Latest

ಹೊಳೆಯಲ್ಲಿಯ ಕಲ್ಮಶ ಎತ್ತಿದ ಶ್ರೀಗಳು, ಜಿಪಂ ಸಿಇಒ

 

   ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ
ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನಕ್ಕಾಗಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಬಡಕುಂದ್ರಿಯ ಹೊಳೆಮ್ಮಾ (ಲಕ್ಷ್ಮೀ) ದೇವಸ್ಥಾನದ ಬಳಿ ಹಿರಣ್ಯಕೇಶಿ ನದಿಯಲ್ಲಿ ಸಂಗ್ರಹವಾಗಿರುವ ಪ್ಲಾಸ್ಟಿಕ್ ಕಲ್ಮಶವನ್ನು ಸ್ವಚ್ಚ ಮಾಡುವುದರ ಜತೆಗೆ ಹತ್ತಿಬಟ್ಟೆ ಚೀಲಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಪ್ರಾರಂಭಿಸಿದರು.
ಶುಕ್ರವಾರ ಹಿರಣ್ಯಕೇಶಿ ನದಿಯಲ್ಲಿ ಭಕ್ತಾಧಿಗಳು ಎಸೆದ ಪ್ಲಾಸ್ಟಿಕ್ ಹಾಗೂ ಇನ್ನಿತರ ಕಲ್ಮಶವನ್ನು ಸ್ವಚ್ಚಗೊಳಿಸುವುದರೊಂದಿಗೆ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಬಳಸಬಾರದೆಂಬ ಸಂದೇಶವನ್ನು ನೀಡಿದರು.
ಪ್ಲಾಸ್ಟಿಕ್ ಸೇವನೆಯಿಂದ ಪ್ರತಿವರ್ಷ ಲಕ್ಷಾಂತರ ಜಾನುವಾರುಗಳು ಹಾಗೂ ಜಲಚರಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಜತೆಗೆ ಜಲಮೂಲ ಕಲುಷಿತಗೊಂಡು ಜನರ ಜೀವಕ್ಕೆ ಸಂಚಕಾರವಾಗುತ್ತಿದೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಧಾರ್ಮಿಕ ಕ್ಷೇತ್ರದಿಂದ ಪ್ರಾರಂಭಿಸಿದ ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನ ಯಶಸ್ವಿಯಾಗುತ್ತದೆ. ಇದೇ ತಿಂಗಳು ಬೆಳಗಾವಿಯ ಸುವರ್ಣಸೌಧದಲ್ಲಿ ಪ್ರಾರಂಭವಾಗುವ ರಾಜ್ಯ ಸರಕಾರದ ಚಳಿಗಾಲ ಅಧಿವೇಶನವನ್ನು ಪ್ಲಾಸ್ಟಿಕ್ ಮುಕ್ತ ಅಧಿವೇಶನವನ್ನಾಗಿ ಕೈಗೊಳ್ಳಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮುಂದಾಗಲಿ ಎಂಬುದು ನಮ್ಮ ಅಭಿಮತ ಎಂದುಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ಜಿಪಂ ಸಿಇಒ ರಾಮಚಂದ್ರನ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವತಃ ನದಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಶುಚಿತ್ವಗೊಳಿಸಿದರು. ಜನರ ಬದುಕಿಗೆ ಅವಶ್ಯವಾದ ಜೀವಜಲವನ್ನು ಅಶುದ್ಧಗೊಳಿಸುತ್ತಿರುವುದು ಮಹಾಪಾಪವೆಂಬ ಪ್ರಜ್ಞೆಯನ್ನು ಭಕ್ತರಲ್ಲಿ ಬೆಳೆಸುವ ನಿಟ್ಟಿನಲ್ಲಿ ಕೈಗೊಂಡ ಕಾರ್ಯ ನಿಜಕ್ಕೂ ಶ್ಲಾಘನೀಯವೆಂದರು.
ಕಾನೂನಿಗಿಂತ ಜನರಲ್ಲಿ ಧಾರ್ಮಿಕ ಪ್ರಜ್ಞೆ ಪರಿಣಾಮಕಾರಿ. ಅದಕ್ಕಾಗಿ ಅದನ್ನು ಜಾರಿಗೆ ತಂದ ಶ್ರೀಗಳ ಕಾರ್ಯ ವೈಚಾರಿಕತೆಗೆ ಸಾಕ್ಷಿ. ಪ್ರತಿಯೊಬ್ಬ ಮಠಾಧೀಶರು ಹಾಗೂ ಜನಪ್ರತಿನಿಧಿಗಳು ಇಂತಹ ಕಾರ್ಯಕ್ಕೆ ಮುಂದಾದಲ್ಲಿ ಯಾವ ಕಾನೂನು ಮತ್ತು ಸರಕಾರ ಮಾಡದ ಕೆಲಸವನ್ನು ಸರಾಗವಾಗಿ ಪಸರಿಸಿ ಸಮಾಜಮುಖಿಯಾಗಿ ಮಾಡಬಹುದೆಂದರು.
ಅಧಿಕಾರ ಮತ್ತು ಕಾನೂನು ಭಯಕ್ಕಿಂತ ಧಾರ್ಮಿಕ ನೆಲೆಗಟ್ಟಿನ ಭಕ್ತಿಯ ಪ್ರೀತಿ ಸಮಾಜದಲ್ಲಿ ಹೆಚ್ಚು ಪ್ರಭಾವಶಾಲಿ. ಅದನ್ನು ಅಸ್ತ್ರವಾಗಿ ಬಳಸಿಕೊಂಡು ಸಮಾಜಮುಖಿ ಕಾರ್ಯಕ್ಕೆ ಮುಂದಾಗಿರುವ ಚಂದ್ರಶೇಖರ ಶಿವಾಚಾರ್ಯರ ಕಾರ್ಯ ಸ್ತುತ್ಯಾರ್ಹ.ಈ ಕಾರ್ಯವನ್ನು ಜಿಲ್ಲೆಯ ೯ ನದಿಗಳಿಗೆ ವಿಸ್ತರಿಸಲಾಗುವುದು ಎಂದು ರಾಮಚಂದ್ರನ್ ಹೇಳಿದರು.
ನಂತರ ದೇವಸ್ಥಾನ ಬಳಿಯ ಅಂಗಡಿಕಾರರಿಗೆ ಹತ್ತಿಯಿಂದ ತಯಾರಿಸಿದ ಬಟ್ಟೆಚೀಲಗಳನ್ನು ವಿತರಿಸಿ ಪ್ಲಾಸ್ಟಿಕ್ ಬಳಸದಿರುವಂತೆ ಕೋರಿದರು. ಬೆಳಗಾವಿಯ
ಉದ್ಯಮಿ ಮಲ್ಲಿಕಾರ್ಜುನ ಜಗಜಂಪಿ ಅವರು 25 ಸಾವಿರ ಹತ್ತಿಬಟ್ಟೆ ಚೀಲಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಉದ್ಯಮಿದಾರರು ಜನಮುಖಿ ಕಾರ್ಯಕ್ಕೆ ಸ್ಪಂದಿಸುವರೆಂಬ ಸಂದೇಶ ಸಾರಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಮಲ್ಲಿಕಾರ್ಜುನ ಜಗಜಂಪಿ, ತಹಶಿಲ್ದಾರ ನಾಗನಗೌಡ ಪಾಟೀಲ, ತಾಪಂ ಇಒ ಮಹಾದೇವ ಬಿರಾದಾರಪಾಟೀಲ, ಬಿಇಒ ಮೋಹನ ದಂಡಿನ, ಅಕ್ಷರ ದಾಸೋಹ ಇಲಾಖೆ ಜಿಲ್ಲಾ ಅಧಿಕಾರಿ ಎಸ್.ಕೆ.ಮಿಲ್ಲಾನಟ್ಟಿ ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button