*3 ಕ್ಷೇತ್ರಗಳಲ್ಲಿ ಬಿಜೆಪಿ ಸೋಲಲು 11 ಕಾರಣ!*
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ರಾಜ್ಯದ 3 ವಿಧಾನ ಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಎಲ್ಲರ ನಿರೀಕ್ಷೆ ಹುಸಿಗೊಳಿಸಿದೆ. ಸ್ವತಃ ಕಾಂಗ್ರೆಸ್ ನವರೂ ಈ ಫಲಿತಾಂಶ ನಿರೀಕ್ಷಿಸಿರಲಿಲ್ಲ. ಬಹುತೇಕ ಸಮೀಕ್ಷೆಗಳು ಮೂರೂ ಪಕ್ಷಗಳಿಗೆ ತಲಾ ಒಂದು ಕ್ಷೇತ್ರ ಬರಲಿದೆ ಎಂದೇ ಹೇಳಿದ್ದವು.
ಕಾಂಗ್ರೆಸ್ ಮೇಲೆ ಸಾಲು ಸಾಲು ಆರೋಪಗಳಿರುವುದರಿಂದ ಕಾಂಗ್ರೆಸ್ ವಿರುದ್ಧ ಜನರು ಮತ ಚಲಾಯಿಸಲಿದ್ದಾರೆ ಎಂದೇ ಬಿಜೆಪಿಯವರು ಭಾವಿಸಿದ್ದರು. ಇದು ಓವರ್ ಕಾನ್ಫಿಡೆನ್ಸ್ ಆಗಿತ್ತು. ಆದರೆ ಅವರಿಗೆ ದೊಡ್ಡ ಆಘಾತ ಉಂಟಾಗಿದೆ.
ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ನೆಲಕಚ್ಚಲು ಒಂದೆರಡಲ್ಲ, ಹನ್ನೊಂದು ಕಾರಣಗಳನ್ನು ಪಟ್ಟಿ ಮಾಡಬಹುದು. ಇವುಗಳನ್ನು ಅವಲೋಕಿಸಿ ಸರಿಪಡಿಸಿಕೊಳ್ಳದಿದ್ದಲ್ಲಿ 2028 ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಕಾಂಗ್ರೆಸ್ 3 ಉಪಚುನಾವಣೆಯಲ್ಲಿ ಗೆದ್ದರೆ ಈ ಹಿಂದೆ ನಾವು 18 ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆದ್ದಿದ್ದೆವು ಎನ್ನುವಂತಹ ಬಾಲಿಶ ಹೇಳಿಕೆಗಳನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮೊದಲು ಬಿಡಬೇಕು. ತಮ್ಮ ಸ್ಥಾನದ ಗೌರವ ಕಾಪಾಡುವ ರೀತಿಯಲ್ಲಿ ನಾಯಕರಾದವರು ಮಾತನಾಡುವುದನ್ನು ಮೊದಲು ಕಲಿಯಬೇಕು,
ಕಾಂಗ್ರೆಸ್ ಗೆಲುವಿಗೆ ಕಾರಣ ಏನು ಎನ್ನುವುದನ್ನು ಲೆಕ್ಕ ಹಾಕುವುದಕ್ಕಿಂತ ಬಿಜೆಪಿ ಸೋಲಿಗೆ ಏನೇನು ಕಾರಣ ಎನ್ನುವುದನ್ನು ಅವಲೋಕಿಸುವುದೇ ಸುಲಭ. ಜನರಿಗೆ ಕಾಂಗ್ರೆಸ್ ಗೆಲ್ಲಿಸಬೇಕೆಂದಿಲ್ಲದಿದ್ದರೂ ಸಧ್ಯದ ಪರಿಸ್ಥಿತಿಯಲ್ಲಿ (ಬಿಜೆಪಿ ಪರಿಸ್ಥಿತಿ) ಬಿಜೆಪಿ ಬೇಡ ಎಂದಿರಬಹುದು. ಹಾಗಾಗಿ ಕಾಂಗ್ರೆಸ್ ಪರವಾದ ಮತಗಳಿಂದ ಬಿಜೆಪಿ ಸೋತಿದೆ ಎನ್ನುವುದಕ್ಕಿಂತ ಬಿಜೆಪಿ ವಿರೋಧಿ ಮತಗಳಿಂದ ಕಾಂಗ್ರೆಸ್ ಗೆದ್ದಿದೆ ಎನ್ನಬುಹುದೇನೋ.
- ವಿಷಯ ಎತ್ತಿಕೊಳ್ಳುವುದರಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್ ಸರಕಾರದಲ್ಲಿ ಬೇಕಾದಷ್ಟು ವೈಫಲ್ಯಗಳಿದ್ದರೂ ಯಾವ ವಿಷಯವನ್ನು ಎತ್ತಿಕೊಳ್ಳಬೇಕು? ಯಾವ ರೀತಿ ಎತ್ತಿಕೊಳ್ಳಬೇಕು ಎನ್ನುವುದನ್ನು ನಿರ್ಣಯಿಸಲು ಬಿಜೆಪಿ ಸಂಪೂರ್ಣ ವಿಫಲವಾಗಿದೆ.
- ನಾಯಕರ ಮಾತುಗಳಿಗೆ ಲಗಾಮೇ ಇಲ್ಲವಾಗಿದೆ. ಬಿಜೆಪಿಯ ಯಾವ ನಾಯಕರ ಮಾತಿಗೂ ತೂಕವೇ ಇಲ್ಲವಾಗಿದೆ. ನಾಯಕರಿರಲಿ, ಭಿನ್ನಮತೀಯ ನಾಯಕರಿರಲಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ ಎಲ್ಲರೂ ಪಕ್ಷದ ಮೇಲೆ ತಮ್ಮ ಮಾತು ಯಾವ ರೀತಿಯಲ್ಲಿ ಪರಿಣಾಮ ಬೀರಬಹುದು, ಜನರು ಏನು ತಿಳಿದುಕೊಳ್ಳಬಹುದು ಎನ್ನುವುದನ್ನು ಯೋಚಿಸದೆ ಹೇಳಿಕೆ ನೀಡುತ್ತಿದ್ದಾರೆ.
- ಪದೇ ಪದೆ ನಗೆಪಾಟಲಿಗೀಡಾಗುತ್ತಿರುವ ವಿಜಯೇಂದ್ರ ಹೇಳಿಕೆ. ಸಿದ್ದರಾಮಯ್ಯ ಸರಕಾರ 3 ತಿಂಗಳೂ ಇರುವುದಿಲ್ಲ ಎಂದು ಮೊದಲು ಹೇಳಿದರು, ನಂತರ ಯುಗಾದಿ ನಂತರ ಇರುವುದಿಲ್ಲ ಎಂದರು, ನಂತರ ಲೋಕಸಭಾ ಚುನಾವಣೆ ಬಳಿಕ ಇರುವುದಿಲ್ಲ ಎಂದರು, ನಂತರ ಗಣೇಶ ಚತುರ್ಥಿ ನಂತರ ಮುಂದುವರಿಯುವುದಿಲ್ಲ ಎಂದರು, ವಿಜಯ ದಶಮಿ ನಂತರ ಮುಂದುವರಿಯುವುದಿಲ್ಲ ಎಂದರು, ದೀಪಾವಳಿಗೆ ಇರವುದಿಲ್ಲ ಎಂದರು, ದೀಪಾವಳಿ ಮರುದಿನವೇ ಬೀಳಲಿದೆ ಎಂದರು, ಮುಡಾ ಪ್ರಕರಣ ದಾಖಲಾದ ತಕ್ಷಣ ರಾಜಿನಾಮೆ ನೀಡಲಿದ್ದಾರೆ ಎಂದರು, ಉಪಚುನಾವಣೆ ಫಲಿತಾಂಶ ಬಂದ ತಕ್ಷಣ ರಾಜಿನಾಮೆ ನೀಡಲಿದ್ದಾರೆ ಎಂದರು, ಈಗ ಬೆಳಗಾವಿ ಅಧಿವೇಶನಕ್ಕೆ ಇರುವುದಿಲ್ಲ ಎನ್ನುತ್ತಿದ್ದಾರೆ! ಜನರು ಈ ಹೇಳಿಕೆಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಾರೆ. ನಾಯಕನಾದವನು ತನ್ನ ಹೇಳಿಕೆಗಳಿಂದಲೇ ತನ್ನ ಗೌರವವನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಹೇಳಿಕೆಗಳು ಗೌರವ ಕಳೆಯಬಾರದು. ಇದು ಒಂದು ಉದಾಹರಣೆ ಮಾತ್ರ. ಇಂತಹ ಹೇಳಿಕೆಗಳು ಅವರ ಬಾಲಿಶತನ, ರಾಜಕೀಯ ಅಪ್ರಭುದ್ಧತೆಗಳನ್ನು ತೋರಿಸುತ್ತದೆ.
- ಆರ್.ಅಶೋಕ ಅವರ ಮಾತುಗಳಿಗಂತೂ ಗಂಭೀರತೆಯೇ ಇಲ್ಲ. ಅವರ ಎಷ್ಟೋ ಟ್ವೀಟ್ ಗಳು ಕಾಂಗ್ರೆಸ್ ಗೆ ಅಸ್ತ್ರವಾಗಿ ಪರಿಣಮಿಸುತ್ತಿವೆ. ತಾವೇ ಹಗ್ಗಕೊಟ್ಟು ಕೈ ಕಟ್ಟಿಸಿಕೊಳ್ಳುವಂತೆ ಟ್ವೀಟ್ ಮಾಡುತ್ತಿದ್ದಾರೆ. ತಮ್ಮದೇ ಸರಕಾರ ಮಾಡಿದ್ದ ಆದೇಶಗಳನ್ನೂ ಕಾಂಗ್ರೆಸ್ ಮೇಲೆ ಹಾಕಲು ಹೋಗಿ ಎಡವಿದ್ದಿದೆ. ಅವರ ಎಷ್ಟೋ ನಡವಳಿಕೆಗಳು ಆಡಳಿತ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೇನೋ ಎನ್ನುವ ರೀತಿಯಲ್ಲಿ ಘೋಚರಿಸುತ್ತದೆ.
- ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಜನರ ಮೇಲೆ ಮಾಡಿರುವ ಪರಿಣಾಮವನ್ನು ಅರ್ಥ ಮಾಡಿಕೊಳ್ಳಲು ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಅದು ಜನರಿಗೆ ಬೇಕಾಗಿದೆಯೋ, ಬೇಡವಾಗಿದೆಯೋ… ಎನ್ನುವುದನ್ನೂ ಸೂಕ್ಷ್ಮವಾಗಿ ಅಧ್ಯಯನ ಮಾಡಿಲ್ಲ. ಅದರ ವಿರುದ್ಧ ಯಾವ ರೀತಿಯಲ್ಲಿ ಜನಾಂದೋಲನ ರೂಪಿಸಬೇಕೆನ್ನುವುದನ್ನೂ ನಿರ್ಣಯಿಸಲು ಸಾಧ್ಯವಾಗುತ್ತಿಲ್ಲ. ಮೊದಲು ಗ್ಯಾರಂಟಿ ಯೋಜನೆಗಳು ಜಾರಿಗೇ ಬರುವುದಿಲ್ಲ ಎಂದರು, ನಂತರ ಬಹಳ ದಿನ ನಡೆಸುವುದಿಲ್ಲ ಎಂದರು, ಸಮರ್ಪಕವಾಗಿ ಜಾರಿಯಾಗಿಲ್ಲ ಎಂದರು. ಅದರ ಬದಲು ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕತೆಯ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಬಲ್ಲದು ಎನ್ನುವುದನ್ನು ಮನವರಿಕೆ ಮಾಡಿಕೊಡಲು ಬಿಜೆಪಿ ನಾಯಕರು ಸಂಪೂರ್ಣ ವಿಫಲರಾಗಿದ್ದಾರೆ.
- ಕಾಂಗ್ರೆಸ್ ಹಗರಣಗಳನ್ನು ಕೈಗೆತ್ತಿಕೊಳ್ಳಲು ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಪ್ರತಿಭಟನೆಗಳು ನಡೆದರೂ ಅದು ಕೆಲವೇ ಕೆಲವು ಬಿಜೆಪಿ ನಾಯಕರಿಗೆ ಸೀಮಿತವಾಗಿದೆ. ವಾಲ್ಮೀಕಿ ನಿಗಮದ ಹಗರಣ, ವಕ್ಫ ಹಗರಣ, ಮುಡಾ ಪ್ರಕರಣ ಮೊದಲಾದ ದೊಡ್ಡ ದೊಡ್ಡ ವಿಷಯಗಳಿದ್ದರೂ ಜನಾಂದೋಲನ ರೂಪಿಸಲು ಆಗಲೇ ಇಲ್ಲ.
- ಭಿನ್ನರ ಬಾಯಿಗೆ ಬೀಗ ಹಾಕಲು ಸಾಧ್ಯವೇ ಆಗಿಲ್ಲ. ಭಿನ್ನಮತೀಯ ನಾಯಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ ಮೊದಲಾದವರು ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೂ ಅವರ ಮೇಲೆ ಕ್ರಮವಿರಲಿ, ಕೊನೆಯ ಪಕ್ಷ ಬಾಯಿ ಮುಚ್ಚಿಸಲೂ ಸಾಧ್ಯವಾಗುತ್ತಿಲ್ಲ. ರಾಜ್ಯಾಧ್ಯಕ್ಷ ಸ್ಥಾನ ಎಷ್ಟು ದುರ್ಬಲವಾಗಿದೆ ಎಂದು ಜನರು ಮಾತನಾಡಿಕೊಳ್ಳುವಂತಾಗಿದೆ. ರಾಷ್ಟ್ರೀಯ ನಾಯಕರೂ ಎಲ್ಲವನ್ನೂ ನೋಡಿಯೂ ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡಿದ್ದಾರೆ. ಶಿಸ್ತಿನ ಪಕ್ಷವೆಂದು ಹೇಳಿಕೊಳ್ಳುವ ಪಕ್ಷದಲ್ಲಿ ಅಶಿಸ್ತು ತಾಂಡವವಾಡುತ್ತಿದೆ.
- ಜೆಡಿಎಸ್ ಜೊತೆ ಕೈ ಜೋಡಿಸಿದ್ದು ಬಿಜೆಪಿಯ ಬಹುತೇಕ ನಾಯಕರಿಗೆ, ಕಾರ್ಯಕರ್ತರಿಗೆ ಒಪ್ಪಿಗೆ ಇಲ್ಲ. ಎಷ್ಟೋ ವರ್ಷ ಯಾರ ವಿರುದ್ಧ ಕೆಲಸ ಮಾಡಿದ್ದರೋ ಅವರ ಜೊತೆಯೇ ಕೆಲಸ ಮಾಡಬೇಕಾದ ಸಂದರ್ಭಕ್ಕೆ ಒಗ್ಗಿಕೊಳ್ಳಲಾಗದು ಚಡಪಡಿಸುತ್ತಿದ್ದಾರೆ. ಜೆಡಿಎಸ್ ಜೊತೆಗಿನ ಹೊಂದಾಣಿಕೆಯಿಂದ ಬಿಜೆಪಿ ಕಳೆದುಕೊಂಡಿದ್ದೇ ಹೆಚ್ಚು. ಹೊಂದಾಣಿಕೆಯಾದಾಗಿನಿಂದ ಬಿಜೆಪಿ ದುರ್ಬಲವಾಗುತ್ತಲೇ ಸಾಗಿದೆ.
- ಕಾಂಗ್ರೆಸ್ ನ ಕುಟುಂಬ ರಾಜಕಾರಣವನ್ನು ವಿರೋಧಿಸುವ ಬಿಜೆಪಿ ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ಮಗನಿಗೆ ಟಿಕೆಟ್ ಕೊಟ್ಟಿದ್ದು, ಕುಟುಂಬ ರಾಜಕಾರಣದ ಮೇಲೆಯೇ ನಿಂತಿರುವ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು ಪಕ್ಷದ ಬಹುತೇಕ ನಾಯಕರು ಮತ್ತು ಕಾರ್ಯಕರ್ತರ ಅಸಹನೆಗೆ ಕಾರಣವಾಗಿದೆ. ಜನರೂ ಅದನ್ನು ಒಪ್ಪಲಿಲ್ಲ.
- ಪಕ್ಷದ ನಾಯಕರ ಮಧ್ಯೆ ಹೊಂದಾಣಿಕೆಯ ಕೊರತೆ ಬಹಳ ದೊಡ್ಡ ಪ್ರಮಾಣದಲ್ಲಿದೆ. ಯಾರಿಗೂ ಯಾರ ಮೇಲೂ ಹಿಡಿತವೇ ಇಲ್ಲವಾಗಿದೆ. ಯಾರು ಏನೇ ಹೇಳಿಕೆ ನೀಡಿದರೂ ನಿಯಂತ್ರಿಸುವವರೇ ಇಲ್ಲವಾಗಿದೆ.
- ವಕ್ಫ ಬೋರ್ಡ್ ಹಗರಣವನ್ನು ಕೈಗೆತ್ತಿಕೊಂಡಿರುವ ರೀತಿಯೇ ಸರಿ ಇಲ್ಲ. ಅದರಿಂದ ಅನ್ಯಾಯವಾಗಿದ್ದು ಕೇವಲ ಹಿಂದೂಗಳಿಗಷ್ಟೇ ಅಲ್ಲ, ಮುಸ್ಲಿಮರಿಗೂ ಬಹಳ ದೊಡ್ಡ ಮಟ್ಟದಲ್ಲಿ ಅನ್ಯಾಯವಾಗಿದೆ. ಮುಸ್ಲಿಮರನ್ನು ಟಾರ್ಗೆಟ್ ಮಾಡಲು ಹೋಗಿ ಅವರು ಒಗ್ಗಟ್ಟಾಗುವಂತೆ ಮಾಡಿದರು. ಬದಲಿಗೆ, ಅನ್ಯಾಯಕ್ಕೊಳಗಾಗಿರುವ ಮುಸ್ಲಿಮರನ್ನೂ ಸೇರಿಸಿಕೊಂಡು ಹೋರಾಟ ನಡೆಸಿದರೆ ಅದಕ್ಕೆ ಬಲ ಬರುತ್ತಿತ್ತು.
ಇವು ಮೇಲ್ನೋಟಕ್ಕೆ ಕಾಣುವ ಕಾರಣಗಾಳದರೂ ಬಿಜೆಪಿ ತನ್ನದೇ ತಪ್ಪಿನಿಂದ ನೆಲಕಚ್ಚಿದೆ, ಕಚ್ಚುತ್ತಿದೆ ಎನ್ನುವುದನ್ನು ಎಂತವರೂ ಊಹಿಸಬಹುದು. ಮುಂದಿನ ದಿನಗಳಲ್ಲಾದರೂ ತಪ್ಪನ್ನು ಸರಿಪಡಿಸಿಕೊಂಡು ಹೋಗದಿದ್ದರೆ ಕರ್ನಾಟಕ ಬಿಜೆಪಿ ಮತ್ತೆ ಮೇಲೇಳಲು ಸಾಧ್ಯವಾಗುವುದಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ