*ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ*: *ಕರಾವಳಿ ಮಲೆನಾಡಿಗೆ ಭಾರೀ ಮಳೆ, ಬೆಂಗಳೂರಿಗೂ ವರ್ಷಧಾರೆ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ತಾಪಮಾನ ಇಳಿಕೆಯಾಗಿದ್ದು, ಮಳೆ ವಾತಾವರಣ ಮುಂದುವರಿದಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯ ಸಾಧ್ಯತೆಯಿದ್ದು, ಉತ್ತರ ಒಳನಾಡಿನಲ್ಲಿ ಮಳೆ ಚಟುವಟಿಕೆ ತುಸು ಕಡಿಮೆಯಾಗುವ ನಿರೀಕ್ಷೆಯಿದೆ. ಭಾರತೀಯ ಹವಾಮಾನ ಇಲಾಖೆ ಕೂಡ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಿದೆ.
ದಕ್ಷಿಣ ಕರಾವಳಿ ಆಂಧ್ರಪ್ರದೇಶದ ಮೇಲಿದ್ದ ಮೇಲ್ಮ ಸುಳಿಗಾಳಿ ದುರ್ಬಲಗೊಂಡಿದ್ದರೂ, ಹಲವು ಹವಾಮಾನ ವ್ಯವಸ್ಥೆಗಳ ಪ್ರಭಾವದಿಂದ ಕರ್ನಾಟಕದಲ್ಲಿ ಮಳೆ ಮುಂದುವರಿಯುತ್ತಿದೆ. ಮುಂದಿನ ದಿನಗಳಲ್ಲೂ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಚಟುವಟಿಕೆ ಮುಂದುವರಿಯುವ ಸಾಧ್ಯತೆ ಇದೆ.
ಇಂದು ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದ್ದು, ನಾಳೆ ಕೂಡ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇನ್ನೂ ಅಕ್ಟೋಬರ್ 7 ಮತ್ತು 8ರಂದು ಗುಡುಗು-ಸಿಡಿಲಿನೊಂದಿಗೆ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಅಕ್ಟೋಬರ್ 9ರಂದು ಕರಾವಳಿ ಭಾಗಕ್ಕೆ ಯಾವುದೇ ವಿಶೇಷ ಎಚ್ಚರಿಕೆ ಇಲ್ಲ ಎಂದು ಐಎಂಡಿ ತಿಳಿಸಿದೆ.
ದಕ್ಷಿಣ ಒಳನಾಡು ಕರ್ನಾಟಕದಲ್ಲೂ ಇಂದು ಮತ್ತು ನಾಳೆ ಭಾರೀ ಮಳೆಯ ಎಚ್ಚರಿಕೆ ಇದೆ. ಅಕ್ಟೋಬರ್ 7ರಂದು ಗುಡುಗು-ಸಿಡಿಲಿನೊಂದಿಗೆ ಮಳೆಯ ಸಾಧ್ಯತೆಯಿದ್ದು, ಬಳಿಕ ಮಳೆ ಚಟುವಟಿಕೆ ಕಡಿಮೆಯಾಗುವ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಕರಾವಳಿ ಪ್ರದೇಶದಲ್ಲಿ ಗುಡುಗು-ಸಿಡಿಲು ಹಾಗೂ ಬಲವಾದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇರುವುದರಿಂದ ಜನರು ಮುನ್ನೆಚ್ಚರಿಕೆ ವಹಿಸಬೇಕಿದೆ.
ಮಲೆನಾಡಿನ ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗದ ಹಲವು ಭಾಗಗಳಲ್ಲೂ ಮಳೆ ಮುಂದುವರಿಯುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಇತರೆ ಭಾಗಗಳಲ್ಲೂ ಅಲ್ಲಲ್ಲಿ ಮಳೆಯಾಗುವ ನಿರೀಕ್ಷೆ ಇದೆ.
ಇನ್ನೊಂದೆಡೆ, ಉತ್ತರ ಒಳನಾಡು ಕರ್ನಾಟಕದಲ್ಲಿ ಅಕ್ಟೋಬರ್ 5ರಂದು ಗುಡುಗು-ಸಿಡಿಲಿನ ಸಾಧ್ಯತೆ ಇದ್ದರೂ, ಇಂದು ವಿಶೇಷ ಮಳೆ ಎಚ್ಚರಿಕೆ ಇಲ್ಲ. ಹೀಗಾಗಿ ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆಯಿದೆ.
ನೈಋತ್ಯ ಮುಂಗಾರು ದೇಶದ ಹಲವು ಭಾಗಗಳಿಂದ ಹಂತ ಹಂತವಾಗಿ ಹಿಮ್ಮೆಟ್ಟುತ್ತಿದೆ. ಮುಂದಿನ 2ರಿಂದ 3 ದಿನಗಳಲ್ಲಿ ಮಹಾರಾಷ್ಟ್ರ, ಛತ್ತೀಸ್ಗಢ, ತೆಲಂಗಾಣ ಹಾಗೂ ಉತ್ತರ ಒಳನಾಡು ಕರ್ನಾಟಕದ ಕೆಲವು ಭಾಗಗಳಿಂದಲೂ ಮುಂಗಾರು ಮತ್ತಷ್ಟು ಹಿಮ್ಮೆಟ್ಟಲು ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಹವಾಮಾನ ಹೇಗಿರಲಿದೆ?
ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ನಗರದಲ್ಲಿ ಮಳೆ ಚಟುವಟಿಕೆ ಮುಂದುವರಿಯುವ ಸಾಧ್ಯತೆಯನ್ನು ಇತ್ತೀಚಿನ ಮುನ್ಸೂಚನೆಗಳೂ ಸೂಚಿಸಿವೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ನೀರು ನಿಲ್ಲುವ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಕರಾವಳಿ ಭಾಗದಲ್ಲಿ ಸಮುದ್ರಕ್ಕೆ ತೆರಳುವ ಮೀನುಗಾರರು ಹವಾಮಾನ ಇಲಾಖೆಯ ಮುನ್ಸೂಚನೆಗಳನ್ನು ಗಮನಿಸುವಂತೆ ಸೂಚಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




