*ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಳಗಾವಿ ನಗರಕ್ಕೆ 100 ಎಲೆಕ್ಟ್ರಿಕ್ ಬಸ್ ಮಂಜೂರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಪಿಎಂ-ಇ ಬಸ್ ಸೇವಾ’ ಯೋಜನೆಯಡಿ ಬೆಳಗಾವಿ ನಗರದ ಸಾರಿಗೆ ವ್ಯವಸ್ಥೆಯನ್ನು ಆಧುನೀಕರಿಸಲು ಹಾಗೂ ಪರಿಸರ ಮಾಲಿನ್ಯ ತಡೆಗಟ್ಟಲು ಕೇಂದ್ರ ಸರ್ಕಾರವು 100 ಎಲೆಕ್ಟ್ರಿಕ್ ಬಸ್‌ಗಳನ್ನು ಮಂಜೂರು ಮಾಡಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಪಿಎಂ-ಇ ಬಸ್ ಸೇವಾ ಯೋಜನೆಯಡಿ ಬೆಳಗಾವಿ ನಗರ ಸಾರಿಗೆ ಸೇವೆಗಳಿಗೆ ಮಂಜೂರಾದ ಎಲೆಕ್ಟಿçಕ್ ಬಸ್ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ನೀಡಿದ ಅನುದಾನದ ಕುರಿತು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ತೋಖನ್ ಸಾಹು ಅವರು ಬೆಳಗಾವಿ ಡಿಪೋ ಮೂಲಸೌಕರ್ಯ ಅಭಿವೃದ್ಧಿಗಾಗಿ 6.85 ಕೋಟಿ ರೂಪಾಯಿಗಳ ಸಿವಿಲ್ ಕಾಮಗಾರಿ ಮೊತ್ತವನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಕರ್ನಾಟಕ ರಾಜ್ಯದ ಒಟ್ಟು 10 ನಗರಗಳಿಗೆ 750 ಎಲೆಕ್ಟಿçಕ್ ಬಸ್‌ಗಳು ಹಾಗೂ ಡಿಪೋ ಮೂಲಸೌಕರ್ಯ ಅಭಿವೃದ್ಧಿಗಾಗಿ 77.05 ಕೋಟಿ ರೂಪಾಯಿಗಳ ಸಿವಿಲ್ ಕಾಮಗಾರಿ ಮೊತ್ತವನ್ನು ಮಂಜೂರು ಮಾಡಿದೆ.
ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿ ನಗರದಲ್ಲಿ ಸುಮಾರು 12.38 ಕಿ.ಮೀ ಉದ್ದದ ಸ್ಮಾರ್ಟ್ ರಸ್ತೆಗಳನ್ನು ನಿರ್ಮಿಸಲಾಗಿದ್ದು, ಇವುಗಳಲ್ಲಿ ಪಾದಚಾರಿ ಸ್ನೇಹಿ ಹಾದಿಗಳು ಮತ್ತು ಸೈಕಲ್ ಪಥಗಳನ್ನು ಅಳವಡಿಸಲಾಗಿದೆ. ರಿಂಗ್ ರಸ್ತೆ ಯೋಜನೆಯು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಯೋಜನೆಯನ್ನು ಕೈಗೆತ್ತಿಕೊಂಡಿದೆ. ಇದರ ಮೊದಲ ಹಂತದ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಉಳಿದ ಹಂತಗಳ ವಿವರವಾದ ಯೋಜನಾ ವರದಿ ಸಿದ್ಧವಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



