Kannada NewsKarnataka News

ನೀವು ಓದಲೇಬೇಕಾದ 10 ಪ್ರಮುಖ ಸುದ್ದಿಗಳು -10 Important News You Must Read

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ನೆರೆ ಸಂತ್ರಸ್ತರಿಗೆ ಸಹಾಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪ್ರವಾಹ ಸಂತ್ರಸ್ತರ ನೆರವಿಗಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಬ್ಬಂದಿಗಳು ಒಂದು ದಿನದ ವೇತನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ.
ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಹಲವಾರು ಕುಟುಂಬಗಳು ಬಿದಿಗೆ ಬಂದಿದ್ದು, ಅಂತಹವರ ನೆರವಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸಹಾಯ ಹಸ್ತ ಚಾಚಿದೆ.
ವಿಶ್ವವಿದ್ಯಾಲಯದಲ್ಲಿ ಖಾಯಂ ಸೇವೆ ಸಲ್ಲಿಸುತ್ತಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ತಮ್ಮ ಒಂದು ದಿನದ ಸಂಬಳವನ್ನು ಮುಖ್ಯ ಮಂತ್ರಿ ಪರಿಹಾರ ನಿಧಿಗೆ ನೀಡಿದ್ದು, ಶುಕ್ರವಾರ (ಸೆ.೧೩) ಜಿಲ್ಲಾಧಿಕಾರಿಗಳಾದ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರಿಗೆ ರೂ. ೫,೯೬,೭೨೭ ಗಳ ಮೊತ್ತದ ಡಿ.ಡಿ ವಿತರಿಸಿದರು.
ಈ ಸಂದರ್ಭದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಎಮ್.ರಾಮಚಂದ್ರ ಗೌಡ, ಹಣಕಾಸು ಅಧಿಕಾರಿ ಶಂಕರಾನಂದ ಬನಶಂಕರಿ, ಕುಲಸಚಿವರಾದ ಪ್ರೋ. ಬಸವರಾಜ ಪದ್ಮಶಾಲಿ ಅವರು ಉಪಸ್ಥಿತರಿದ್ದರು.

ಲಂಚ ಪಡೆದ ದ್ವಿತೀಯ ದರ್ಜೆ ಸಹಾಯಕನಿಗೆ ಶಿಕ್ಷೆ

೨೦೧೪-೧೫ ನೇ ಸಾಲಿನ ರಾಷ್ಟ್ರೀಯ ಕೌಟುಂಬಿಕ ನೆರವು ಯೋಜನೆಯಡಿಯಲ್ಲಿ ಮಂಜೂರಾಗಿದ್ದ ಹಣದ ಚೆಕ್ ನೀಡಲು ಲಂಚ ಸ್ವೀಕರಿಸಿದ ಗೋಕಾಕ ತಹಶೀಲ್ದಾರ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ನಿಂಗಪ್ಪ ಕರೆಪ್ಪ ಕುಂಬಾರ ಅವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ದ್ವಿತೀಯ ದರ್ಜೆ ಸಹಾಯಕ ನಿಂಗಪ್ಪ ಕರೆಪ್ಪ ಕುಂಬಾರ ಅವರು ಬಾಳವ್ವ ಭೀಮಪ್ಪಾ ಮಳವಾಡ ಸಾ. ಮಾಮಲದಿನ್ನಿ, ತಾ. ಗೋಕಾಕ ಅವರಿಗೆ ಮಂಜೂರಾಗಿದ್ದ ರೂ ೨೦,೦೦೦ ರೂ ಹಣದ ಚೆಕ್ ನೀಡಲು ರೂ. ೧೦೦೦ ಲಂಚ ಪಡೆದುಕೊಂಡಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಂಡಿದ್ದರು.
ಏಪ್ರೀಲ್ ೨೪, ೨೦೧೫ ರಂದು ದಾಖಲಾದ ಪ್ರಕರಣದ ವಿಚಾರಣೆಯನ್ನು ನಡೆಸಿದ ೪ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಧೀಶರಾದ ಶಶಿಧರ ಶೆಟ್ಟಿ ಅವರು ಆಪಾದಿತ ನಿಂಗಪ್ಪ ಕರೆಪ್ಪ ಕುಂಬಾರ ದ್ವಿ.ದ.ಸ. ತಹಶೀಲ್ದಾರ ಕಛೇರಿ, ಗೋಕಾಕ ಇವರನ್ನು ಸೆಪ್ಟೆಂಬರ ೧೩ ರಂದು ತಪ್ಪಿತಸ್ಥರೆಂದು ತೀರ್ಪು ನೀಡಿ ಕಲಂ ೭, ಲಂಚ ಪ್ರತಿಬಂಧಕ ಕಾಯ್ದೆ ೧೯೮೮ ನೇದ್ದರಲ್ಲಿ ಆಪಾದಿತರಿಗೆ ತಲಾ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ ೭,೦೦೦ ಗಳ ದಂಡ ವಿಧಿಸಿ ಆದೇಶ ಹೊರಡಿಸಿರುತ್ತಾರೆ.
ಕಲಂ ೧೩(೧) ಡಿ ಸಹ ಕಲಂ ೧೩ (೨) ಲಂಚ ಪ್ರತಿಬಂಧಕ ಕಾಯ್ದೆ ೧೯೮೮ ಲಂಚ ಪ್ರತಿಬಂಧಕ ಕಾಯ್ದೆ ೧೯೮೮ ನೇದ್ದರಲ್ಲಿ ಆಪಾದಿತರಿಗೆ ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ ೧೦,೦೦೦ ಗಳ ದಂಡ ವಿಧಿಸಿ ಆದೇಶ ಹೊರಡಿಸಿರುತ್ತಾರೆ.
ಸದರಿ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಠಾಣೆಯ ಅಂದಿನ ನಿರೀಕ್ಷಕರಾದ ಬಿ.ಎಸ್.ಪಾಟೀಲ ರವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕರಾದ ಪ್ರವೀಣ ಅಗಸಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

 ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ

ಮಾನವ ಸಮಾಜದಲ್ಲಿ ಒಂದೇ ಧರ್ಮ; ಒಂದೇ ಜಾತಿ ಹಾಗೂ ಒಂದೇ ದೇವರು ಎನ್ನುವ ಘೋಷಣೆಯನ್ನು ೧೫೦ ವರ್ಷಗಳ ಹಿಂದೆ ಮೊಳಗಿಸಿದ ಮಹಾನ್ ವ್ಯಕ್ತಿ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಗಳು ಎಂದು ಬಿಲ್ಲವ ಸಮಾಜದ ಮುಖಂಡ ಗಂಗಾಧರ ಎಮ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಯುಕ್ತಾಶ್ರಯದಲ್ಲಿ ಶುಕ್ರವಾರ(ಸೆ.೧೩) ಬಸವರಾಜ ಕಟ್ಟೀಮನಿ ಸಭಾಭವನದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ತೀವ್ರ ಅಸಮಾನತೆ ತಾಂಡವವಾಡುತ್ತಿದ್ದ ಕಾಲದಲ್ಲಿ ಹಿಂದುಳಿದ ಸಮುದಾಯದ ಜನರು ಸ್ವಾಭಿಮಾನದಿಂದ ಬದುಕಬೇಕು ಎಂದು ಹೇಳುವ ಮೂಲಕ ಸಾಮಾಜಿಕ ಹಾಗೂ ಸಮಾನತೆ ಕ್ರಾಂತಿ ಹುಟ್ಟುಹಾಕುವಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಪಾತ್ರ ಪ್ರಮುಖವಾದದ್ದು ಎಂದರು.

ಪ್ರತಿಯೊಬ್ಬರು ಕೂಡ ತಮ್ಮ ತಮ್ಮ ಸಮಾಜದಲ್ಲಿ ಕೆಳಮಟ್ಟದಲ್ಲಿರುವವರಿಗೆ ಸಹಾಯ ಮಾಡಿದರೆ ಎಲ್ಲರೂ ಮುಖ್ಯ ವಾಹಿನಿಗೆ ಬರುತ್ತಾರೆ ಎಂದು ಸಾರಿದ ಕೀರ್ತಿ ನಾರಾಯಣಗುರುಗಳಿಗೆ ಸಲ್ಲುತ್ತದೆ.
ವಿದ್ಯೆಯಾಗಲಿ ಅಥವಾ ಮತ್ತಾವುದೇ ವಿಷಯದಲ್ಲಾಗಲಿ ನಿಮ್ಮ ಜಾತಿಯವರಾಗಲಿ ಬೇರಾವುದೇ ಜಾತಿಯವರಾಗಲಿ ಯಾವುದೇ ಭೇದವಿಲ್ಲದೆ ಅವರಿಗೆ ನಿಮ್ಮಿಂದ ಎಷ್ಟು ಸಹಾಯವಾಗುತ್ತದೆ ಅಷ್ಟು ಸಹಾಯ ಮಾಡಿದರೆ ಅದೇ ಬ್ರಹ್ಮಶ್ರೀ ನಾರಾಯಣಗುರುಗಳಿಗೆ ಸಲ್ಲಿಸುವ ಸೇವೆ ಎಂದರು.

ಶೋಷಿತ ಸಮಾಜಗಳು ಕೇವಲ ಧಾರ್ಮಿಕವಾಗಿ ಅಲ್ಲದೆ ಶೈಕ್ಷ ಣಿಕವಾಗಿ ಅಭಿವೃದ್ಧಿ ಹೊಂದಿದರೆ ಮಾತ್ರ ಮುಂದೆ ಬರಲು ಸಾಧ್ಯ ಎಂದು ಪ್ರತಿಪಾದಿಸಿ ಮಾರ್ಗದರ್ಶನ ನೀಡಿದ ಮಹಾನ ದಾರ್ಶನಿಕರನ್ನು ಕೇವಲ ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ. ಇವರನ್ನು ಇಡೀ ಸಮಾಜದ ಆಸ್ತಿಯಾಗಿಸಬೇಕು ಎಂದು ಗಂಗಾಧರ ಎಮ್ ಹೇಳಿದರು.
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದಲ್ಲಿನ ಜನರು ಜಾತಿ ಭೇದ ಭಾವ, ಕೋಮು ಗಲಭೆಯಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಮಾಜ ವಿರೋಧಿ ಕೃತ್ಯಗಳಲ್ಲಿ ಕೈ ಹಾಕುತ್ತಿದ್ದಾರೆ. ಹಾಗಾಗಿ ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಇಂತಹ ಮಹಾನ್ ವ್ಯಕ್ತಿಗಳ ಜಯಂತಿ ಕಾರ್ಯಕ್ರಮಗಳನ್ನು ನಡೆಸಿ ಎಲ್ಲರನ್ನು ಒಂದುಗೂಡಿಸುವ ಕಾರ್ಯ ಮಾಡುತ್ತಿದೆ ಎಂದರು.

ಸಮಾಜದಲ್ಲಿ ನಡೆಯುವಂತಹ ದೌರ್ಜನ್ಯಗಳು, ಜಾತೀಯತೆಗಳು ಮರೆಮಾಚಿ ಇವತ್ತಿನ ಸಮಾಜದಲ್ಲಿ ಎಲ್ಲರಿಗೂ ಸಮಾನತೆಯತ್ತ ಬಂದು ತಾತ್ವಿಕ ಮೌಲ್ಯಗಳೊಂದಿಗೆ ಸಾಗಬೇಕು ಎಂದರು.
ಈ ಹಿಂದೆ ಕೇರಳ ರಾಜ್ಯದಲ್ಲಿ ಜಾತೀಯತೆ ತಾಂಡವಾಡುತ್ತಿದ್ದ ಸಂದರ್ಭದಲ್ಲಿ ಸಮಾಜ ಸುಧಾರಣಾ ಅಂಶಗಳನ್ನು ಮೈಗೂಡಿಸಿಕೊಂಡು ಹೋರಾಟ ಮಾಡಿ ಜನರನ್ನು ಸಮಾನ ಭಾವನೆಯತ್ತ ತಂದ ಶ್ರೇಯಸ್ಸು ಬ್ರಹ್ಮಶ್ರೀ ನಾರಾಯಣಗುರು ಅವರಿಗೆ ಸಲ್ಲುತ್ತದೆ ಎಂದರು.

ಜಿಲ್ಲೆಯಲ್ಲಿ ಬಾರಿ ಪ್ರಮಾಣದ ಪ್ರವಾಹ ಉಂಟಾಗಿ ಅನೇಕರು ಮನೆಗಳನ್ನು, ಬೆಳೆಗಳನ್ನು, ಜಾನುವಾರಗಳನ್ನು ಕಳೆದುಕೊಂಡಿದ್ದಾರೆ ಅಂತಹ ಜನರಿಗೆ ಬ್ರಹ್ಮಶ್ರೀ ನಾರಾಯಣಗುರು ಜಯಂತಿಗೆ ಬಿಡುಗಡೆಯಾಗುವ ಹಣವನ್ನು ನೀಡಬೇಕು ಎಂದು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕರಲ್ಲಿ ಸಮಾಜದ ಮುಖಂಡರು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಬಿಲ್ಲವ ಸಮಾಜದ ಅಧ್ಯಕ್ಷರಾದ ಸುನೀಲ್ ಪೂಜೇರಿ, ಶಿವಗಿರಿ ಸೊಸೈಟಿ ಅಧ್ಯಕ್ಷರು ಹಾಗೂ ಬಿಲ್ಲವ ಸಮಾಜದ ಕಾರ್ಯದರ್ಶಿಗಳಾದ ಸುಜನ ಕುಮಾರ, ಮಾದವ ಕೊಟ್ಯಾನ, ಸಂತೋಷ ಪೂಜಾರಿ, ಗಣೇಶ ಪೂಜಾರಿ, ಶಿವಲಿಂಗಪ್ಪ ಕರವಿನಕೊಪ್ಪ, ಯಶೋದರಾ ಕೊಟ್ಯಾನ, ಸುಂದರ ಪೂಜಾರಿ, ಚಂದ್ರು ಪೂಜಾರಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ವಿಶ್ವಕರ್ಮ ಜಯಂತಿ ಸೆ.೧೭ ರಂದು ಆಚರಣೆ

ವಿಶ್ವಕರ್ಮ ಜಯಂತಿಯನ್ನು ಸೆ.೧೭ ರಂದು ಜಿಲ್ಲಾಡಳಿತದ ವತಿಯಿಂದ ಸರಳ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಯಿತು.
ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಶುಕ್ರವಾರ(ಸೆ೧೩) ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಜಿ.ಟಿ.ದಿನೇಶಕುಮಾರ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯಕ್ತಾಶ್ರಯದಲ್ಲಿ ಸೆಪ್ಟೆಂಬರ್ ೧೭ ರಂದು ೪ನೇ ವರ್ಷದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ನಡೆಯಲಿದೆ.
ಸಮಾಜದ ಮುಖಂಡರ ಪ್ರಸ್ತಾಪಿಸಿದ ಪ್ರಕಾರ ಜಿಲ್ಲಾಧಿಕಾರಿ ಕಚೇರಿ ಸಭಾ ಭವನದಲ್ಲಿ ಸಮಾರಂಭವನ್ನು ನಡೆಸುವ ಕುರಿತು ನಂತರ ಅಂತಿಮ ನಿರ್ಧಾರ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ವಿಶ್ವಕರ್ಮ ಜಯಂತಿಯನ್ನು ಆಚರಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳಿಗೆ ಸಮಾಜದ ಮುಖಂಡರು ಮನವಿ ಮಾಡಿಕೊಂಡರು.
ವಿಶ್ವಕರ್ಮ ಜಯಂತಿಗೆ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನವನ್ನು ಪ್ರವಾಹಸಂತ್ರಸ್ತರಿಗೆ ನೀಡಲಾಗುವುದು ಎಂದು ವಿಶ್ವಕರ್ಮ ಸಮಾಜದ ಮುಖಂಡರು ತಿಳಿಸಿದರು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಿಶ್ವಕರ್ಮ ಸಮಾಜದ ಮುಖಂಡರುಗಳಾದ ಸಿ.ವಾಯ್ ಪತ್ತಾರ, ಪುಂಡಲೀಕ ಬಡಿಗೇರ, ಸುರೇಶ ಬಡಿಗೇರ, ಎಸ್.ಕೆ ಪತ್ತಾರ, ಎಲ್ ಎನ್ ಸುತಾರ, ಉಮೇಶ್ ಪತ್ತಾರ,ವಿಜಯ ಪತ್ತಾರ, ಎಸ್. ಬಿ ಸಾಬನ್ನವರ, ಪ್ರಭಾ ಪತ್ತಾರ, ಲಿಲಾವತಿ ಪತ್ತಾರ, ಸಾವಿತ್ರಿ ಕಮ್ಮಾರ, ಮಂಜುಳಾ ಪೋತದಾರ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ದಸರಾ ಕ್ರೀಡಾಕೂಟದ ಉದ್ಘಾಟನೆ

೨೦೧೯-೨೦ನೇ ಸಾಲಿನ ಬೆಳಗಾವಿ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟದ ಉದ್ಘಾಟನೆಯನ್ನು ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಸೆಪ್ಟೆಂಬರ ೧೩ ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾದ ಅರುಣ ಕಟಾಂಬಳೆ ಅವರು ಕ್ರೀಡಾ ಧ್ವಜಾರೋಹಣ ಮಾಡುವುದರ ಮೂಲಕ ಉದ್ಘಾಟಿಸಿದರು.
ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಬೆಳಗಾವಿ ಗ್ರಾಮೀಣ ಮತ್ತು ನಗರ ಪ್ರದೇಶದ ಸಂಘ-ಸಂಸ್ಥೆ ಹಾಗೂ ಶಾಲಾ, ಕಾಲೇಜಿನ ಕ್ರೀಡಾಪಟುಗಳು ಭಾಗವಹಿಸಲು ಅವಕಾಶವಿರುವುದರಿಂದ ತಾವೆಲ್ಲ ಕ್ರೀಡೆಯ ಏಳಿಗೆಗಾಗಿ ಸತತ ಪ್ರಯತ್ನ ಮಾಡಿ ಅಂತರ ರಾಷ್ಟ್ರ ಮಟ್ಟದಲ್ಲಿ ಜಿಲ್ಲೆಯ ಹಾಗೂ ರಾಜ್ಯದ ಹೆಸರನ್ನು ತರಬೇಕೆಂದು ಕರೆ ನೀಡಿದರು.
ಕ್ರೀಡಾಕೂಟದಲ್ಲಿ ಬೆಳಗಾವಿ ತಾಲೂಕಿನ ಬೇರೆ ಬೇರೆ ಶಾಲಾ, ಕಾಲೇಜುಗಳಿಂದ ಅಥ್ಲೆಟಿಕ್ಸ್, ವಾಲಿಬಾಲ್, ಖೋಖೋ, ಕಬಡ್ಡಿ, ಸ್ಪರ್ಧೆಗಳಲ್ಲಿ ೬೦೦ ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಭಾಗವಹಿಸಿದ್ದರು.
ವೇದಿಕೆಯಲ್ಲಿ ತಾಲೂಕು ನಗರದ ವಲಯದ ದೈಹಿಕ ಶಿಕ್ಷಣಾಧಿಕಾರಿಗಳಾದ ಎಲ್.ಬಿ. ನಾಯಕ್ ಹಾಗೂ ಇಲಾಖೆಯ ತರಬೇತಿದಾರರಾದ ಎಂ.ಪಿ.ಮರನೂರ ಉಪಸ್ಥಿತರಿದ್ದರು. ರಮೇಶ ಅಲಗೂಡೇಕರ, ದೈಹಿಕ ಶಿಕ್ಷಕರು ಹಾಗೂ ಸಾಹಸ ತರಬೇತಿದಾರರು ನಿರೂಪಣೆ ಹಾಗೂ ಸ್ವಾಗತ ನೆರವೇರಿಸಿದರು.

 

ಪರಿಶಿಷ್ಟ ವರ್ಗದ ಫಲಾನುಭವಿಗಳಿಂದ ಅರ್ಜಿ ಆಹ್ವಾನ

ಪರಿಶಿಷ್ಟ ವರ್ಗದವರ ಅಭಿವೃದ್ಧಿ ಕಾರ್ಯಾಕ್ರಮಗಳ ಪೈಕಿ ಹಸಿರು ಮನೆ, ನೆರಳು ಮನೆ, ಹನಿ ನೀರಾವರಿ ಹಾಗೂ ಸಣ್ಣ ಪ್ರಮಾಣದ ಸರಕು ಸಾಗಾಣಿಕೆ ವಾಹನ ಖರೀದಿಸಲು ಹಾಗೂ ಹೈನುಗಾರಿಕೆ, ಹಸು, ಎಮ್ಮೆ, ಕರು ಘಟಕ, ಕುರಿ, ಮೇಕೆ ಘಟಕ ಯೋಜನೆಗಳಿಗೆ ಅರ್ಹ ಪರಿಶಿಷ್ಟ ವರ್ಗದ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಅಕ್ಟೋಬರ ೫ ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಾಗಿ ಸಂಬಂಧಿಸಿದ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಬೆಳಗಾವಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ವ ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆಯಲ್ಲಿ ಬರುವ ಸೆಪ್ಟೆಂಬರ ೨೬ ರಂದು ಪ್ರಾರಂಭವಾಗಲಿರುವ ೧೦ ದಿನಗಳ ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ಹಾಗೂ ಅಕ್ಟೋಬರ್ ೯ ರಂದು ಪ್ರಾರಂಭವಾಗಲಿರುವ ೧೩ ದಿನಗಳ ಕ್ಯಾಮರಾ ಹಾಗೂ ಸೆಕ್ಯೂರೆಟಿ ಅಲಾರಾಂ ಇನಸ್ಟಾಲೇಷನ್ ಮತ್ತು ದುರಸ್ತಿಯ ಉಚಿತ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯು ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು ೧೮ ರಿಂದ ೪೫ ವರ್ಷ ವಯೋಮಿತಿಯ ಹಾಗೂ ಓದು ಬರಹ ತಿಳಿದಿರುವ ಸ್ವಉದ್ಯೋಗದಲ್ಲಿ ಆಸಕ್ತಿ ಇರುವ ಯುವಕರು ಅರ್ಜಿಯನ್ನು ಸಲ್ಲಿಸಬಹುದು. ತರಬೇತಿಯನ್ನು ಪೂರ್ಣಗೊಳಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ ವಿಳಾಸಕ್ಕೆ ಹಾಗೂ ಸಂಸ್ಥೆಯ ದೂರವಾಣಿ ಸಂಖ್ಯೆ: ೯೪೮೩೪೮೫೪೮೯, ೯೪೮೨೧೮೮೭೮೦, ೦೮೨೮೪-೨೨೦೮೦೭ ನ್ನು ಸಂಪರ್ಕಿಸಲು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಸೆಪ್ಟೆಂಬರ 15 ರಂದು ವಿದ್ಯುತ್ ನಿಲುಗಡೆ

ಹುವಿಸಕಂನಿ ವತಿಯಿಂದ ಯು.ಜಿ.ಕೇಬಲ್ ಹಾಗೂ ಇತರೆ ತುರ್ತು ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ೧೧೦ ಕೆವಿ ಮಚ್ಚೆ ವಿತರಣಾ ಕೇಂದ್ರದಿಂದ ಹೊರಡುವ ಬೆಳಗಾವಿ ತಾಲೂಕಿನ ದತ್ತ ನಗರ, ನಾವೇಕರ ನಗರ, ಹವಳ ನಗರ, ಗೋಡಶೆ ಕಾಲನಿ, ಓಂಕಾರ ನಗರ, ಮಚ್ಚೆ, ಝಾಡಶಾಪೂರ, ದೇಸೂರ, ಸುಸ್ಗ್ಯಾನಟ್ಟಿ, ಸಂಭಾಜಿ ನಗರ, ಆರೋಗ್ಯ ಮಿಲ್ಕ್, ವೇಗಾ ಹೆಲ್ಮಟ್ಸ್, ಕೆ.ಎಸ್.ಆರ್.ಪಿ ವಸತಿ ಗೃಹಗಳು, ಪೀರಣವಾಡಿ, ಖಾದರವಾಡಿ, ಹುಂಚಾನಟ್ಟಿ ಗ್ರಾಮಗಳಿಗೆ ಹಾಗೂ ಮಚ್ಚೆ ಔದ್ಯೋಗಿಕ ಕ್ಷೇತ್ರಗಳಿಗೆ ಹಾಗೂ ಖಾಲಾಪೂರ ತಾಲೂಕಿನ ಕಾಟಗಾಳಿ, ಪ್ರಭು ನಗರ, ನಿಟ್ಟೂರ, ಗನೇಬೃಲ, ಮಾಳ ಅಂಕಲೆ, ಝಾಡ ಅಂಕಲೆ, ಇದ್ದಲಹೊಂಡ ಹಾಗೂ ಸಿಂಗ್ಯಾನಕೊಪ್ಪ ಗ್ರಾಮಗಳಿಗೆ ಸೆಪ್ಟೆಂಬರ ೧೫ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಾಯಂಕಾಲ ೬ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಳಗಾವಿ ಕಾರ್ಯ ಮತ್ತು ಪಾಲನೆ, ನಗರ ವಿಭಾಗ, ಹುವಿಸಕಂನಿ, ಕಾರ್ಯನಿರ್ವಾಹಕ ಅಭಿಯಂತರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನವೆಂಬರ್ ೫ ರಿಂದ ಸೇನಾ ನೇಮಕಾತಿ ರ‍್ಯಾಲಿ

ಬೆಳಗಾವಿ ಸೇರಿದಂತೆ ಆರು ಜಿಲ್ಲೆಗಳ ಸೇನಾ ನೇಮಕಾತಿ ರ‍್ಯಾಲಿಯು ನವೆಂಬರ್ ೫ ರಿಂದ ೧೬ ರವರಿಗೆ ಕೊಪ್ಪಳದ ಸರಕಾರಿ ಯುವ ಮತ್ತು ಕ್ರೀಡಾ ಇಲಾಖೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ಬೆಳಗಾವಿ ಸೇರಿದಂತೆ ಬೀದರ್, ಗುಲ್ಬರ್ಗಾ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಸೇರಿದಂತೆ ೬ ಜಿಲ್ಲೆಗಳ ಸೇನಾ ನೇಮಕಾತಿ ಪ್ರಕ್ರೀಯೆ ಜರುಗಲಿದ್ದು, ಆಸಕ್ತ ಪುರುಷ ಅಭ್ಯರ್ಥಿಗಳು ರ‍್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ.
ಇದೇ ಸಂಸರ್ಭದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ರ‍್ಯಾಲಿಯಲ್ಲಿ ಭಾಗವಹಿಸಬಹುದು.
ಆಸಕ್ತ ಅಭ್ಯರ್ಥಿಗಳು ವೆಬ್ ಸೈಟ್ ನಲ್ಲಿ ಹೆಸರು ನೊಂದಣಿ ಮಾಡಿಕೊಳ್ಳಬಹುದಾಗಿದೆ. ಸೆಪ್ಟೆಂಬರ್ ೧೦ ರಿಂದ ನೋಂದಣಿ ಪ್ರಕ್ರಿಯೆ ಜರುಗಲಿದ್ದು ಅಕ್ಟೋಬರ್ ೨೪ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನವಾಗಿದ್ದು, ಅಡ್ಮಿಟ ಕಾರ್ಡನ್ನು ಇಮೇಲ್ ಮೂಲಕ ಅಕ್ಟೋಬರ್ ೩೦ ಮತ್ತು ೩೧ ರಂದು ಕಳುಹಿಸಲಾಗುತ್ತದೆ.
ವಿವಿಧ ಹುದ್ದೆಗಳಿಗೆ ಎಸ್.ಎಲ್.ಸಿ ಮತ್ತು ಪಿಯುಸಿ ಉತ್ತಿರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು. ಕಡ್ಡಾಯವಾಗಿ ನೋಂದಣಿ ಮಾಡಿಸಿದ ಅಭ್ಯರ್ಥಿಗಳಿಗೆ ಮಾತ್ರ ಆರ್ಮಿ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಆರ್ಮಿ ನೇಮಕಾತಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ.೨೧ ರಂದು ಹಿರಿಯ ನಾಗರಿಕರ ಕುಂದು ಕೊರತೆ ಸಭೆ

ಬೆಳಗಾವಿ ಉಪವಿಭಾಗದ ವ್ಯಾಪ್ತಿಯಲ್ಲಿನ ಹಿರಿಯ ನಾಗರಿಕರಿಗಾಗಿ ಇರುವ ಸ್ವಯಂ ಸೇವಾ ಸಂಸ್ಥೆಗಳು, ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಗೂ ಹಿರಿಯ ನಾಗರಿಕರೊಂದಿಗೆ ಕುಂದುಕೊರತೆಗಳ ಬಗ್ಗೆ ಚರ್ಚಿಸಲು ಹಿರಿಯ ನಾಗರಿಕರ ಕುಂದು ಕೊರತೆ ಸಭೆಯನ್ನು ಸೆಪ್ಟೆಂಬರ ೨೧ ರಂದು ಮಧ್ಯಾಹ್ನ ೩ ಗಂಟೆಗೆ ಉಪವಿಭಾಗಾಧಿಕಾರಿಗಳು ಹಾಗೂ ಉಪದಂಡಾಧಿಕಾರಿಗಳ ಕಾರ್ಯಾಲಯದ ಸಭಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ಬೆಳಗಾವಿ ಉಪವಿಭಾಗಾಧಿಕಾರಿಗಳಾದ ಡಾ. ಕವಿತಾ ಯೋಗಪ್ಪನ್ನವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button