Latest

*ನಾನು ಸಾವಿಗೆ ಅಂಜಲ್ಲ, ಉದ್ದೇಶಪೂರ್ವಕ ವಿಮಾನಪತನಕ್ಕೆ ಯತ್ನಿಸಿದ್ದೆ*: *ಫ್ಲೈ ದುಬೈ ಕೋ ಪೈಲಟ್*

ಪ್ರಗತಿವಾಹಿನಿ ಸುದ್ದಿ: ಇಸ್ರೇಲ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವನ್ನು ಉದ್ದೇಶಪೂರ್ವಕವಾಗಿ ಪತನಗೊಳಿಸಲು ಬಯಸಿದ್ದೆ ಎಂದು ಒಮಾನ್‌ನ ಸಹ-ಪೈಲಟ್ ಹಮಾಮ್ ಅಲ್-ಹಮಾಮಿ ಸೌದಿ ಅರೇಬಿಯಾದಲ್ಲಿ ನಡೆದ ಪ್ರಾಥಮಿಕ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. “ಸಾವಿಗೆ ನಾನು ಹೆದರುವುದಿಲ್ಲ” ಎಂಬ ಅರ್ಥದ ಹೇಳಿಕೆಯನ್ನೂ ನೀಡಿದ್ದಾನೆ.

ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ FZ1073 ವಿಮಾನದಲ್ಲಿ ಸೆಪ್ಟೆಂಬರ್ 30ರಂದು ಈ ಘಟನೆ ನಡೆದಿತ್ತು. ಹಮಾಮಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಕಾಕ್‌ಪಿಟ್‌ನಲ್ಲಿದ್ದ ತುರ್ತು ಕ್ರ್ಯಾಶ್ ಆಕ್ಸ್‌ನಿಂದ ದಾಳಿ ನಡೆಸಿ, ವಿಮಾನದ ನಿಯಂತ್ರಣ ಪಡೆಯಲು ಯತ್ನಿಸಿದ್ದಾನೆ ಎಂದು ತನಿಖಾ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದರೂ ಸ್ಮಿತ್ ಮಚ್ಚಾರ್ ಕಾಕ್‌ಪಿಟ್ ಬಾಗಿಲು ತೆರೆಯಲು ಸಾಧ್ಯವಾಗಿತ್ತು. ಬಳಿಕ ಪ್ರಯಾಣಿಕರು ಮತ್ತು ಸಿಬ್ಬಂದಿ ಒಳಗೆ ಪ್ರವೇಶಿಸಿ ಹಮಾಮ್‌ನನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ವಿಮಾನದಲ್ಲಿದ್ದ ಇತರ ಪೈಲಟ್‌ಗಳ ನೆರವಿನಿಂದ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್‌ನಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು.

ವಿಮಾನ ಪತನದ ಪ್ರಯತ್ನದ ಉದ್ದೇಶವನ್ನು ಹಮಾಮ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂಬ ವರದಿ ಇದೀಗ ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದೆ. ಆದರೆ ದಾಳಿಯ ಹಿಂದಿನ ಸಂಪೂರ್ಣ ಉದ್ದೇಶ, ಸಂಪರ್ಕಗಳು ಮತ್ತು ಹಿನ್ನೆಲೆ ಕುರಿತು ತನಿಖೆ ಇನ್ನೂ ಮುಂದುವರಿದಿದೆ.

ಇದರ ನಡುವೆ ಹಮಾಮ್‌ನ ಹಳೆಯ ಹಿನ್ನೆಲೆಯೂ ತನಿಖಾಧಿಕಾರಿಗಳ ಗಮನ ಸೆಳೆದಿದೆ. ಒಮಾನ್ ಏರ್‌ನಲ್ಲಿ ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಆತನಲ್ಲಿ ತೀವ್ರಗಾಮಿ ವಿಚಾರಗಳಿಗೆ ಸಂಬಂಧಿಸಿದ ವಸ್ತುಗಳು ಪತ್ತೆಯಾಗಿದ್ದವು ಎಂಬ ವರದಿಗಳಿವೆ. ಬಳಿಕ ಒಮಾನ್‌ನಲ್ಲಿ ವಿಮಾನ ಹಾರಾಟದಿಂದ ಆತನನ್ನು ದೂರ ಇಡಲಾಗಿತ್ತು ಎಂದು ವರಯಾಗಿದೆ.

ಆದರೆ ನಂತರ ಹಮಾಮ್‌ಗೆ ಫ್ಲೈದುಬೈನಲ್ಲಿ ಪೈಲಟ್ ಆಗಿ ಕೆಲಸ ಸಿಕ್ಕಿದ್ದು, ಈ ನೇಮಕಾತಿ ಪ್ರಕ್ರಿಯೆಯಲ್ಲಿ ಹಿಂದಿನ ಹಿನ್ನೆಲೆಯ ಪರಿಶೀಲನೆ ಹೇಗೆ ನಡೆಯಿತು ಎಂಬ ಪ್ರಶ್ನೆ ಇದೀಗ ಶುರುವಾಗಿದೆ. ಯುಎಇ ಸೇರಿದಂತೆ ಹಲವು ದೇಶಗಳ ತನಿಖಾ ಸಂಸ್ಥೆಗಳು ಈ ವಿಚಾರವನ್ನು ಪರಿಶೀಲಿಸುತ್ತಿವೆ.

ಇನ್ನೊಂದೆಡೆ, ಹಮಾಮ್‌ನನ್ನು ಪ್ರಯಾಣಿಕರು ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ನಡೆದ ಬೆಳವಣಿಗೆಯ ಬಗ್ಗೆಯೂ ಹೊಸ ಮಾಹಿತಿ ಹೊರಬಿದ್ದಿದೆ. ಹಮಾಮ್‌ನ ಕೈಗಳನ್ನು ಹಿಂದಕ್ಕೆ ಕಟ್ಟಿ ಹಿಡಿದಿದ್ದ ಪ್ರಯಾಣಿಕರಿಗೆ ವಿಮಾನದ ಸಿಬ್ಬಂದಿಯ ಕೆಲವರು ಆತನನ್ನು ಬಿಟ್ಟುಬಿಡುವಂತೆ ಕೇಳಿಕೊಂಡಿದ್ದರು ಎಂದು ಇಬ್ಬರು ಪ್ರಯಾಣಿಕರು ಆರೋಪಿಸಿದ್ದಾರೆ.

ಆದರೆ ಈ ಆರೋಪವು ಪ್ರಯಾಣಿಕರ ಹೇಳಿಕೆಯನ್ನು ಆಧರಿಸಿದೆ. ಸಿಬ್ಬಂದಿ ಏಕೆ ಹೀಗೆ ಕೇಳಿದರು ಎಂಬುದಕ್ಕೆ ಸ್ಪಷ್ಟ ಕಾರಣ ಇನ್ನೂ ಬಹಿರಂಗವಾಗಿಲ್ಲ. ಈ ವಿಚಾರವೂ ತನಿಖೆಯ ಭಾಗವಾಗುವ ಸಾಧ್ಯತೆ ಇದೆ. ಫ್ಲೈದುಬೈ ಘಟನೆ ಬಳಿಕ ವಿಮಾನಯಾನ ಭದ್ರತೆ, ಪೈಲಟ್‌ಗಳ ಹಿನ್ನೆಲೆ ಪರಿಶೀಲನೆ ಹಾಗೂ ವಿವಿಧ ದೇಶಗಳ ನಡುವೆ ಗುಪ್ತಚರ ಮಾಹಿತಿ ಹಂಚಿಕೆಯ ಕುರಿತು ಹಲವು ಪ್ರಶ್ನೆಗಳು ಎದ್ದಿವೆ. ಪ್ರಕರಣದ ಸಂಪೂರ್ಣ ತನಿಖೆಯ ಬಳಿಕವೇ ದಾಳಿಯ ನಿಖರ ಹಿನ್ನೆಲೆ ಮತ್ತು ಹೊಣೆಗಾರಿಕೆ ಸ್ಪಷ್ಟವಾಗಲಿದೆ.

*ಇರಾನ್ ಅಧ್ಯಕ್ಷ ನನ್ನ ಪಾದ ಸ್ಪರ್ಶಿಸಿಲ್ಲ: ಸತೀಶಾಚಾರ್ಯ ಸ್ವಾಮೀಜಿ* – Pragati Vahini

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button