Kannada NewsKarnataka NewsLatest

*ಬಲ್ಡೋಟಾ ಕಾರ್ಖಾನೆ ವಿಸ್ತರಣೆಗೆ ವಿರೋಧ: ರೈತರು, ಮಹಿಳೆಯರು, ವಿದ್ಯಾರ್ಥಿಗಳಿಂದ ಕೊಪ್ಪಳದಲ್ಲಿ ತೀವ್ರಗೊಂಡ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ: ಒಂದೆಡೆ ಉದ್ಯೋಗಾಕಾಂಕ್ಷಿಗಳಿಂದ ಧಾರವಾಡದಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದರೆ ಮತ್ತೊಂದೆಡೆ ಕೊಪ್ಪಳ ಜಿಲ್ಲೆಯಲ್ಲಿ ಬಲ್ಡೋಟಾ ಕಾರ್ಖಾನೆಯ ವಿಸ್ತರಣೆ ವಿರೋಧಿಸಿ ರೈತರು ಮತ್ತು ವಿವಿಧ ಸಂಘಟನೆಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ಕೊಪ್ಪಳದ ಗವಿಮಠದ ಆವರಣದಿಂದ ಆರಂಭಗೊಂಡ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದೆ. ಕಾರ್ಖಾನೆಯಿಂದ ಹೊರಬರುವ ಹೊಗೆ ಮತ್ತು ಧೂಳಿನಿಂದಾಗಿ ಹಾಳಾದ ತಮ್ಮ ಬೆಳೆಗಳನ್ನು ಟ್ರ್ಯಾಕ್ಟರ್ ಗಳಲ್ಲಿ ತಂದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

Home add -Advt

ಕಡಲೆ, ಮೆಕ್ಕೆಜೋಳ, ಜೋಳ ಸೇರಿದಂತೆ ಹಲವು ಬೆಳೆಗಳಿಗೆ ಕಾರ್ಖಾನೆಯ ಹೊಗೆಯಿಂದಾಗುವ ಹಾನಿಯನ್ನು ಪ್ರದರ್ಶಿಸಲು, ಹಾಳಾದ ಬೆಳೆಗಳನ್ನು ಎತ್ತಿನ ಬಂಡಿಗಳಲ್ಲಿ ಹೊತ್ತು ತಂದಿದ್ದಾರೆ. ಮತ್ತೊಂದೆಡೆ ಪ್ರತಿಭಟನಾ ಸ್ಥಳಕ್ಕೆ ತೊಟ್ಟಿಲು ಸಮೇತ ಆಗಮಿಸಿದ ಮಹಿಳೆಯರು ಕಾರ್ಖಾನೆಗಳ ಹೊಗೆಯಿಂದ ಮಕ್ಕಳಾಗುತ್ತಿಲ್ಲವೆಂದು ಖಾಲಿ ತೊಟ್ಟಿಲು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ಮಹಿಳೆಯರಿಗೆ ಗರ್ಭಪಾತವಾಗಿದೆ, ಸಂತಾನ ಭಾಗ್ಯವಿಲ್ಲದಂತಾಗಿದೆ ಎಂದು ಮಹಿಳೆಯರು ಕಣ್ಣೀರಿಟ್ಟಿದ್ದಾರೆ. ಹಲವು ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದ್ದಾರೆ.

ಕೊಪ್ಪಳದ ಬಸವೇಶ್ವರ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಸರ್ಕಾರದ ಶವಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles

Back to top button