Belagavi NewsBelgaum NewsKarnataka NewsPolitics

*ಇಂದಿನಿಂದ ಚಳಿಗಾಲದ ಅಧಿವೇಶನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಇಂದಿನಿಂದ ಚಳಿಗಾಲದ ಅಧಿವೇಶನ ನಡೆಯಲಿದ್ದು, ಇದಕ್ಕಾಗಿ ಸುವರ್ಣ ಸೌಧ ಈಗಾಗಲೇ ಸಜ್ಜಾಗಿದೆ. ಬೆಳಗ್ಗೆ 11 ಗಂಟೆಯಿಂದ ಅಧಿವೇಶನ ಪ್ರಾರಂಭವಾಗಲಿದೆ.

ಕಲಾಪ ಆರಂಭಕ್ಕೂ ಮುನ್ನ ಅನುಭವ ಮಂಟಪದ ಭಾವಚಿತ್ರ ಅನಾವರಣಗೊಳಿಸಲಾಗುತ್ತಿದ್ದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಭಾಗಿಯಾಗಲಿದ್ದಾರೆ. 

ಇಂದು ಅನ್ನಪೂರ್ಣ ಇ.ತುಕಾರಾಂ, ಯಾಸಿರ್ ಖಾನ್ ಪಠಾಣ್ ಹಾಗೂ ಸಿ.ಪಿ.ಯೋಗೇಶ್ವ‌ರ್ ಅವರು ನೂತನ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಮೊದಲ ದಿನವೇ 5 ಮಸೂದೆಗಳನ್ನು ಮಂಡಿಸಲು ಸರಕಾರ ಮುಂದಾಗಿದೆ.

ಆಡಳಿತರೂಢ ಕಾಂಗ್ರೆಸ್ ಅನ್ನು ಕಟ್ಟಿ ಹಾಕಲು ವಿಪಕ್ಷಗಳ ಬತ್ತಳಿಕೆಯಲ್ಲಿ ಬಳ್ಳಾರಿಯ ಬಾಣಂತಿಯರ ಸರಣಿ ಸಾವು ಪ್ರಕರಣ, ವಕ್ಫ್ ಆಸ್ತಿ ವಿವಾದ, ಸಿಎಂ ಮತ್ತವರ ಕುಟುಂಬದ ವಿರುದ್ಧದ ಮುಡಾ ಹಗರಣ ಆರೋಪ, ಬಿಪಿಎಲ್ ಕಾರ್ಡ್ ಪರಿಷ್ಕರಣೆ ವಿಷಯ, ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ, ವಾಲ್ಮೀಕಿ ನಿಗಮದಲ್ಲಾದ ಹಗರಣ, ಕೆಐಎಡಿಬಿಯ ಭೂಹಂಚಿಕೆ ಅಕ್ರಮ, ವಿವಿಧ ಇಲಾಖೆಯಲ್ಲಿ ಸರ್ಕಾರಿ ಅಧಿಕಾರಿಗಳ ಆತ್ಮಹತ್ಯೆ ಬೆಳೆವಣಿಗೆಗಳು, ಹಲವು ಇಲಾಖೆಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಚಾರ ಆರೋಪಗಳ ಮುಂತಾದ ವಿಚಾರಗಳಿವೆ.

ಅದೇ ರೀತಿ ಬಿಜೆಪಿ ವಿರುದ್ಧ ರಣತಂತ್ರ ರೂಪಿಸಿರುವ ಕಾಂಗ್ರೆಸ್, ಬಿಜೆಪಿ ಅವಧಿಯಲ್ಲಾದ ಕೋವಿಡ್ ಹಗರಣ, ಬಿಜೆಪಿ ಅವಧಿಯಲ್ಲೇ ಹೆಚ್ಚುವಕ್ಫ್ ನೋಟಿಸ್ ನೀಡಲಾಗಿದೆ ಎಂದು ದಾಖಲೆ ಸಮೇತ ಸಾರಲು ಕಾಂಗ್ರೆಸ್ ಸದನದಲ್ಲಿ ಗಟ್ಟಿಯಾಗಿ ಧ್ವನಿ ಎತ್ತಲು ತಯಾರಾಗಿದೆ. ಯಡಿಯೂರಪ್ಪ ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪ, ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ, ಬಿಜೆಪಿ ಶಾಸಕ ಮುನಿರತ್ನ ನಾಯ್ಡು ವಿರುದ್ಧದ ಗಂಭೀರ ಪ್ರಕರಣಗಳನ್ನು ಆಡಳಿತರೂಢ ಪಕ್ಷ ಪ್ರತ್ಯಾಸ್ತ್ರವಾಗಿ ಹೂಡಿ ವಿಪಕ್ಷಗಳ ಬಾಯಿ ಮುಚ್ಚಿಸಲು ಸಿದ್ಧತೆ ಮಾಡಿಕೊಂಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button