
ಪ್ರಗತಿವಾಹಿನಿ ಸುದ್ದಿ: ಬರದಿಂದ ಕಂಗೆಟ್ಟಿರುವ ರೈತರಿಗೆ ರಾಜ್ಯ ಸರ್ಕಾರ ಪರಿಹಾರ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಬರಪೀಡಿತ ತಾಲೂಕುಗಳ ರೈತರಿಗೆ ಮೊದಲ ಕಂತಾಗಿ ತಲಾ ₹2,500 ಪರಿಹಾರ ನೀಡಲು ಸರ್ಕಾರ ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ. ಪರಿಹಾರದ ಮೊತ್ತ ಕಡಿಮೆ ಇದೆ ಎಂದು ರೈತರು ಮತ್ತು ರಾಜಕೀಯ ನಾಯಕರು ₹25,000 ನೀಡುವಂತೆ ಒತ್ತಾಯಿಸಿದ್ದರೂ, ಸರ್ಕಾರ ಇದೀಗ ತನ್ನ ನಿರ್ಧಾರದಂತೆ ಪರಿಹಾರ ವಿತರಣೆಗೆ ಮುಂದಾಗಿದೆ.
ರಾಜ್ಯದ ಒಟ್ಟು 240 ತಾಲೂಕುಗಳ ಪೈಕಿ 226 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (NDRF) ಅನುದಾನ ಬಿಡುಗಡೆಯಾಗುವವರೆಗೆ ಕಾಯದೆ, ರಾಜ್ಯ ಸರ್ಕಾರ ತನ್ನ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಮೊದಲ ಕಂತಿನ ಪರಿಹಾರ ನೀಡಲು ನಿರ್ಧರಿಸಿದೆ.
ಬರ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಬೇಕೇ?
ರೈತರು ಪರಿಹಾರ ಪಡೆಯಲು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಇ-ಆಡಳಿತ ಇಲಾಖೆಯ ಫ್ರೂಟ್ಸ್ (FRUITS) ತಂತ್ರಾಂಶದಲ್ಲಿರುವ ರೈತರ ನೋಂದಣಿ ಮಾಹಿತಿ ಮತ್ತು ಮುಂಗಾರು ಬೆಳೆ ಸಮೀಕ್ಷೆಯ ದತ್ತಾಂಶದ ಆಧಾರದ ಮೇಲೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಹಣ ಯಾವ ಖಾತೆಗೆ ಜಮೆಯಾಗಲಿದೆ?
ಆಧಾರ್ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪರಿಹಾರದ ಹಣ ಜಮೆಯಾಗಲಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆದ್ಯತೆ ನೀಡಿ, ನಂತರ ಇತರ ರೈತರಿಗೆ ಪರಿಹಾರ ಪಾವತಿಸಲಾಗುತ್ತದೆ. ಮೊದಲು ಮಳೆಯಾಶ್ರಿತ ಬೆಳೆಗಳಿಗೆ, ಬಳಿಕ ನೀರಾವರಿ ಬೆಳೆಗಳಿಗೆ ಮತ್ತು ಕೊನೆಯದಾಗಿ ಬಹುವಾರ್ಷಿಕ ಬೆಳೆಗಳಿಗೆ ಪರಿಹಾರ ನೀಡುವ ಕ್ರಮ ಅನುಸರಿಸಲಾಗುತ್ತದೆ. ಒಬ್ಬ ರೈತನಿಗೆ ಗರಿಷ್ಠ ಎರಡು ಹೆಕ್ಟೇರ್ ಭೂಮಿಗೆ ಮಾತ್ರ ಈ ಪರಿಹಾರ ಸೀಮಿತವಾಗಿದೆ.
ಯಾವ ಜಮೀನುಗಳಿಗೆ ಪರಿಹಾರ ಸಿಗುವುದಿಲ್ಲ?
ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆಗೊಂಡ ಜಮೀನುಗಳು, ನೀರಾವರಿ ಯೋಜನೆಗಳಿಗಾಗಿ ಭೂಸ್ವಾಧೀನವಾದ ಪ್ರದೇಶಗಳು ಹಾಗೂ ಸರ್ಕಾರಿ ಜಮೀನುಗಳಿಗೆ ಈ ಪರಿಹಾರ ಅನ್ವಯಿಸುವುದಿಲ್ಲ. ಪರಿಹಾರ ಪಾವತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಡಿಜಿಟಲ್ ಸಹಿ ಮೂಲಕ ಅನುಮೋದನೆ ನೀಡಬೇಕು. ವಿತರಣೆಯ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ‘ಪರಿಹಾರ’ ತಂತ್ರಾಂಶದ ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ.
ಕೇಂದ್ರ ಸರ್ಕಾರದಿಂದ NDRF ಅನುದಾನ ಬಂದ ಬಳಿಕ, ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (SDRF) ಮಾರ್ಗಸೂಚಿಗಳ ಅನ್ವಯ ಅರ್ಹ ರೈತರಿಗೆ ಬಾಕಿ ಉಳಿದಿರುವ ಹೆಚ್ಚುವರಿ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




