*ಈ ಮಾರ್ಗದಲ್ಲಿ ಬರೋಬ್ಬರಿ 60 ದಿನಗಳ ಕಾಲ ಸಂಚಾರ ಬಂದ್; ಪರ್ಯಾಯ ರಸ್ತೆ ಯಾವುದು?*

ಪ್ರಗತಿವಾಹಿನಿ ಸುದ್ದಿ: ಮೊದಲೇ ಸಂಚಾರ ದಟ್ಟಣೆಯಿಂದ ಪ್ರತಿ ದಿನ ಪರದಾಡುವ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಮುಖ ರಸ್ತೆಯೊಂದು ಬರೋಬ್ಬರಿ 60 ದಿನಗಳ ಕಾಲ ಬಂದ್ ಆಗಲಿದೆ. ಇದು ವಾಹನ ಸವಾರರನ್ನು ಇನ್ನಷ್ಟು ತೊಂದರೆಗೆ ಸಿಲುಕಿಸಲಿದೆ.
ಹೌದು. ಬೆಂಗಳೂರು ನಗರದ ರೇಸ್ಕೋರ್ಸ್ ರಸ್ತೆಯಲ್ಲಿ ಇಂದಿನಿಂದ 60 ದಿನಗಳ ಕಾಲ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಮಳೆ ನೀರು ಕಾಲುವೆ ಮತ್ತು ಒಳ ಚರಂಡಿ ಕಾಮಗಾರಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ 60 ದಿನಗಳ ಕಾಲ ವಾಹನ ಸಂಚಾರ ಈ ಮಾರ್ಗದಲ್ಲಿ ಇರುವುದಿಲ್ಲ.
ಜಿಬಿಎ, ರೇಸ್ಕೋರ್ಸ್ ರಸ್ತೆಯ ಮೌರ್ಯ ಜಂಕ್ಷನ್ನಿಂದ ಹರೇಕೃಷ್ಣ ರಸ್ತೆ ಜಂಕ್ಷನ್ವರೆಗೆ ಈಗಾಗಲೇ ವೈಟ್ ಟಾಪಿಂಗ್ ಕಾಮಗಾರಿ ನಡೆಸುತ್ತಿದೆ. ಇದೇ ರಸ್ತೆಯಲ್ಲಿ ಹೊಸದಾಗಿ ಮಳೆ ನೀರು ಚರಂಡಿ ಮತ್ತು ಒಳ ಚರಂಡಿ ಕಾಮಗಾರಿ ಆರಂಭವಾಗಲಿದ್ದು, ಸುಗಮ ವಾಹನ ಸಂಚಾರದ ದೃಷ್ಟಿಯಿಂದ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಹೈಗ್ರೌಂಡ್ಸ್ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.
ರೇಸ್ಕೋರ್ಸ್ ರಸ್ತೆಯ ಟ್ರಿಲೈಟ್ ಜಂಕ್ಷನ್ನಿಂದ ಮೌರ್ಯ ಜಂಕ್ಷನ್ವರೆಗೆ ಹಾಗೂ ಶಿವಾನಂದ ಜಂಕ್ಷನ್ನಿಂದ ಮೌರ್ಯ ಜಂಕ್ಷನ್ವರೆಗೆ ಎಲ್ಲಾ ವಾಹನಗಳ ಸಂಚಾರವನ್ನು 60 ದಿನಗಳ ಕಾಲ ನಿರ್ಬಂಧಿಸಲಾಗಿದೆ. ವಾಹನ ಸವಾರರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ಪರ್ಯಾಯ ರಸ್ತೆ ಮಾರ್ಗ:
ಸ್ಯಾಂಕಿ ರಸ್ತೆಯಿಂದ ಕೆ.ಆರ್.ಮಾರ್ಕೆಟ್ ಕಡೆಗೆ ಸಂಚರಿಸುವ ಬಿಎಂಟಿಸಿ ಬಸ್ಗಳು, ಖಾಸಗಿ ಬಸ್ಗಳು ಹಾಗೂ ಭಾರಿ ಸರಕು ಸಾಗಣೆ ವಾಹನಗಳು ವಿಂಡ್ಸರ್ ಮ್ಯಾನರ್ ಬ್ರಿಡ್ಜ್ನಿಂದ ಎಲ್ಆರ್ಡಿಇ ಜಂಕ್ಷನ್ ಕಡೆಗೆ ಹೋಗಬೇಕು. ನಂತರ ಎಲ್ ಆರ್ಡಿಇ ಜಂಕ್ಷನ್ನಲ್ಲಿ ಬಲ ತಿರುವು ಪಡೆದು ಬಸವೇಶ್ವರ ಜಂಕ್ಷನ್ ಮೂಲಕ ಸಾಗಬೇಕು.
ಸ್ಯಾಂಕಿ ರಸ್ತೆಯಿಂದ ಮೆಜೆಸ್ಟಿಕ್ ಕಡೆಗೆ ಸಂಚರಿಸುವ ಬಿಎಂಟಿಸಿ ಬಸ್ಗಳು, ಖಾಸಗಿ ಬಸ್ಗಳು ಹಾಗೂ ಭಾರಿ ಸರಕು ಸಾಗಣೆ ವಾಹನಗಳು ಕುಮಾರಕೃಪಾ ರಸ್ತೆ ಮೂಲಕ ಶಿವಾನಂದ ಸರ್ಕಲ್ಗೆ ಹೋಗಿ ಬಲ ತಿರುವು ಪಡೆದು ಎಸ್.ಸಿ.ರಸ್ತೆಯಲ್ಲಿ ಎಡಕ್ಕೆ ತಿರುಗಿ ಮುಂದೆ ಸಾಗಬೇಕು.
ಹಳೆ ಜೆಡಿಎಸ್ ಕಚೇರಿ ಜಂಕ್ಷನ್ನಿಂದ ಟ್ರಿಲೈಟ್ ಜಂಕ್ಷನ್ ಕಡೆಗೆ ಹೋಗುವ ವಾಹನಗಳು ಹಳೆ ಜೆಡಿಎಸ್ ಕಚೇರಿ ಜಂಕ್ಷನ್ನಲ್ಲಿ ಎಡ ಭಾಗದ ರಸ್ತೆಯಲ್ಲಿ ಟ್ರಿಲೈಟ್ ಜಂಕ್ಷನ್ ಕಡೆಗೆ ಮತ್ತು ರೇಸ್ ವ್ಯೂ ಜಂಕ್ಷನ್ನಲ್ಲಿಎಡ ತಿರುವು ಪಡೆದು ಕುಮಾರ ಕೃಪಾ ರಸ್ತೆ ಮೂಲಕ ಶಿವಾನಂದ ಜಂಕ್ಷನ್ ಕಡೆಗೆ ಸಂಚರಿಸಬೇಕು.
ಟ್ರಿಲೈಟ್ ಜಂಕ್ಷನ್ನಿಂದ ಮೌರ್ಯ ಜಂಕ್ಷನ್ ಕಡೆಗೆ ಹೋಗುವ ಎಲ್ಲಾ ವಾಹನಗಳು ಶಿವಾನಂದ ಮೇಲ್ಸೇತುವೆ ಮೂಲಕ ಸಾಗಿ ನೆಹರೂ ಸರ್ಕಲ್ನಿಂದ ಎಸ್.ಸಿ.ರಸ್ತೆಗೆ ತಲುಪಿ ಮೆಜೆಸ್ಟಿಕ್ ಕಡೆಗೆ ಸಂಚರಿಸಬೇಕು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



