ಪ್ರಗತಿವಾಹಿನಿ ಸುದ್ದಿ, ಹಳಿಯಾಳ
ಕರ್ನಾಟಕ ಲಾ ಸೊಸೈಟಿಯ ಹಳಿಯಾಳದ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ ಆಶ್ರಯದಲ್ಲಿ ಮೂರು ದಿನಗಳ ರಾಷ್ಟ್ರ ಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಉತ್ಸವ ಆವಿಷ್ಕಾರ್-೨೦೧೯, ಮಾರ್ಚ ೨೮ ರಿಂದ ಆರಂಭವಾಗಲಿದೆ.
ಈ ಉತ್ಸವದಲ್ಲಿ ೪೦ಕ್ಕೂ ಹೆಚ್ಚು ಸ್ಪರ್ಧೆಗಳು ನಡೆಯಲಿದ್ದು, ವಿವಿಧ ಇಂಜನಿಯರಿಂಗ್ ಕಾಲೇಜುಗಳ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ತಾಂತ್ರಿಕ ಪ್ರಬಂಧ ಮಂಡನೆ, ರೋಬೋಟ್ ರೇಸ್, ಕಟ್ಟಡ ಮಾದರಿ ನಿರ್ಮಾಣ ಸ್ಪರ್ಧೆಗಳು ಪ್ರಮುಖ ಆಕರ್ಷಣೆಗಳಾಗಿವೆ.
ಮಾರ್ಚ್ ೨೮ರಂದು ಮುಂಜಾನೆ ೧೦ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಡಸಲ್ಟ ಸಿಸ್ಟಮ್ ಇಂಡಿಯಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಹೇಮಂತ ಗಾಡಗೀಳ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪುಣೆಯ ೫ ಎ.ಎಮ್ ವೆಂಚರ್ಸ್ ಸಂಸ್ಥೆಯ ಪಂಕಜ ಮಿತ್ತಲ್ ಅವರು ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಆರ್ ಕೆ ಬೆಳಗಾಂವ್ಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಮಾರ್ಚ್ ೩೦ ರಂದು ಸಂಜೆ ೪ ಗಂಟೆಗೆ ನಡೆಯಲಿರುವ ಮುಕ್ತಾಯ ಸಮಾರಂಭದಲ್ಲಿ ಬೆಳಗಾವಿಯ ಲಿಯೋ ಇಂಜನಿಯರಿಂಗ್ ಮತ್ತು ಕನ್ಸಲ್ಟಂಟ್ ಸಂಸ್ಥೆಯ ನಿರ್ದೇಶಕ ಜಯದೀಪ ಬಿರ್ಜೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಎಸ್ ವಿ ಗಣಾಚಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಾಂಶುಪಾಲ ಡಾ. ವಿ ವಿ ಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ