ಪ್ರಗತಿ ವಾಹಿನಿ ಸುದ್ದಿ, ಪುಣೆ –
ಬೀಳ್ಕೊಡುಗೆ ಸಮಾರಂಭಕ್ಕೆ ಸಡಗರದಿಂದ ಬಂದಿದ್ದ ೧೦ನೇ ತರಗತಿಯ ಬಾಲಕಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ೪ ಬಾರಿ ಇರಿದು ಗಂಭೀರ ಗಾಯಗೊಳಿಸಿದ ಆಘಾತಕಾರಿ ಘಟನೆ ಪುಣೆಯ ವಡಗಾಂವ್ ಶೇರಿಯಲ್ಲಿ ಸೋಮವಾರ ನಡೆದಿದೆ.
ಬಾಲಕಿ ೧೦ನೇ ತರಗತಿಯ ಪರೀಕ್ಷೆ ಬರೆಯಬೇಕಿದ್ದು ಅವಳ ಹೊಟ್ಟೆ, ಭುಜ ಮತ್ತು ಕೈಗೆ ಗಂಭೀರ ಗಾಯವಾಗಿದೆ. ಕೈ ನರಗಳು ತುಂಡಾಗಿದ್ದು ಚಿಕಿತ್ಸೆಗಾಗಿ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪುಣೆ ಝೋನ್ ೪ರ ಡೆಪ್ಯುಟಿ ಕಮೀಷನರ್ ರೋಹಿದಾಸ್ ಪವಾರ್ ತಿಳಿಸಿದ್ದಾರೆ.
ಬಾಲಕಿ ಬಡ ಕುಟುಂಬದವಳಾಗಿದ್ದು ತಂದೆ ಟೇಲರಿಂಗ್ ವೃತ್ತಿ ನಡೆಸುತ್ತಾರೆ. ತಾಯಿ ಮನೆಗೆಲಸ ಮಾಡುತ್ತಾರೆ. ಬಾಲಕಿಗೆ ಚಾಕು ಇರಿದ ವ್ಯಕ್ತಿ ೨೧ ವರ್ಷದ ಯುವಕನಾಗಿದ್ದು ಈ ಮೊದಲು ಬಾಲಕಿಯ ಕುಟುಂಬ ವಾಸಿಸುತ್ತಿದ್ದ ಸಮೀಪದಲ್ಲೇ ಆತನ ಮನೆ ಇದೆ.
ಆದರೆ ಇತ್ತೀಚೆಗೆ ಬಾಲಕಿಯ ಕುಟುಂಬ ಮನೆ ಬದಲಾಯಿಸಿ ಬೇರೆಡೆ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿತ್ತು. ಆದರೆ ಆರೋಪಿ ಯುವಕ ಕಳೆದ ೧೦ ದಿನಗಳ ಹಿಂದೆಯೂ ಒಮ್ಮೆ ಬಾಲಕಿಯನ್ನು ಶಾಲೆಯವರೆಗೆ ಹಿಂಬಾಕಿಸಿಕೊಂಡು ಬಂದಿದ್ದ ಎಂದು ಬಾಲಕಿ ತನ್ನ ಪೋಷಕರಿಗೆ ದೂರಿದ್ದಳು.
ಪೋಷಕರು ಈ ಕುರಿತು ಶಾಲೆಯ ಮುಖ್ಯಾಧ್ಯಾಪಕರಿಗೆ ಮಾಹಿತಿ ನೀಡಿದ್ದರು. ಆದರೆ ಶಾಲೆಯ ಶಿಕ್ಷಕರು, ಆಡಳಿತ ಮಂಡಳಿ ನಿರ್ಲಕ್ಷ್ಯ ಧೋರಣೆ ತಾಳಿದ್ದರಿಂದ ಯುವಕ ಶಾಲೆಯೊಳಗೆ ಆಯುಧ ಸಮೇತ ನುಗ್ಗಿ ತನ್ನ ಮಗಳಿಗೆ ಗಾಯಗೊಳಿಸುವಂತಾಗಿದೆ ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ.
ವ್ಯಕ್ತಿ, ಬಾಲಕಿ ಕ್ಲಾಸ್ ರೂಂಗೆ ಬರುವ ಮೊದಲೇ ಕ್ಲಾಸ್ ರೂಂನಲ್ಲಿ ನಿಂತು ದಾಳಿ ಮಾಡಲು ಹೊಂಚು ಹಾಕುತ್ತಿದ್ದ. ಬಾಲಕಿ ಬಂದ ಕೂಡಲೇ ಸಿಕ್ಕ ಸಿಕ್ಕಲ್ಲಿ ಇರಿದು ಪರಾರಿಯಾಗಿದ್ದಾನೆ ಎಂದು ಘಟನೆಯ ಪ್ರತ್ಯಕ್ಷದರ್ಶಿ, ಬಾಲಕಿಯ ಸಹಪಾಠಿ ಇಮ್ರಾನ್ ತಿಳಿಸಿದ್ದಾನೆ.
ಇನ್ನೊಂದೆಡೆ ಇರಿದು ಗಾಯಗೊಳಿಸಿದ ಆರೋಪಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಆತನನ್ನು ವಶಕ್ಕೆ ಪಡೆಯಲಾಗಿದೆ. ಪುಣೆಯ ಯರವಾಡ ಪೊಲೀಸ್ ಠಾಣೆಯಲ್ಲಿ ವಿವಿಧ ಐಪಿಸಿ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಯಿಯ ಗೆಳತಿಯೊಂದಿಗೇ ಸಂಪರ್ಕದಲ್ಲಿದ್ದೆ: ಸತ್ಯ ಬಿಚ್ಚಿಟ್ಟ ರಿಯಾಲಿಟಿ ಶೋ ಸ್ಪರ್ಧಿ !
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ