*KPSC ನೇಮಕಾತಿ ಅಕ್ರಮ ತನಿಖೆ ಚುರುಕು*: *ED ಮುಂದೆ ನಾಲ್ವರ ಹೆಸರು ಬಾಯ್ಬಿಟ್ಟ ಜ್ಞಾನೇಂದ್ರ ಕುಮಾರ್*

ಪ್ರಗತಿವಾಹಿನಿ ಸುದ್ದಿ: ಕೆಪಿಎಸ್ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ಆರೋಪದ ತನಿಖೆ ಇದೀಗ ಮತ್ತಷ್ಟು ತೀವ್ರಗೊಂಡಿದೆ. ಜಾರಿ ನಿರ್ದೇಶನಾಲಯ (ED) ಮತ್ತು ಸಿಐಡಿ ತನಿಖೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾತ್ರವಲ್ಲದೆ, ನೇಮಕಾತಿಯ ವಿವಿಧ ಹಂತಗಳಲ್ಲಿ ಅಭ್ಯರ್ಥಿಗಳಿಂದ ಹಣ ಪಡೆಯಲಾಗಿದೆ ಎಂಬ ಆರೋಪಗಳೂ ಬೆಳಕಿಗೆ ಬಂದಿವೆ.
ಕೆಪಿಎಸ್ಸಿಯ ಮಾಜಿ ಪರೀಕ್ಷಾ ನಿಯಂತ್ರಕ ಹಾಗೂ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗ್ಯಾಂಗ್ವಾರ್ ವಿಚಾರಣೆಯಿಂದ ಹಲವು ಮಹತ್ವದ ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ. ವಿಚಾರಣೆ ವೇಳೆ ಕೆಪಿಎಸ್ಸಿಯ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಪಾತ್ರದ ಬಗ್ಗೆ ಮಾಹಿತಿ ನೀಡಲಾಗಿದೆ ಎನ್ನಲಾಗುತ್ತಿದೆ.
ಮೂಲ ಮಾಹಿತಿಯ ಪ್ರಕಾರ ಶಿವಶಂಕರಪ್ಪ ಸಾಹುಕಾರ್, ಬಿ.ವಿ. ಗೀತಾ, ಶಾಂತಾ ಹೊಸಮನಿ ಸೇರಿದಂತೆ ನಾಲ್ವರ ಹೆಸರು ವಿಚಾರಣೆ ವೇಳೆ ಪ್ರಸ್ತಾಪವಾಗಿದೆ. ತನಿಖೆಯಲ್ಲಿ ಅಭ್ಯರ್ಥಿಗಳ ಅಂಕ ಹಾಗೂ ಮೆರಿಟ್ ಪಟ್ಟಿಯಲ್ಲಿನ ಸ್ಥಾನಮಾನ ಆಧರಿಸಿ ಹಣದ ಬೇಡಿಕೆ ಇಡಲಾಗುತ್ತಿತ್ತು ಎಂಬ ಆರೋಪವೂ ಮುನ್ನೆಲೆಗೆ ಬಂದಿದೆ. ಮೆರಿಟ್ ಪಟ್ಟಿಯಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳ ವಿವರಗಳನ್ನು ಕೆಲವರು ಸಂಗ್ರಹಿಸಿ, ಮಧ್ಯವರ್ತಿಗಳ ಮೂಲಕ ಸಂಪರ್ಕಿಸುತ್ತಿದ್ದರು ಎಂಬ ಮಾಹಿತಿ ತನಿಖಾ ಸಂಸ್ಥೆಗಳಿಗೆ ಸಿಕ್ಕಿದೆ.
ಸರ್ಕಾರಿ ಉದ್ಯೋಗ ಕೊಡಿಸುವ ಭರವಸೆ ನೀಡಿ ಅಭ್ಯರ್ಥಿಗಳಿಂದ ಮುಂಗಡವಾಗಿ ಲಕ್ಷಾಂತರ ರೂಪಾಯಿ ಪಡೆಯಲಾಗುತ್ತಿತ್ತು. ನೇಮಕಾತಿಯ ಯಾವ ಹಂತದಲ್ಲಿ ಎಷ್ಟು ಹಣ ನೀಡಬೇಕು ಎಂಬುದು ಸ್ಪಷ್ಟವಾಗದ ಕಾರಣ ಕೆಲ ಅಭ್ಯರ್ಥಿಗಳು ದೂರು ನೀಡಲು ಹಿಂದೇಟು ಹಾಕಿದ್ದರು ಎಂಬ ಮಾಹಿತಿಯೂ ತನಿಖೆಯಲ್ಲಿ ತಿಳಿದುಬಂದಿದೆ.
ಇನ್ನೊಂದೆಡೆ, 2026ರ ಜನವರಿ 8 ಮತ್ತು 9ರಂದು ನಡೆದ 400 ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪ ಈಗಾಗಲೇ ತನಿಖೆಯ ಕೇಂದ್ರದಲ್ಲಿದೆ. ED ಪ್ರಕಾರ, ಆಗ ಪರೀಕ್ಷಾ ನಿಯಂತ್ರಕರಾಗಿದ್ದ ಗ್ಯಾಂಗ್ವಾರ್ ಪ್ರಶ್ನೆಪತ್ರಿಕೆ ಹಾಗೂ ಉತ್ತರಗಳನ್ನು ಪರೀಕ್ಷೆಗೆ ಮುನ್ನ ಮಧ್ಯವರ್ತಿಗೆ ನೀಡಿದ್ದರು ಎಂಬ ಆರೋಪವಿದೆ.
ಪ್ರಶ್ನೆಪತ್ರಿಕೆ ಪಡೆದ ಅಭ್ಯರ್ಥಿಗಳನ್ನು ಬೆಂಗಳೂರಿನ ಸುತ್ತಮುತ್ತಲಿನ ರೆಸಾರ್ಟ್ಗಳು ಹಾಗೂ ವಿಲ್ಲಾಗಳಲ್ಲಿ ಇರಿಸಿ ಉತ್ತರಗಳನ್ನು ನೆನಪಿಸಿಕೊಳ್ಳುವಂತೆ ಮಾಡಲಾಗಿತ್ತು ಎಂಬ ಆರೋಪವೂ ತನಿಖೆಯಲ್ಲಿ ದಾಖಲಾಗಿದೆ. ಕೆಲ ಅಭ್ಯರ್ಥಿಗಳಿಂದ ಪ್ರಶ್ನೆಪತ್ರಿಕೆ ಪಡೆಯಲು ₹30ರಿಂದ ₹40 ಲಕ್ಷದವರೆಗೆ ಹಣ ಪಡೆಯಲಾಗಿತ್ತು ಎಂದು ED ಆರೋಪಿಸಿದೆ.
ಈ ಪ್ರಕರಣದಲ್ಲಿ ಮಧ್ಯವರ್ತಿ ಬಸವರಾಜ್ ಕನ್ನಾಲೆ ಮೂಲಕ ಹಣದ ವಹಿವಾಟು ನಡೆದಿರುವ ಮಾಹಿತಿ ಲಭ್ಯವಾಗಿದ್ದು, ED ತನಿಖೆಯಲ್ಲಿ ಗ್ಯಾಂಗ್ವಾರ್ಗೆ ₹1.3 ಕೋಟಿ ಹಣ ಹಾಗೂ ಚಿನ್ನಾಭರಣ ನೀಡಿರುವ ಆರೋಪವೂ ದಾಖಲಾಗಿದೆ. ಈ ಆರೋಪಗಳ ಕುರಿತು ತನಿಖೆ ಮುಂದುವರಿದಿದೆ.
ಸಿಐಡಿ ತನಿಖೆಯಲ್ಲಿ ಕೆಲವು ಅಭ್ಯರ್ಥಿಗಳ ಉತ್ತರಗಳಲ್ಲಿ ಅಸಾಮಾನ್ಯ ಪ್ರಮಾಣದ ಸಾಮ್ಯತೆ ಪತ್ತೆಯಾಗಿರುವುದೂ ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ. 400 ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮದ ಜೊತೆಗೆ, ಪರೀಕ್ಷೆಯ ನಂತರ ಮೆರಿಟ್ ಪಟ್ಟಿ ಹಾಗೂ ಆಯ್ಕೆ ಪ್ರಕ್ರಿಯೆಯಲ್ಲೂ ಹಣದ ಪ್ರಭಾವವಿತ್ತೇ ಎಂಬುದನ್ನು ತನಿಖಾ ಸಂಸ್ಥೆಗಳು ಪರಿಶೀಲಿಸುತ್ತಿವೆ. ಹೀಗಾಗಿ ಕೆಪಿಎಸ್ಸಿ ನೇಮಕಾತಿ ಅಕ್ರಮ ಪ್ರಕರಣ ಇದೀಗ ಕೇವಲ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವಾಗಿ ಉಳಿದಿಲ್ಲ. ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಸೋರಿಕೆ, ಅಭ್ಯರ್ಥಿಗಳಿಂದ ಹಣ ಸಂಗ್ರಹ ಹಾಗೂ ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆಯೇ ಎಂಬ ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


