ಕೊಳಚೆ ಪ್ರದೇಶದ ನಿವಾಸಿಗಳಿಗೆ ಪಿಎಂ ಆವಾಸ್ ಯೋಜನೆಯಡಿಯಲ್ಲಿ 1429 ಮನೆಗಳ ಮಂಜೂರು: ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ; ಮೂಡಲಗಿ: ಮೂಡಲಗಿ ಪಟ್ಟಣ ವ್ಯಾಪ್ತಿಯಲ್ಲಿ ಘೋಷಿತ ಕೊಳಚೆ ಪ್ರದೇಶಗಳಿಗೆ ಪ್ರಧಾನ ಮಂತ್ರಿ ಆವಾಸ ಯೋಜನೆ ಹಾಗೂ ಎಚ್‌ಎಫ್‌ಎ ಯೋಜನೆಯಡಿಯಲ್ಲಿ 1429 ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಲಾಗುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಮಂಗಳವಾರ ಸಂಜೆ ಇಲ್ಲಿಯ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಜರುಗಿದ ಪಟ್ಟಣದ ಕೊಳಚೆ ಪ್ರದೇಶಗಳಲ್ಲಿ ಮನೆಗಳನ್ನು ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೊಳಚೆ ಪ್ರದೇಶಗಳಲ್ಲಿ ಸುಂದರವಾದ ವಸತಿ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಮೂಲಕ ಎಲ್ಲ ವರ್ಗದ ಸಮುದಾಯಗಳಿಗೆ ಆಧ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಕೊಳಚೆ ಪ್ರದೇಶಗಳನ್ನು ಅಭಿವೃದ್ಧಿ ಮಾಡುವ ಮೂಲಕ ಅಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಾಯಧನದ ಜೊತೆಗೆ ಸುಂದರವಾದ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆ ಇದಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದಕ್ಕಾಗಿ ಫಲಾನುಭವಿಗಳಿಗೆ ವಿಶೇಷ ಸೌಲತ್ತುಗಳನ್ನು ನೀಡುತ್ತಿವೆ. ಪ್ರತಿ ಮನೆ ನಿರ್ಮಾಣಕ್ಕೆ ಒಟ್ಟು 716426 ರೂ. ತಗುಲಲಿದ್ದು, ಎಸ್.ಸಿ ಎಸ್.ಟಿ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ 1.50 ಲಕ್ಷ ರೂ. ರಾಜ್ಯ ಸರ್ಕಾರ 2 ಲಕ್ಷ ರೂ. ಸೇರಿ ಒಟ್ಟು 3.50 ಲಕ್ಷ ರೂ. ಸಹಾಯಧನ ನೀಡಲಿವೆ. ಫಲಾನುಭವಿಗಳು ಮುಂಗಡವಾಗಿ ಶೇ 10 ರಷ್ಟು 71643 ರೂ. ವಂತಿಗೆಯನ್ನು ಡಿಡಿ ಮೂಲಕ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಭರಿಸಬೇಕು. ಬಾಕಿ ಉಳಿದ 366426 ರೂ. ಹಣವನ್ನು ಫಲಾನುಭವಿಗಳು ಬ್ಯಾಂಕ್ ಲೋನ್ ಮೂಲಕ ಭರಿಸಬೇಕು.
ಅಲ್ಪಸಂಖ್ಯಾತರು ಮತ್ತು ಇತರೇ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ 1.50 ಲಕ್ಷ ರೂ ಮತ್ತು ರಾಜ್ಯ ಸರ್ಕಾರ 1.20 ಲಕ್ಷ ರೂ. ನೀಡಲಿದ್ದು ಒಟ್ಟು 2.70 ಲಕ್ಷ ರೂ. ಸರ್ಕಾರ ಅನುದಾನ ನೀಡಲಿದೆ. ಈ ಫಲಾನುಭವಿಗಳು ಶೇ 15 ರಷ್ಟು ಮುಂಗಡ ಹಣ 107464 ರೂ. ಹಣವನ್ನು ಡಿಡಿ ಮೂಲಕ ತುಂಬಬೇಕು. 4,46,426 ರೂ. ಹಣವನ್ನು ಪ್ರತಿ ಮನೆಗೆ ಫಲಾನುಭವಿಗಳು ಭರಿಸಬೇಕು. ಬ್ಯಾಂಕ್ ಲೋನ್ ಮೂಲಕ ಬಾಕಿ ಉಳಿದ 338962 ರೂ.ಗಳನ್ನು ಫಲಾನುಭವಿಗಳು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಭರಿಸಬೇಕು. ಒಟ್ಟು 1429 ಫಲಾನುಭವಿಗಳಿಗೆ ಕೊಳಗೇರಿ ಪ್ರದೇಶದಲ್ಲಿ ಮನೆಗಳನ್ನು ಕಟ್ಟಿಸಿಕೊಡುವ ಸರ್ಕಾರದ ಸಂಕಲ್ಪವಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಅಭಿಯಂತರ ಪುಣಿರಾಜ್ ಎಂ.ಜಿ, ತಹಶೀಲ್ದಾರ ಡಿ.ಜೆ. ಮಹಾತ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಜಿ. ಚಿನ್ನನ್ನವರ, ಡಿವಾಯ್‌ಎಸ್‌ಪಿ ಮನೋಜಕುಮಾರ ನಾಯ್ಕ, ಮುಖ್ಯಾಧಿಕಾರಿ ದೀಪಕ ಹರ್ದಿ, ಬಿಇಓ ಅಜೀತ ಮನ್ನಿಕೇರಿ, ಪುರಸಭೆ ಸದಸ್ಯರು, ಮುಖಂಡರುಗಳು ಉಪಸ್ಥಿತರಿದ್ದರು
ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳ ಸಭೆ: ರ‍್ಯಾಂಕಿಂಗ್ ಪದ್ಧತಿ ಜಾರಿಗೆ ನಿರ್ಧಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ