Latest

ದೇಶದಲ್ಲೇ ಮೊದಲ ಬಾರಿಗೆ ರೈಲಿನ ಮೂಲಕ ತಾಜಾ ಹಣ್ಣುಗಳ ಸಾಗಣೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೇಶದಲ್ಲೇ ಒಂದು ವಿನೂತನ ಪ್ರಯತ್ನಕ್ಕೆ ಮುನ್ನುಡಿ ಬರೆಯಲಾಗಿದ್ದು, ಮೊಟ್ಟ ಮೊದಲ ಬಾರಿಗೆ ಸರಕು ಸಾಗಣೆ ರೈಲಿನ ಮೂಲಕ ಮುಂಬೈನಿಂದ ರೆಫ್ರಿಜರೇಟೆಡ್ ಕಂಟೇನರ್ ನಲ್ಲಿ ವಿದೇಶಿ ಹಣ್ಣುಗಳನ್ನ ಆಮದು ಮಾಡಿಕೊಳ್ಳಲಾಗಿದೆ.

ರೈಲಿನ ಮೂಲಕ ಹೀಗೆ ಹಣ್ಣುಗಳನ್ನ ತರಿಸಿಕೊಂಡಿದ್ದು ಇದೇ ಮೊದಲ ಪ್ರಯತ್ನವಾಗಿದ್ದು, ಮುಂಬೈನ ಜವಾಹರಲಾಲ್ ನೆಹರು ಪೋರ್ಟ್ ಟ್ರಸ್ಟ್ ನಿಂದ ಗುರುವಾರ ನಗರದ ವೈಟ್ ಫಿಲ್ಡ್ ನಲ್ಲಿರುವ ಕಂಟೇನರ್ ಕಾರ್ಪೋರೇಷನ್ ಆಫ್ ಇಂಡಿಯಾಗೆ 44 ಕಂಟೇನರ್ ಗಳ ಮೂಲಕ ಚಿಲಿ, ಬ್ರೆಜಿಲ್ ಹಾಗೂ ಇರಾನ್ ನಿಂದ ತಾಜಾ ಹಣ್ಣುಗಳನ್ನ ತರಿಸಿಕೊಳ್ಳಲಾಯಿತು. ಈ ಮೊದಲು ರಸ್ತೆಯ ಮೂಲಕವೇ ಆಹಾರ ಉತ್ಪನ್ನಗಳನ್ನ ಸಾಗಾಣಿಕೆ ಮಾಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ಈ ಪ್ರಯತ್ನ ಕೈಗೊಳ್ಳಲಾಗಿದೆ. ಇದರಿಂದಾಗಿ ಇನ್ನು ಮುಂದೆ ತಾಜಾ ಹಣ್ಣುಗಳನ್ನ ಹೀಗೆ ಒಂದು ನಗರದಿಂದ ಇನ್ನೊಂದು ನಗರಕ್ಕೆ ಸಾಗಣೆ ಮಾಡಬಹುದಾಗಿದೆ. ಹಾಗೆಯೇ ಅತೀ ಕಡಿಮೆ ಬೆಲೆಗೆ ವಿದೇಶಿ ಹಣ್ಣುಗಳನ್ನ ಮಾರಾಟ ಮಾಡುವ ನಿಟ್ಟಿನಲ್ಲಿಯೂ ಇದು ಹೊಸ ಹೆಜ್ಜೆಯಾಗಲಿದೆ. ರಸ್ತೆ ಸಾಗಾಣಿಕಾ ದರಕ್ಕಿಂತ ಅತೀ ಕಡಿಮೆ ವೆಚ್ಚ ತಗುಲುವುದರಿಂದ ಕಡಿಮೆ ಬೆಲೆಗೆ ಹಣ್ಣುಗಳು ಲಭ್ಯವಾಗಲಿವೆ ಎನ್ನಲಾಗುತ್ತದೆ.

ಈ ಸಾಗಾಣಿಕೆಗಾಗಿ ಕಂಡುಕೊಂಡ ಹೊಸ ಮಾರ್ಗವನ್ನು ಕಾನ್ ಕರ್ ಎಂದೇ ಕರೆಯುವ ಕಂಟೇನರ್ ಕಾರ್ಪೋರೇಷನ್ ಆಫ್ ಇಂಡಿಯಾದ ಸಹಯೋಗದೊಂದಿಗೆ ಕೈಗೊಳ್ಳಲಾಗಿದೆ. ಈ ಕುರಿತು ಮಾತನಾಡಿದ ಐಜಿ ಇಂಟರ್ ನ್ಯಾಷನಲ್ ಪ್ರೈ.ಲಿ. ಚೇರಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗ್ಯಾನ್ ಚಂದ್ ಅರೋರಾ, ಆರೋಗ್ಯದ ಕಾಳಜಿ ಎಲ್ಲರಲ್ಲಿಯೂ ಅಧಿಕವಾಗಿರುವದರಿಂದ ಐಜಿ ಮತ್ತು ಕಾನ್ ಕರ್ ಸಹಭಾಗಿತ್ವದಲ್ಲಿ ತಾಜಾ ಹಣ್ಣುಗಳನ್ನ ವಿವಿಧ ನಗರಗಳಿಗೆ ಸಾಗಾಣಿಕೆ ಮಾಡಲು ನಿರ್ಧರಿಸಿವೆ. ಇದರ ಭಾಗವಾಗಿ ಐಜಿ ಇಂಟರ್ ನ್ಯಾಷನಲ್ ತ್ವರಿತವಾಗಿ ಹಾಗೂ ತಾಜಾ ಹಣ್ಣುಗಳನ್ನ ದೇಶದೆಲ್ಲೆಡೆ ವಿತರಿಸಲಿದೆ. ತೋಟದಿಂದ ತೆಗೆದ ತಾಜಾ ಹಣ್ಣುಗಳನ್ನ ತ್ವರಿತ ವೇಗದಲ್ಲಿ ರೈಲ್ವೆ ಮೂಲಕ ಸಾಗಾಣಿಕೆ ಮಾಡುವುದು ನಮ್ಮ ಉದ್ದೇವಾಗಿದೆ, ಎಂದರು.

ಐಜಿ ಇಂಟರ್ ನ್ಯಾಷನಲ್ ಪರಿಸರ ಸ್ನೇಹಿಯಾಗಿಯೂ ಯೋಚಿಸಿದ್ದು, ಸಾಕಷ್ಟು ಪರಿಸರ ಪ್ರದೂಷಣೆಯಾಗುವುದನ್ನ ತಪ್ಪಿಸಲು ತಸ್ತೆ ಸಾಗಣೆಯಿಂದ ರೈಲು ಮುಖಾಂತರ ಸಾಗಣೆ ಮಾಡಲು ನಿರ್ಧರಿಸಲಾಯಿತು. ಜೊತೆಗೆ ಹಣ್ಣುಗಳು ತಾಜಾ ಆಗಿಯೇ ಇಲ್ಲಿಗೆ ಬರುವಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಒಂದೇ ಒಂದು ಹಣ್ಣು ಕೂಡಾ ಕೆಡದಂತೆ ತರಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ. “ಆರೋಗ್ಯದ ಕಡೆಗೆ ಕಾಳಜಿಯಿಲ್ಲದೆ ಇಂದಿನ ಮಕ್ಕಳು ಫಾಸ್ಟ್ ಫುಡ್ ಜೊತೆಗೆ ತಂಪು ಪಾನೀಯಗಳ ಮೊರೆ ಹೋಗಿರುವುದರಿಂದ ಆರೋಗ್ಯ ಕೂಡಾ ಹಾಳಾಗುತ್ತಿದೆ. ಹೀಗಾಗಿ ತಾಜಾ ಮತ್ತು ಅತ್ಯುತ್ತಮ ಗುಣಮಟ್ಟದ ಹಣ್ಣುಗಳನ್ನ ತರಿಸಿಕೊಳ್ಳುವ ಮೂಲಕ ಆರೋಗ್ಯಪೂರ್ಣ ಸಮಾಜ ಸೃಷ್ಟಿಸುವ ಬಯಕೆ ಹೊಂದಿದ್ದೇವೆ”, ಎಂದು ಹೇಳುತ್ತಾರೆ ಐಜಿ ಇಂಟರ್ ನ್ಯಾಷನಲ್ ನ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ನಿರ್ದೇಶಕ ಸಂಜಯ್ ಅರೋರಾ.

ಕಾನ್ ಕರ್ ಇಂಟರ್ ನ್ಯಾಷನಲ್ ಗ್ರೂಪ್ ಜೆನರಲ್ ಮ್ಯಾನೇಜರ್ ಅನೂಪ್ ದಯಾನಂದ್, ಮಾತನಾಡಿ,”ಕೋವಿಡ್ ಹೆಚ್ಚುತ್ತಿರುವ ಈ ವೇಳೆ ಪೌಷ್ಠಿಕಾಂಶಯುಕ್ತ ಆಹಾರಗಳನ್ನ ತೆಗೆದುಕೊಳ್ಳುವುದು ತೀರಾ ಅಗತ್ಯ. ಆ ನಿಟ್ಟಿನಲ್ಲಿ ಗುಣಮಟ್ಟದ ಹಣ್ಣುಗಳನ್ನ ಸೇವಿಸುವ ದೃಷ್ಟಿಯಿಂದ ಜಗತ್ತಿನ ನಾನಾ ಭಾಗಗಳಿಂದ ಅತ್ಯುತ್ತಮ ಹಣ್ಣುಗಳನ್ನ ತರಿಸಲಾಗುತ್ತಿದೆ. ಐಜಿ ಇಂಟರ್ ನ್ಯಾಷನಲ್ ಕೈಗೊಂಡಿರುವ ಈ ವಿನೂತನ ಕಾರ್ಯದಲ್ಲಿ ಕಾನ್ ಕರ್ ಭಾಗಿಯಾಗಿರುವದಕ್ಕೆ ನನಗೆ ತುಂಬಾ ಸಂತಸವಾಗಿದೆ. ಮುಂದಿನ ದಿನಗಳಲ್ಲಿ ತಾಜಾ ಹಣ್ಣುಗಳನ್ನ ತರಿಸಿಕೊಳ್ಳಲು ಕಾನ್ ಕರ್ ಎಲ್ಲ ರೀತಿಯಲ್ಲಿಯೂ ಸಹಕಾರ ನೀಡಲಿದೆ”, ಎಂದು ತಿಳಿಸಿದರು.

ಐಜಿ ಇಂಟರ್ ನ್ಯಾಷನಲ್ ಬೆಂಗಳೂರು ಮಾರ್ಕೆಟಿಂಗ್ ವಿಭಾಗದ ನಿರ್ದೇಶಕ ಕಮಲ್ ಅರೋರಾ ಮಾತನಾಡಿ, ತಂತ್ರಜ್ಞಾನವನ್ನ ಬಳಸಿಕೊಂಡು ಒಂದು ವಿಭಿನ್ನ ಪ್ರಯತ್ನದ ಮೂಲಕ ಹೊಸ ಮಾರ್ಗವನ್ನ ಇವತ್ತು ಐಜಿ ಇಂಟರ್ ಕಂಡುಕೊಂಡಿದೆ. ರೈಲ್ವೆ ಮೂಲಕ ಹಣ್ಣುಗಳನ್ನ ತರಿಸಿಕೊಳ್ಳುವುದರಿಂದ ತುಂಬಾ ಕಡಿಮೆ ಬೆಲೆಗೆ ಹಣ್ಣುಗಳನ್ನ ಗ್ರಾಹಕರಿಗೆ ನೀಡಬಹುದಾಗಿದೆ. ಇದೊಂದು ಮಾರಾಟ ವಲಯದಲ್ಲಿ ಹೊಸ ಬೆಳವಣಿಗೆಗೆ ನಾಂದಿಯಾದರು ಅಚ್ಚರಿಯಿಲ್ಲ ಎಂದರು.

ಜಿಎಸ್ ಟಿ ಸಭೆಯಲ್ಲಿ ಮಹತ್ವದ ನಿರ್ಧಾರ; ತೆರಿಗೆ ಕಡಿತ
ಶನಿವಾರವೂ ಹಲವೆಡೆ ಪ್ರತಿಭಟನೆ: ಕೇಂದ್ರ, ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದ ಲಕ್ಷ್ಮಿ ಹೆಬ್ಬಾಳಕರ್     

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button