ಜಿಲ್ಲೆಯ 22 ಪರೀಕ್ಷಾ ಕೇಂದ್ರಗಳಲ್ಲಿ ಏ.29, 30 ರಂದು ಸಿಇಟಿ ಪರೀಕ್ಷೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ವೃತ್ತಿಪರ ಕೋರ್ಸುಗಳ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯು ಏ.29 ಹಾಗೂ 30 ರಂದು ನಡೆಯಲಿದ್ದು, ಪರೀಕ್ಷಾರ್ಥಿಗಳು ಕ್ಯಾಲ್ಕ್ಯುಲೇಟರ್, ಕೈಗಡಿಯಾರ ಅಥವಾ ಮೊಬೈಲ್ ಫೋನ್‌ಗಳನ್ನು ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ. ತಿಳಿಸಿದ್ದಾರೆ.
ಸಾಮಾನ್ಯ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ(ಏ.೨೬) ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿಯೊಂದು ಪರೀಕ್ಷಾ ಕೊಠಡಿಗಳಲ್ಲಿ ಕಡ್ಡಾಯವಾಗಿ ಗೋಡೆ ಗಡಿಯಾರ ಅಳವಡಿಸಬೇಕು; ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಸೂಕ್ತ ಗಾಳಿ ಮತ್ತು ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯ ಬೆಳಗಾವಿ, ಚಿಕ್ಕೋಡಿ, ಗೋಕಾಕ ಮತ್ತು ಅಥಣಿ ನಾಲ್ಕು ತಾಲ್ಲೂಕುಗಳಲ್ಲಿ ಒಟ್ಟು 22 ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದ್ದು, ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಒಬ್ಬರಂತೆ ಒಟ್ಟು 22 ಜನ ಹಿರಿಯ ಪ್ರಾಚಾರ್ಯರನ್ನು ಪ್ರಶ್ನೆಪತ್ರಿಕಾ ಪಾಲಕ(ಕಸ್ಟೋಡಿಯನ್) ಆಗಿ ನೇಮಿಸಲಾಗುವುದು. ಪ್ರತಿ ಕೇಂದ್ರಕ್ಕೆ ಇಬ್ಬರಂತೆ ಒಟ್ಟು 44 ಉಪನ್ಯಾಸಕರನ್ನು ವಿಶೇಷ ಜಾಗೃತಾ ದಳದ ಅಧಿಕಾರಿಗಳನ್ನಾಗಿ ಈಗಾಗಲೇ ನಿಯೋಜಿಸಲಾಗಿದ್ದು, ಅವರು ಪರೀಕ್ಷೆಯ ದಿನ ಕಡ್ಡಾಯವಾಗಿ ಆಯಾ ಕೇಂದ್ರಗಳಲ್ಲಿ ಉಪಸ್ಥಿತರಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಳತೆಯಲ್ಲಿ ಪರೀಕ್ಷೆ ವೇಳೆಯಲ್ಲಿ 144 ಕಲಂ ಜಾರಿ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬೂದೆಪ್ಪ ತಿಳಿಸಿದರು.
ಪ್ರಶ್ನೆಪತ್ರಿಕೆ ಮತ್ತು ಓ.ಎಂ.ಆರ್. ಷೀಟ್‌ಗಳನ್ನು ಸೂಕ್ತ ಭದ್ರತೆಯೊಂದಿಗೆ ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಿ, ವಿತರಿಸಲು ಪ್ರಶ್ನೆಪತ್ರಿಕಾ ಪಾಲಕರು, ಪ್ರಾಚಾರ್ಯರು, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ತಹಶೀಲ್ದಾರರು ಎಚ್ಚರಿಕೆಯಿಂದ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪದವಿಪೂರ್ವ ಶಿಕ್ಷಣ ಇಲಾಖೆಯ ಚಿಕ್ಕೋಡಿಯ ಉಪ ನಿರ್ದೇಶಕರಾದ ಕೆ.ಎನ್.ಸಂಗಮ ಅವರು, ಜಿಲ್ಲೆಯ ನಾಲ್ಕು ತಾಲ್ಲೂಕು ಕೇಂದ್ರಗಳ ಒಟ್ಟು 22 ಪರೀಕ್ಷಾ ಕೇಂದ್ರಗಳಲ್ಲಿ 9782 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ವಿವರಿಸಿದರು.
ಪರೀಕ್ಷಾ ವೇಳಾಪಟ್ಟಿ:
೨೯-೪-೨೦೧೯ ರಂದು ಬೆಳಿಗ್ಗೆ ೧೦.೩೦ ರಿಂದ ೧೧.೫೦ ರವರೆಗೆ ಜೀವಶಾಸ್ತ್ರ; ಮಧ್ಯಾಹ್ನ ೨.೩೦ರಿಂದ ೩.೫೦ ರವರೆಗೆ ಗಣಿತ. ೩೦-೦೪-೨೦೧೯ ರಂದು ಬೆಳಿಗ್ಗೆ ೧೦.೩೦ ರಿಂದ ೧೧.೫೦ ರವರೆಗೆ ಭೌತಶಾಸ್ತ್ರ; ಮಧ್ಯಾಹ್ನ ೨.೩೦ ರಿಂದ ೩.೫೦ ರವರೆಗೆ ರಸಾಯನಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿದೆ.
ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ, ಪರೀಕ್ಷೆಗೆ ನಿಯೋಜನೆಗೊಂಡಿರುವ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ