಚುವರಿ ಸೂಪರ್ ನ್ಯೂಮರರಿ (supernumerary) ಎಂಬಿಬಿಎಸ್ ಸೀಟುಗಳನ್ನು ಸೃಷ್ಟಿಸುವ ಮೂಲಕ ಶೇ 15ರಷ್ಟು ಎನ್ಆರ್ ಐ ಕೋಟಾ ಮಂಜೂರು ಮಾಡುವಂತೆ ಮನವಿ ಮಾಡಿದ್ದಾರೆ.

ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಯುಜಿ-ಎಂಬಿಬಿಎಸ್ ವಾರ್ಷಿಕ ಮಂಜೂರಾದ ಸೀಟುಗಳ ಮೇಲೆ ಹೆಚ್ಚುವರಿ ಸೀಟುಗಳನ್ನು ರಚಿಸುವುದು ಸೂಪರ್ ನ್ಯೂಮರರಿ
ಉದ್ದೇಶವಾಗಿದೆ. ಪ್ರಸ್ತಕ ವೈದ್ಯಕೀಯ ಶಿಕ್ಷಣಇಲಾಖೆಯಡಿ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳು 2023-24ನೇ ಸಾಲಿನಲ್ಲಿ 3,450 ಸೀಟುಗಳ ಸಾಮಥ್ರ್ಯವನ್ನು ಹೊಂದಿದ್ದು ಅದರಲ್ಲಿ 85% (2929 ಸೀಟುಗಳು) ಕರ್ನಾಟಕ ಕೋಟಾ ಮತ್ತು 521 ಅಂದರೆ15% ಅಖಿಲ ಭಾರತ ಕೋಟಾ ಆಗಿದೆ.

ಈಗಾಗಲೇ ರಾಜಸ್ಥಾನ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಪುದುಚೇರಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.7-15ರಷ್ಟು ಎನ್ ಆರ್ ಐ ಕೋಟಾವನ್ನು ನೀಡಿರುವ, ನಿದರ್ಶನಗಳನ್ನು ಹಾಗು ಈ ರಾಜ್ಯಗಳು ಎನ್ ಆರ್ ಐ ವಿದ್ಯಾರ್ಥಿಗಳಿಗೆ ವಾರ್ಷಿಕ 75,000 ಡಾಲರ್ ದಿಂದ 100,000 ಡಾಲರ್ ಗಿಂತ ಹೆಚ್ಚು ಶುಲ್ಕ ವಿಧಿಸಿರುವುದ್ದನು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬಜೆಟ್ ಹಂಚಿಕೆ, ವಿದ್ಯಾರ್ಥಿಗಳ ಶುಲ್ಕ, ಕೇಂದ್ರ ಮತ್ತು ರಾಜ್ಯಅನುದಾನಗಳು ಮತ್ತು ಇತರ ದೇಣಿಗೆಗಳ ಹೊರತಾಗಿಯೂ ರಾಜ್ಯದ ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳು ಹಣದ ಕೊರತೆಯನ್ನು ಎದುರಿಸುತ್ತಿವೆ ಎಂದು ಪಾಟೀಲ್ ಪತ್ರದಲ್ಲಿ ಹೇಳಿದ್ದಾರೆ.

ಕರ್ನಾಟಕದಲ್ಲಿ ಎನ್ ಆರ್ ಐ ಕೋಟಾ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಮಾತ್ರ ಅನುಮತಿಯಿದ್ದು, ಪ್ರತಿ ವಿದ್ಯಾರ್ಥಿ ವಾರ್ಷಿಕ 1 ಕೋಟಿ ರೂ ಯಿಂದ 2.5 ಕೋಟಿ ರೂ. ಕೋರ್ಸ್ ಶುಲ್ಕ ಪಾವತಿಸಬೇಕಾಗುತ್ತದೆ. ಸರ್ಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜುಗಳಲ್ಲಿ ಎನ್ ಆರ್ ಐ ಕೋಟಾ ಜಾರಿಯಾದಲ್ಲಿ ವಿದ್ಯಾರ್ಥಿಗೆ ವಾರ್ಷಿಕ ರೂ. 25 ಲಕ್ಷ ಶುಲ್ಕ ನಿಗದಿಪಡಿಸಬಹುದು, ಇದು ವೈದ್ಯಕೀಯ ಶಿಕ್ಷಣ ಇಲಾಖೆಗೆ ಮೊದಲ ವರ್ಷಕ್ಕೆ 127 ಕೋಟಿ ರೂ ಮತ್ತು 5ನೇ ವರ್ಷಕ್ಕೆ 571.5 ಕೋಟಿ ರೂ. ಸಂದಾಯವಾಗುತ್ತದೆ. ಈ ಸಂಸ್ಥೆಗಳನ್ನು ಶ್ರೇಷ್ಠತೆಯ ಕೇಂದ್ರವನ್ನಾಗಿ ಮಾಡಲು, ಗುಣಮಟ್ಟದ ಶಿಕ್ಷಣ, ತರಬೇತಿ, ನಿರ್ವಹಣೆ, ವೈದ್ಯಕೀಯ ಉಪಕರಣಗಳು, ಔಷಧಗಳ ಖರೀದಿ, ರೋಗಿಗಳ ಹೊರೆ ನಿರ್ವಹಣೆ, ಮೂಲಸೌಕರ್ಯ ಸುಧಾರಣೆ, ಅಧ್ಯಾಪಕರ ಸಾಮರ್ಥ್ಯ ಮತ್ತು ಸಂಶೋಧನೆಗೆ ಎನ್‌ಆರ್‌ಐ ಕೋಟಾದ ಮೂಲಕ ಹೆಚ್ಚುವರಿ ಹಣದ ಅಗತ್ಯವಿದೆ ಎಂದು ಸಚಿವರು ಪ್ರತಿಪಾದಿಸಿದ್ದಾರೆ.

ಲಭ್ಯವಿರುವ ವಾರ್ಷಿಕ ಸೀಟುಗಳ ಒಳಗೆ ಎನ್ ಆರ್ ಐ ಕೋಟಾವನ್ನು ರಚಿಸುವುದು ಕಾರ್ಯಸಾಧ್ಯವಲ್ಲ. ಹಾಗೆ ಮಾಡಿದರೆ ಬಡವರು ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಕಡಿಮೆ ಸೀಟು ಸೃಷ್ಟಿಯಾಗುತ್ತವೆ. ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ನಾವು ವಿರೋಧ ಎದುರಿಸಬೇಕಾಗುತ್ತದೆ ಎಂದು ಪಾಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ರಾಜ್ಯದಲ್ಲಿರುವ ಸರ್ಕಾರಿ ಪಶು ವೈದ್ಯಕೀಯ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು 15%
ಎನ್ ಆರ್ ಐ ಕೋಟಾವನ್ನುಹೊಂದಿವೆ. ಎನ್ ಆರ್ ಐ ಕೋಟಾದಿಂದ ಈ ವಿಶ್ವವಿದ್ಯಾಲಯಗಳು ಉತ್ತಮ ಸೌಲಭ್ಯಗಳು ಮತ್ತು ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಸಹಾಯ ಮಾಡುತ್ತವೆ ಎಂದು ಯುಜಿಸಿ ಅಧ್ಯಕ್ಷರಿಗೆ ಸಚಿವರು ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

2025-26ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 15%
ಎನ್ ಆರ್ ಐ ಕೋಟಾವನ್ನು ಪ್ರಾರಂಭಿಸಲು ರಾಜ್ಯದ ಪ್ರಸ್ತಾವನೆಗೆ ಅನುಮತಿ ಸಿಗುತ್ತದೆ ಎಂಬ ಭರವಸೆಯನ್ನು ಶರಣಪ್ರಕಾಶ್ ಪಾಟೀಲ್ ವ್ಯಕ್ತಪಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button