ಯಶಸ್ವೀ ಬದುಕಿನ 11 ಸತ್ಯಗಳು

ಪ್ರಗತಿ ವಾಹಿನಿ  Motivational Tips

ಜೀವನದಲ್ಲಿ ಮಹತ್ವದ ವಿಷಯಗಳ ಬಗ್ಗೆ ಗಮನ ಕೇಂದ್ರೀಕರಿಸುವುದನ್ನು ಇಂದಿನ ಯಾಂತ್ರಿಕ ಯುಗದಲ್ಲಿ ಅರಿವೇ ಇಲ್ಲದಂತೆ ಕಳೆದುಕೊಳ್ಳುತ್ತಿದ್ದೇವೆ. ಬಿಡುವಿಲ್ಲದ ವೇಳಾಪಟ್ಟಿ ಮತ್ತು ನಿಯಮಿತ ದಿನಚರಿಗಳು ಮೆದುಳನ್ನು ಆಟೋಪೈಲಟ್ ಮೋಡ್‌ನಲ್ಲಿ ಇರಿಸಿಬಿಡುತ್ತವೆ. ಪ್ರತಿಯೊಂದನ್ನೂ ಯಂತ್ರದಂತೆ ಯೋಚನೆಯೇ ಇಲ್ಲದೆ ಮಾಡುತ್ತೇವೆ.

ಆದರೆ ಒಮ್ಮೆ ನಿಂತು ಅವಲೋಕಿಸಿದರೆ ಬದುಕು ನಾವು ಅಂದುಕೊಂಡಂತೆ ನಡೆಯುತ್ತಿದೆಯಾ ? ಎಂಬ ಪ್ರಶ್ನೆ ಮೂಡುತ್ತದೆ. ನಾವು ಸ್ವಲ್ಪ ಗಮನ ಹರಿಸಿ ಕೆಲವು ಕಾರ್ಯಗಳನ್ನು ಕೈಗೊಂಡಿದ್ದರೂ ಈಗಿರುವ ಬದುಕಿಗಿಂತ ಬಹಳಷ್ಟು ಬದಲಾವಣೆಯಾಗುತ್ತಿತ್ತು ಎನಿಸದಿರದು.

 

೧) ಪರೀಕ್ಷೆಗೊಳಪಡದ ಜೀವನವು ಬದುಕಲು ಯೋಗ್ಯವಲ್ಲ

ಜೀವನದಲ್ಲಿ ಉತ್ತಮವಾದ ವಿಷಯಗಳು ಸುಲಭವಾಗಿ ದಕ್ಕುವುದಿಲ್ಲ. ಪ್ರಶ್ನೆಗಳನ್ನು ಎದುರಿಸದೆ ಬದುಕು ಸಫಲವಾಗುವುದಿಲ್ಲ. ಗ್ರೀಕ್ ತತ್ವಜ್ಞಾನಿ ಸಾಕ್ರಟೀಸ್ ಅವರ ಅವಲೋಕನವಿದು. ಇದು ವ್ಯವಹಾರಕ್ಕೂ ಅನ್ವಯಿಸುತ್ತದೆ.

ಎರಿಕ್ ಸ್ಮಿತ್ ಅವರು ಗೂಗಲ್‌ನ ಸಿಇಒ ಆಗಿದ್ದಾಗ, ನಾವು ಈ ಕಂಪನಿಯನ್ನು ಪ್ರಶ್ನೆಗಳ ಮೇಲೆ ನಡೆಸುತ್ತೇವೆ, ಉತ್ತರಗಳ ಮೇಲೆ ಅಲ್ಲ ಎಂಬ ಪ್ರಸಿದ್ಧ ಹೇಳಿಕೆ ನೀಡಿದ್ದರು.

ಜೀವನ ಮತ್ತು ವ್ಯವಹಾರ ಎರಡೂ ಪ್ರಶ್ನೆಗಳ ಮೇಲೆ ನಡೆಯುತ್ತದೆ, ಉತ್ತರಗಳ ಮೇಲಲ್ಲ. ನೀವು ಜೀವನದಲ್ಲಿ ಯಾವ ದಿಕ್ಕಿನೆಡೆಗೆ ಹೋಗುತ್ತಿದ್ದೀರಿ, ದಿಕ್ಕು ಸರಿಯಾಗಿದೆಯಾ ? ಎಂದು ನಿರಂತರವಾಗಿ ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳುತ್ತಿರಲೇಬೇಕು.

೨) ವೈಫಲ್ಯದ ಬೆನ್ನಿಗೇ ದೊಡ್ಡ ಯಶಸ್ಸಿರುತ್ತದೆ

ವೈಫಲ್ಯವನ್ನು ಸ್ವೀಕರಿಸಲು ಕಲಿಯುವವರೆಗೆ ನೀವು ಎಂದಿಗೂ ನಿಜವಾದ ಯಶಸ್ಸನ್ನು ಅನುಭವಿಸುವುದಿಲ್ಲ. ನಿಮ್ಮ ಹಿಂದಿನ ತಪ್ಪುಗಳು, ಮುಂದೆ ನೀವು ತಪ್ಪು ಹಾದಿಯಲ್ಲಿರುವಾಗ ಎಚ್ಚರಿಕೆ ನೀಡುವ ಮೂಲಕ ಯಶಸ್ಸಿಗೆ ದಾರಿ ಮಾಡಿಕೊಡುತ್ತವೆ.

ನೀವು ಹೆಚ್ಚು ನಿರಾಶೆಗೊಂಡಿರುವಾಗ ದೊಡ್ಡ ಯಶಸ್ಸು ಸಾಮಾನ್ಯವಾಗಿ ಬರುತ್ತವೆ. ಈ ಹತಾಶೆಯೇ ನಿಮ್ಮನ್ನು ವಿಭಿನ್ನವಾಗಿ ಯೋಚಿಸಲು, ಪೆಟ್ಟಿಗೆಯ ಹೊರಗೆ ನೋಡಲು ಮತ್ತು ನೀವು ಕಳೆದುಕೊಂಡಿರುವ ಪರಿಹಾರವನ್ನು ಹುಡುಕಲು ನಿಮ್ಮನ್ನು ಒತ್ತಾಯಿಸುತ್ತದೆ. ಯಶಸ್ಸು ತಾಳ್ಮೆಯನ್ನು ಕೇಳುತ್ತದೆ.

 

೩) ಬ್ಯೂಸಿ ಇರುವುದೇ ಸೃಜನಶೀಲತೆಯಲ್ಲ

ನಮ್ಮ ಸುತ್ತ ಮುತ್ತ ಇರುವ ಅನೇಕ ಜನ ದಿನವೂ ಬ್ಯೂಸಿ ಇದ್ದಂತೆ ತೋರುತ್ತಾರೆ. ಮೀಟಿಂಗ್‌ನಿಂದ ಮೀಟಿಂಗ್‌ಗೆ ಓಡುತ್ತಾರೆ. ಕಂಪ್ಯೂಟರ್‌ನಲ್ಲಿ ಕೆಲಸ, ಬಸ್ಸು, ಟ್ಯಾಕ್ಸಿಗಳಲ್ಲಿ ದಣಿವರಿಯದ ಓಡಾಟ… ಎಲ್ಲವನ್ನೂ ನಾವು ಕಾಣಬಹುದು. ಆದರೆ ಇದರಲ್ಲಿ ಸೃಜನಶೀಲತೆ ಎಷ್ಟು ? ಉತ್ಪಾದಕತೆ ಎಷ್ಟು ? ಎಂಬುದು ಪ್ರಶ್ನೆ.

ಕೇವಲ ಚಲನೆ ಮತ್ತು ಚಟುವಟಿಕೆಯಿಂದ ಯಶಸ್ಸು ಬರುವುದಿಲ್ಲ. ನಿಮ್ಮ ಸಮಯವನ್ನು ಪರಿಣಾಮಕಾರಿಯಾಗಿ ಮತ್ತು ಉತ್ಪಾದಕವಾಗಿ ಬಳಸುತ್ತಿದ್ದೀರಾ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು. ಎಲ್ಲರಿಗೂ ದಿನಕ್ಕೆ ೨೪ ಗಂಟೆಗಳು ಮಾತ್ರ ಇರುತ್ತವೆ. ಅದರಲ್ಲಿ ನಿಮ್ಮ ಎಷ್ಟು ಪ್ರಯತ್ನಗಳು ಫಲಿತಾಂಶಗಳನ್ನು ಪಡೆಯಲು ಯಶಸ್ವಿಯಾಗುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

೪) ಇಂಥಹ ಜನರಿಂದ ದೂರವಿರಿ

ನಮ್ಮ ಸಂಪರ್ಕದಲ್ಲಿರುವ ಜನರು ನಮಗೆ ಸದಾ ಪ್ರೇರಣೆ ನೀಡುವಂತಿರಬೇಕು. ನಿಮ್ಮನ್ನು ಪ್ರೇರೇಪಿಸುವ ಜನರು, ನೀವು ಉತ್ತಮವಾಗಲು ಬಯಸುವ ಜನರೇ ನಿಮ್ಮನ್ನು ಸದಾ ಸುತ್ತ ಇರುವಂತೆ ನೋಡಿಕೊಳ್ಳಿ. ನಿಮ್ಮನ್ನು ಸದಾ ಕೆಳಗೆಳೆಯಲು ನೋಡುವ ಜನರನ್ನು ದೂರವಿಡಿ. ನಿಮ್ಮಲ್ಲಿ ಆತಂಕ ಸೃಷ್ಟಿಸುವ, ನಿಷ್ಪ್ರಯೋಜಕ ಯೋಚನೆಗಳಿಗೆ ಹಚ್ಚುವ, ಸ್ಪೂರ್ತಿಯಿಲ್ಲದ ಭಾವನೆಗಳನ್ನು ಉಂಟುಮಾಡುವ ಜನರೊಂದಿಗಿದ್ದರೆ ಅವರು ನಿಮ್ಮನ್ನೂ ಸಹ ಅವರಂತೆಯೇ ಮಾಡುತ್ತಾರೆ. ಈ ರೀತಿಯ ಜನರೊಂದಿಗೆ ಬೆರೆತು ಸಮಯ ವ್ಯರ್ಥ ಮಾಡಿಕೊಳ್ಳುವಷ್ಟು ಜೀವನ ದೀರ್ಘವಾಗಿಲ್ಲ.

 

೫) ನಿಮ್ಮ ಜೀವನವನ್ನು ನೀವೆ ರಚಿಸಿಕೊಳ್ಳುತ್ತೀರಿ

ನೀವು ಪರಿಸ್ಥಿತಿಗೆ ಬಲಿಯಾಗುವುದಿಲ್ಲ. ನಿಮ್ಮ ಮೌಲ್ಯಗಳು ಮತ್ತು ಆಕಾಂಕ್ಷೆಗಳಿಗೆ ವಿರುದ್ಧವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಕ್ರಮಗಳನ್ನು ತೆಗೆದುಕೊಳ್ಳಲು ಯಾರೂ ನಿಮ್ಮನ್ನು ಒತ್ತಾಯಿಸಲು ಸಾಧ್ಯವಿಲ್ಲ. ನೀವು ಇಂದು ವಾಸಿಸುತ್ತಿರುವ ಸಂದರ್ಭಗಳು ನಿಮ್ಮಿಂದಲೇ ನಿರ್ಮಾಣಗೊಂಡಿರುತ್ತವೆ. ನೀವೆ ಅವುಗಳನ್ನು ರಚಿಸಿದ್ದೀರಿ. ಅಂತೆಯೇ, ನಿಮ್ಮ ಭವಿಷ್ಯವು ಸಂಪೂರ್ಣವಾಗಿ ನಿಮಗೆ ಬಿಟ್ಟದ್ದು.

 

೬) ಭಯವೇ ವಿಷಾದದ ಮೂಲ

ಸವಾಲುಗಳು, ಸಮಸ್ಯೆಗಳನ್ನು ಎದುರಿಸಲು ಹಿಂಜರಿಯದಿರಿ. ಭಯ ಯಾವತ್ತೂ ವರ್ತಮಾನದ ಘಟನೆಯ ಜತೆ ಇರುವುದೇ ಇಲ್ಲ. ಮುಂದೆ ಹೀಗಾಗಬಹುದು ಎಂಬ ಕಲ್ಪನೆಯಿಂದಲೇ ಭಯವಾಗುತ್ತದೆ. ಅಂತಿಮವಾಗಿ ಆಗಬಹುದಾಗಿದ್ದು ಮನುಷ್ಯನ ಸಾವು, ಅದಕ್ಕಿಂತ ಮುಂದೆ ಏನೂ ಆಗದು. ಆದರೂ ಸಾವು ನಿಮಗೆ ಸಂಭವಿಸಬಹುದಾದ ಕೆಟ್ಟ ವಿಷಯವಲ್ಲ. ನಿಮಗೆ ಸಂಭವಿಸಬಹುದಾದ ಕೆಟ್ಟ ವಿಷಯವೆಂದರೆ ನೀವು ಇನ್ನೂ ಜೀವಂತವಾಗಿರುವಾಗ ಒಳಗೊಳಗೇ ಸಾಯಲು ಅವಕಾಶ ಮಾಡಿಕೊಡುವುದು.

 

೭) ಕ್ಷಮಿಸಲು ಕಾಯಬೇಕಾಗಿಲ್ಲ

ಒಮ್ಮೆ ನೀವು ದ್ವೇಷವನ್ನು ತೊರೆದರೆ, ಕ್ಷಮಿಸಿ ಎಂದು ಹೇಳದವರನ್ನು ಸಹ ಕ್ಷಮಿಸಿದರೆ ಆ ನಂತರದ ಜೀವನವು ತುಂಬಾ ಸುಗಮವಾಗುತ್ತದೆ. ದ್ವೇಷದ ಭಾವನೆ ನಿಮ್ಮ ಹಿಂದಿನ ನಕಾರಾತ್ಮಕ ಘಟನೆಗಳನ್ನು ನೆನಪಿಸುತ್ತ ಇಂದಿನ ಸಂತೋಷವನ್ನು ಹಾಳುಮಾಡುತ್ತವೆ. ದ್ವೇಷ ಮತ್ತು ಕೋಪವು ಭಾವನಾತ್ಮಕ ಪರಾವಲಂಬಿಗಳು. ಜೀವನದಲ್ಲಿ ನಿಮ್ಮ ಸಂತೋಷವನ್ನು ನಾಶಪಡಿಸುತ್ತದೆ.

ದ್ವೇಷವನ್ನು ಹಿಡಿದಿಟ್ಟುಕೊಳ್ಳುವುದರೊಂದಿಗೆ ಬರುವ ನಕಾರಾತ್ಮಕ ಭಾವನೆಗಳು ನಿಮ್ಮ ಮಾನಸಿಕ ಒತ್ತಡದ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ, ಮತ್ತು ಒತ್ತಡವನ್ನು ಹಿಡಿದಿಟ್ಟುಕೊಳ್ಳುವುದು ವಿನಾಶಕಾರಿ ಆರೋಗ್ಯ ಪರಿಣಾಮಗಳನ್ನು ಉಂಟುಮಾಡಬಹುದು. ಒತ್ತಡವನ್ನು ಹಿಡಿದಿಟ್ಟುಕೊಳ್ಳುವುದು ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗಕ್ಕೆ ಕಾರಣವಾಗುತ್ತದೆ ಎಂದು ಎಮೋರಿ ವಿಶ್ವವಿದ್ಯಾಲಯದ ಸಂಶೋಧಕರು ತೋರಿಸಿದ್ದಾರೆ. ಹಾಗಾಗಿ ದ್ವೇಷವನ್ನು ತೊರೆದು ಕ್ಷಮಿಸಿಬಿಡಿ.

 

೮) ವರ್ತಮಾನದಲ್ಲಿ ಜೀವಿಸಿ

ಜೀವನದಲ್ಲಿ ಕಳೆದು ಹೋಗಿರುವ ಕಾಲವನ್ನು ಮತ್ತೆ ಬದಲಾಯಿಸಲು ಸಾಧ್ಯವಿಲ್ಲ. ಮತ್ತು ಯಾವುದೇ ಆತಂಕವು ಭವಿಷ್ಯವನ್ನು ಬದಲಾಯಿಸುವುದಿಲ್ಲ. ಈ ಕ್ಷಣದ ವಾಸ್ತವವನ್ನು (ಒಳ್ಳೆಯದು ಅಥವಾ ಕೆಟ್ಟದ್ದು) ಸಂಪೂರ್ಣವಾಗಿ ಸ್ವೀಕರಿಸಿ. ನೀವು ನಿರಂತರವಾಗಿ ಭೂತ ಅಥವಾ ಭವಿಷ್ಯತ್ ಕಾಲದ ಬಗ್ಗೆ ಯೋಚಿಸುತ್ತಿದ್ದರೆ ಸಂತೋಷವಾಗಿರುವುದು ಅಸಾಧ್ಯ.

ಈ ಕ್ಷಣದಲ್ಲಿ ಬದುಕಲು ನೀವು ಎರಡು ಕೆಲಸಗಳನ್ನು ಮಾಡಬೇಕು. ನಿಮ್ಮ ಬದುಕಿನಲ್ಲಿ ಹಿಂದೆ ನಡೆದದ್ದನ್ನು ಒಪ್ಪಿಕೊಳ್ಳಿ. ನಿಮ್ಮ ಭೂತಕಾಲದೊಂದಿಗೆ ನೀವು ಶಾಂತಿ ಸಾಧಿಸದಿದ್ದರೆ ಅದು ನಿಮ್ಮನ್ನು ಎಂದಿಗೂ ಬಿಡುವುದಿಲ್ಲ. ಭವಿಷ್ಯದ ಅನಿಶ್ಚಿತತೆಯನ್ನು ಒಪ್ಪಿಕೊಳ್ಳಿ. ಇಲ್ಲಿ ಮತ್ತು ಈಗ ಚಿಂತೆಗೆ ಸ್ಥಾನವಿಲ್ಲ ಎಂದು ನಿರ್ಧರಿಸಿ.

 

೯) ಯಾರೊಂದಿಗೂ ನಿಮ್ಮನ್ನು ಹೋಲಿಸಿಕೊಳ್ಳಬೇಡಿ

ನಿಮ್ಮ ಸಂತೋಷ ಮತ್ತು ತೃಪ್ತಿಯನ್ನು ನೀವು ನಿಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವ ಮೂಲಕ ಪಡೆದಾಗ, ನೀವು ನಿಮ್ಮ ಸ್ವಂತ ಹಣೆಬರಹದ ಮುಖ್ಯಸ್ಥರಾಗಿರುವುದಿಲ್ಲ.

ಇತರರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದಕ್ಕೆ ನಿಮ್ಮ ಪ್ರತಿಕ್ರಿಯೆಗಳನ್ನು ಸಂಪೂರ್ಣ ಆಫ್ ಮಾಡುವುದು ಅಸಾಧ್ಯ. ಆದರೂ ನಿಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವುದನ್ನು ಆದಷ್ಟೂ ಕಡಿಮೆ ಮಾಡಿ. ಜನರು ನಿಮ್ಮ ಬಗ್ಗೆ ಏನೇ ಯೋಚಿಸುತ್ತಿರಲಿ ಅಥವಾ ಮಾಡುತ್ತಿರಲಿ, ನಿಮ್ಮ ಸ್ವಾಭಿಮಾನವು ಆಂತರ್ಯದಿಂದ ಬರಬೇಕು. ಜನರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಹೊರತಾಗಿಯೂ, ಒಂದು ವಿಷಯ ಖಚಿತ. ನೀವು ಅವರು ಹೇಳುವಷ್ಟು ಒಳ್ಳೆಯವರೂ ಅಲ್ಲ ಅಥವಾ ಕೆಟ್ಟವರೂ ಆಗಿರುವುದಿಲ್ಲ.

 

೧೦) ಜೀವನ ಚಿಕ್ಕದಾಗಿದೆ

ನಮ್ಮಲ್ಲಿ ಯಾರಿಗೂ ನಾಳೆಯ ಭರವಸೆ ಇಲ್ಲ. ಆದರೂ, ಯಾರಾದರೂ ಅನಿರೀಕ್ಷಿತವಾಗಿ ಮರಣಹೊಂದಿದಾಗ ಅದು ನಮ್ಮ ಸ್ವಂತ ಜೀವನದ ಸ್ಟಾಕ್ ಅನ್ನು ಚೆಕ್ ಮಾಡಿಕೊಳ್ಳುವ ಯೋಚನೆಗೆ ದೂಡುತ್ತದೆ. ಹಾಗಾಗಿ ಅನುಕ್ಷಣವೂ ನಾವು ನಮ್ಮ ಸಮಯವನ್ನು ಹೇಗೆ ಕಳೆಯುತ್ತೇವೆ ಮತ್ತು ನಾವು ಇತರರೊಂದಿಗೆ ಹೇಗೆ ವರ್ತಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಪ್ರತಿ ದಿನವೂ ನಮಗೆ ಲಭಿಸಿದ ಒಂದು ಗಿಫ್ಟ್. ನೀವು ಜೀವನವನ್ನು ಒಂದು ಆಶೀರ್ವಾದದಂತೆ ತಿಳಿಯಲು ಪ್ರಾರಂಭಿಸಿ. ಪ್ರತಿ ದಿನವೂ ಉತ್ತಮವಾಗಿ ಭಾಸವಾಗುತ್ತದೆ.

 

೧೧)ಬದಲಾವಣೆ ಅನಿವಾರ್ಯ — ಅದನ್ನು ಸ್ವೀಕರಿಸಿ

ನೀವು ಬದಲಾವಣೆಯನ್ನು ಸ್ವೀಕರಿಸಿದಾಗ ಮಾತ್ರ ನೀವು ಅದರಲ್ಲಿ ಒಳ್ಳೆಯದನ್ನು ಕಂಡುಕೊಳ್ಳಬಹುದು. ಬದಲಾವಣೆಯು ಸೃಷ್ಟಿಸುವ ಅವಕಾಶಗಳನ್ನು ಗುರುತಿಸಿ.

ಬದಲಾವಣೆಯನ್ನು ನಿರ್ಲಕ್ಷಿಸಿದರೆ ಅದಾಗಿಯೇ ದೂರವಾಗುತ್ತದೆ ಎಂಬ ಭ್ರಮೆ ಬೇಡ.

ಜೀವನ ಯಾರಿಗಾಗಿಯೂ ನಿಲ್ಲುವುದಿಲ್ಲ. ಉತ್ತಮ ಸಂಗತಿಗಳು ನಡೆಯುತ್ತಿರುವಾಗ, ಅವುಗಳನ್ನು ಪ್ರಶಂಸಿಸಿ ಮತ್ತು ಆನಂದಿಸಿ, ಏಕೆಂದರೆ ಅವುಗಳು ಬದಲಾಗುತ್ತವೆ. ಸಿಕ್ಕ ಉತ್ತಮ ಸಂಗತಿಗಳನ್ನು ಆನಂದಿಸುವ ಬದಲು, ನೀವು ಯಾವಾಗಲೂ ಇನ್ನೂ ಉತ್ತಮವಾದದ್ದನ್ನು ಹುಡುಕುತ್ತಿದ್ದರೆ ನೀವು ಎಂದಿಗೂ ಉತ್ತಮ ಕ್ಷಣಗಳನ್ನು ಪಡೆಯುವುದಿಲ್ಲ.

https://pragati.taskdun.com/pragativahini-special/a-treatment-of-reality-for-the-field-of-education-expecting-radical-change/

https://pragati.taskdun.com/latest/what-karnataka-people-want-to-do-in-hotels-an-article-based-on-a-survey-report/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button