ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಲೋಕಸಭಾ ಕ್ಷೇತ್ರದ ಭಾರತೀಯ ಜನತಾಪಾರ್ಟಿ ಅಭ್ಯರ್ಥಿಯಾಗಿ ಸುರೇಶ ಅಂಗಡಿ ಸಾಂಕೇತಿಕವಾಗಿ ಇಂದು ನಾಮಪತ್ರ ಸಲ್ಲಿಸಿದರು.
ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಆನಂದ ಮಾಮನಿ, ಮಹಾದೇವಪ್ಪ ಯಾದವಾಡ, ಮಾಜಿ ಶಾಸಕ ಸಂಜಯ ಪಾಟೀಲ, ಎಂ.ಬಿ.ಜಿರಲಿ, ರಾಜೇಂದ್ರ ಹರಕುಣಿ, ಕಿರಣ ಜಾಧವ, ರಾಜು ಚಿಕ್ಕನಗೌಡರ್, ಆರ್.ಎಸ್.ಮುತಾಲಿಕ, ಈರಣ್ಣ ಕಡಾಡಿ ಮೊದಲಾದವರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಏ.4ರಂದು ಅಧಿಕೃತವಾಗಿ ಮತ್ತೊಮ್ಮೆ ಅವರು ನಾಮಪತ್ರ ಸಲ್ಲಿಸಲಿದ್ದು, ಪಕ್ಷದ ರಾಜ್ಯ ನಾಯಕರು ಆಗಮಿಸಲಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಮೂರು ಬಾರಿ ಸಂಸದರಾಗಿ ಆಯ್ಕೆಯಾದ ಸುರೇಶ ಅಂಗಡಿ ಈ ಬಾರಿ ದಾಖಲೆ ನಿರ್ಮಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗುವ ಸಲುವಾಗಿ ಟಿಕೆಟ್ ಕೇಳಿದ್ದೆ. ಆದರೆ, ರಾಜ್ಯಸಭಾ ಸದಸ್ಯನಾಗಿರುವುದರಿಂದ ಇನ್ನೊಬ್ಬರಿಗೆ ಅವಕಾಶ ನೀಡುವಂತೆ ಪಕ್ಷದ ಮುಖಂಡರು ಮನವಿ ಮಾಡಿದ್ದಾರೆ. ಅಣ್ಣಾಸಾಹೇಬ ಜೊಲ್ಲೆ ಹಾಗೂ ಮಾಜಿ ಸಂಸದ ರಮೇಶ ಕತ್ತಿ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಯಾರಿಗೆ ಟಿಕೆಟ್ ನೀಡಿದರೂ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಎಂದು ಕೋರೆ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ