Latest

ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆ ಪ್ರಸ್ತಾವನೆ ಹಿನ್ನೆಲೆ:  ಅಪೂರ್ಣ ಪ್ರಸ್ತಾವನೆಗಳನ್ನು ಪರಿಗಣಿಸದಿರಲು ಶಿಫಾರಸ್ಸು

 

 

ಪ್ರಗತಿವಾಹಿನಿ ವಿಶೇಷ, ಬೆಳಗಾವಿ

ಪಶ್ಚಿಮ ಘಟ್ಟಗಳ ಮೂಲಕ ಹಾದು ಹೋಗಲಿರುವ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಪ್ರಸ್ತಾವನೆಗೆ ರಾಜ್ಯ ಸರಕಾರವು ರಾಜ್ಯ ವನ್ಯಜೀವಿ ಮಂಡಳಿಯ ಅನುಮತಿ ಪಡೆಯದೇ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದನ್ನು ವಿರೋಧಿಸಿ ವನ್ಯಜೀವಿ ಕಾರ್ಯಕರ್ತ ಗಿರಿಧರ ಕುಲಕರ್ಣಿ ಅವರು ದೂರು ಸಲ್ಲಿಸಿದ ಬೆನ್ನಲ್ಲೇ ರಾಷ್ಟ್ರೀಯ ವನ್ಯಜೀವಿ ಮಂಡಳಿ ಮಹತ್ತರವಾದ ನಿರ್ಧಾರ ಒಂದನ್ನು ಕೈಗೊಂಡಿದೆ.

ಇನ್ನು ಮುಂದೆ ಯಾವೊಂದೂ ಪ್ರಸ್ತಾವನೆಯನ್ನು ರಾಜ್ಯ ವನ್ಯಜೀವಿ ಮಂಡಳಿಯ ಶಿಫಾರಸ್ಸುಗಳಿಲ್ಲದೇ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯೀ ಸಮಿತಿಯ ಪರಿಗಣನೆಗೆ ಸಲ್ಲಿಸಬಾರದೆಂದು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು ಎಲ್ಲ ರಾಜ್ಯ ಸರಕಾರಗಳಿಗೆ ಸೂಚಿಸಲು ಸೂಕ್ತ ಆದೇಶ ಹೊರಡಿಸಬೇಕೆಂದು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯೀ ಸಮಿತಿಯು ಶಿಫಾರಸ್ಸು ಮಾಡಿದೆ.

ಒಂದು ವೇಳೆ ರಾಜ್ಯ ವನ್ಯಜೀವಿ ಮಂಡಳಿಯ ಶಿಫಾರಸ್ಸುಗಳಿಲ್ಲದೇ ಯಾವುದಾದರೂ ಪ್ರಸ್ತಾವನೆಯನ್ನು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು ಸ್ವೀಕರಿಸಿದ್ದೇ ಆದಲ್ಲಿ ಅಂತಹ ಪ್ರಸ್ತಾವನೆಗಳನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯೀ ಸಮಿತಿಯು ಪರಿಗಣಿಸದಿರಲು ನಿರ್ಧರಿಸಿದೆ. ಅಲ್ಲದೇ ಇಂತಹ ಪ್ರಸ್ತಾವನೆಗಳು ರಾಜ್ಯ ಮಟ್ಟದಲ್ಲೇ ಬಾಕಿ ಇವೆ ಎಂದು ಪರಿಗಣಿಸಲಾಗುತ್ತದೆಂದು ಸ್ಪಷ್ಟಪಡಿಸಿದೆ.

ರಾಜ್ಯ ವನ್ಯಜೀವಿ ಮಂಡಳಿಯ ಒಪ್ಪಿಗೆ ಪಡೆಯದ ಕಾರಣ ಸದರಿ ಪ್ರಸ್ತಾವನೆಯನ್ನು ಕೈಬಿಡಬೇಕೆಂದು ನಿರ್ದೇಶಕರು (ವನ್ಯಜೀವಿ ಸಂರಕ್ಷಣೆ) ಹಾಗೂ ಸದಸ್ಯ ಕಾರ್ಯದರ್ಶಿ, ರಾಷ್ಟ್ರೀಯ ವನ್ಯಜೀವಿ ಮಂಡಳಿ ಇವರಿಗೆ ವನ್ಯಜೀವಿ ಕಾರ್ಯಕರ್ತ ಗಿರಿಧರ ಕುಲಕರ್ಣಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯೀ ಸಮಿತಿ ಸಭೆಯ ಕೆಲವೇ ದಿನಗಳ ಹಿಂದಷ್ಟೇ ಸವಿಸ್ತಾರವಾದ  ಮನವಿ  ಸಲ್ಲಿಸಿದ್ದರು.

ಸೆಪ್ಟೆಂಬರ್ 7 ರಂದು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಖಾತೆ ಸಚಿವ ಡಾ. ಹರ್ಷವರ್ಧನ್ ನೇತೃತ್ವದಲ್ಲಿ ನಡೆದ 50 ನೆಯ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯೀ ಸಮಿತಿ ಸಭೆಯಲ್ಲಿ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಪ್ರಸ್ತಾವನೆ ಕುರಿತು ಚರ್ಚಿಸುತ್ತಿದ್ದಾಗ ಈ ನಿರ್ಧಾರಕ್ಕೆ ಬರಲಾಗಿದೆ. ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಒಪ್ಪಿಗೆ ಪಡೆದ ನಂತರ ಪ್ರಸ್ತಾವನೆ ಪರಿಶೀಲಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ತನ್ನ ಎರಡನೇ ಸ್ಥಳ ಪರಿಶೀಲನೆ ವರದಿಯಲ್ಲೂ ಕೂಡ ಯೋಜನೆಯನ್ನು ಅನುಷ್ಠಾನ ಮಾಡಬಾರದೆಂದು ಶಿಫಾರಸ್ಸು ಮಾಡಿರುವುದರಿಂದ ರಾಜ್ಯ ಸರಕಾರವು ಪ್ರಾಧಿಕಾರದ ವರದಿಗಳ ಜೊತೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆಯನ್ನು ವಾಪಸ್ ಕಳುಹಿಸಿದೆ. ಅಲ್ಲದೇ ರಾಜ್ಯ ವನ್ಯಜೀವಿ ಮಂಡಳಿಯ ಜೊತೆ ಯೋಜನೆ ಕುರಿತು ಚರ್ಚಿಸಬೇಕೆಂದು ರೈಲ್ವೆ ಸಚಿವಾಲಯಕ್ಕೆ ತಿಳಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ವನ್ಯಧಾಮಗಳು, ರಾಷ್ಟ್ರೀಯ ಉದ್ಯಾನವನಗಳು, ಸಂರಕ್ಷಿತ ಮೀಸಲು ಪ್ರದೇಶ ಹಾಗೂ ಇವುಗಳ 10 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಅರಣ್ಯೇತರ ಚಟುವಟಿಕೆಗಳನ್ನು ನಡೆಸಬೇಕೆಂದರೆ ಮೊದಲಿಗೆ ರಾಜ್ಯ ವನ್ಯಜೀವಿ ಮಂಡಳಿಯ ಅನುಮತಿ ಹಾಗೂ ನಂತರದಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅಲ್ಲದೇ ಇಂತಹ ಯಾವುದೇ ಪ್ರಸ್ತಾವನೆಯನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಮುಂದೆ ಸಲ್ಲಿಸುವ ಮೊದಲು ರಾಜ್ಯ ವನ್ಯಜೀವಿ ಮಂಡಳಿಯ ಅನುಮತಿ ಪಡೆಯಬೇಕೆಂದು ಕೇಂದ್ರ  ಸರಕಾರ ಹಲವಾರು ಬಾರಿ ಸೂಚಿಸಿದೆ ಹಾಗೂ ಈ ಕಾರ್ಯ ವಿಧಾನವನ್ನು ಅನುಸರಿಸುವುದು ಕಡ್ಡಾಯವಾಗಿದೆ.

ಆದರೆ ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆಗೆ ರಾಜ್ಯ ವನ್ಯಜೀವಿ ಮಂಡಳಿಯ ಅನುಮತಿ ಪಡೆಯದೇ ಕೇವಲ ಮುಖ್ಯ ವನ್ಯಜೀವಿ ಪರಿಪಾಲಕರ ಶಿಫಾರಸ್ಸನ್ನು ರಾಜ್ಯ ಸರಕಾರ ಸದಸ್ಯ ಕಾರ್ಯದರ್ಶಿ, ರಾಷ್ಟ್ರೀಯ ವನ್ಯಜೀವಿ ಮಂಡಳಿ ಇವರಿಗೆ ಸಲ್ಲಿಸಿತ್ತು. ಅಲ್ಲದೇ ರಾಜ್ಯ ವನ್ಯಜೀವಿ ಮಂಡಳಿಯ ಘಟ ನೊತ್ತರ  ಅನುಮೋದನೆಯನ್ನು ಪಡೆಯುವುದಾಗಿ ತಿಳಿಸಿತ್ತು. ಲಫಾರ್ಜ್ ಪ್ರಕರಣದಲ್ಲಿ ಆದೇಶ ನೀಡಿರುವ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಘಟನೋತ್ಟರ ಅನುಮೋದನೆಗಳನ್ನು ನೀಡಬಾರದೆಂದು ಮಾರ್ಗದರ್ಶಿ ಸೂಚಿಗಳನ್ನು ಬಿಡುಗಡೆ ಮಾಡಿದೆ. ಆದ್ದರಿಂದ ಒಂದು ವೇಳೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಈ ಪ್ರಸ್ತಾವನೆಯನ್ನು ಪರಿಗಣಿಸಿದಲ್ಲಿ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯದ ಹಾಗೂ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಬಿಡುಗಡೆ ಮಾಡಿರುವ ಮಾರ್ಗದರ್ಶಿ ಸೂತ್ರಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆಂದು ದೂರಿನಲ್ಲಿ ಗಿರಿಧರ ಉಲ್ಲೇಖಿಸಿದ್ದರು. ಮಂಡಳಿಯು ಈಗ ತೆಗೆದುಕೊಂಡಿರುವ ನಿರ್ಧಾರ ಅತೀ ಮಹತ್ವ ಪಡೆದುಕೊಂಡಿದ್ದು ಮಂಡಳಿಯ ಶಿಫಾರಸ್ಸು ಇನ್ನು ಇಂತಹ ಎಲ್ಲ ಪ್ರಸ್ತಾವನೆಗಳಿಗೂ ಅನ್ವಯಿಸಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button