Belagavi NewsBelgaum NewsKannada NewsKarnataka News

ಭಾನುವಾರ ಬೆಳಗಾವಿಯಲ್ಲಿ ನಿಷೇಧಾಜ್ಞೆ ಜಾರಿ



ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕರ್ನಾಟಕ ಪರೀಕ್ಷಾ ಪ್ರಧಿಕಾರ ಬೆಂಗಳೂರು ರವರಿಂದ ಸೆ. ೨೪, ೨೦೨೩ ರಂದು ಎಂಬಿಎ ಮತ್ತು ಎಂಸಿಎ-೨೦೨೩ ನೇ ಸಾಲಿನ ಪಿಜಿ ಸಿಇಟಿ ಪರೀಕ್ಷೆಗಳು ಬೆಳಗಾವಿ ನಗರ ವ್ಯಾಪ್ತಿಯ ೫ ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ ೧೦.೩೦ ಗಂಟೆಯಿಂದ ಮಧ್ಯಾಹ್ನ ೧೨.೩೦ ಗಂಟೆಯ ವರೆಗೆ ಹಾಗೂ ೩ ಪರೀಕ್ಷಾ ಕೇಂದ್ರಗಳಲ್ಲಿ ಎಂಸಿಎ ಮಧ್ಯಾಹ್ನ ೨.೩೦ ಗಂಟೆಯಿಂದ ಸಂಜೆ ೪.೩೦ ಗಂಟೆವರೆಗೆ ಹಾಗೂ ೫ ಪರೀಕ್ಷಾ ಕೇಂದ್ರಗಳಲ್ಲಿ ಎಂಬಿಎ ಪಿಜಿಸಿಇಟಿ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಲೂ ೨೦೦ ಮೀ ಅಂತರದಲ್ಲಿ ದಂಡ ಪ್ರಕ್ರಿಯೆ ಸಂಹಿತೆಯ ಕಲಂ.೧೪೪ ಸಿ.ಆರ್.ಪಿ.ಸಿ ಅಡಿಯಲ್ಲಿ ಪರೀಕ್ಷೆಗಳು ನಡೆಯುವ ಸಮಯದಲ್ಲಿ ನಿಷೇದಾಜ್ಞೆ ಜಾರಿಗೊಳಿಸಿ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಹಾಗೂ ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಎಸ್. ಎನ್, ಸಿದ್ದರಾಮಪ್ಪಾ ಅವರು ಆದೇಶವನ್ನು ಹೊರಡಿಸಿದ್ದಾರೆ.


ನಿಷೇಧಾಜ್ಞೆಯ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ಸುತ್ತಲು ೫ ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ ಹಾಗೂ ಪರೀಕ್ಷಾ ಕೇಂದ್ರದ ಸುತ್ತಲು ೨೦೦ ಮೀಟರ್ ಸುತ್ತಳತೆಯಲ್ಲಿ ಅಭ್ಯರ್ಥಿಗಳು, ಶಾಲಾ/ ಕಾಲೇಜು ಸಿಬ್ಬಂದಿ ಜನರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಹೊರತುಪಡಿಸಿ ಸಾರ್ವಜನಿಕರು, ಪಾಲಕರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.

ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಯಾವುದೇ ಸಭೆ/ಸಮಾರಂಭಗಳು ನಡೆಯದಂತೆ ನಿಷೇಧಾಜ್ಞೆಯನ್ನು ವಿಧಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಲು ಶಸ್ತ್ರ, ಬಡಿಗೆ, ಬರ್ಚಿ, ಖಡ್ಗ, ಗಧೆ, ಬಂದೂಕು, ಚೂರಿ, ಲಾಠಿ, ಡೊಣ್ಣೆ, ಚಾಕೂ ಅಥವಾ ದೇಹಕ್ಕೆ ಅಪಾಯವನ್ನುಂಟು ಮಾಡಲು ಉಪಯೋಗಿಸಬಹುದಾದ ಯಾವುದೇ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವದನ್ನು ಮತ್ತು ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ.
ಪರೀಕ್ಷಾ ಕೇಂದ್ರದ ಸುತ್ತಲು ಕಲ್ಲುಗಳನ್ನು ಕ್ಷಾರ ಪದಾರ್ಥ ಇಲ್ಲವೇ ಸ್ಪೋಟಕ ವಸ್ತುಗಳು ಯಾವುದೇ ದಹನಕಾರಿ ವಸ್ತುಗಳು ಇತ್ಯಾದಿಗಳನ್ನು ಸದರಿ ಸ್ಥಳಕ್ಕೆ ತೆಗೆದುಕೊಂಡು ಹೋಗುವುದನ್ನು ಮತ್ತು ಶೇಖರಿಸುವುದನ್ನು ನಿಷೇಧಿಸಲಾಗಿದೆ.


ನಿಷೇಧಾಜ್ಞೆಯ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ಸುತ್ತಲು ಯಾವುದೇ ವ್ಯಕ್ತಿ ಸಾರ್ವಜನಿಕರಾಗಲಿ ಮೇಲೆ ವಿವರಿಸಿದ ಮಾರಕಾಸ್ತ್ರಗಳು, ಸ್ಪೋಟಕ ವಸ್ತುಗಳು, ವಿನಾಶಕಾರಿ ವಸ್ತುಗಳು ಹಾಗೂ ಇತರೆ ಆಕ್ಷೇಪಾರ್ಹ ವಸ್ತುಗಳು ಹೊಂದಿದ್ದು ಕಂಡುಬಂದ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಲು ಯಾವುದೇ ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ಇರುತ್ತದೆ. ಅಂಥಹ ಮಾರಕಾಸ್ತ್ರಗಳನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಅಲ್ಲದೆ ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು.


ಪರೀಕ್ಷಾ ಕೇಂದ್ರದ ಸುತ್ತಲಿನ ಸ್ಥಳದಲ್ಲಿ ಬಹಿರಂಗವಾಗಿ ಘೋಷಣೆ ಮಾಡುವುದು, ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖನ ಕೊಡುವುದು ಸನ್ನೆ ಅಥವಾ ನಕಲಿ ಪ್ರದರ್ಶನವನ್ನು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಆಕ್ರಮಿಸಬಹುದಾದ ಕತ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.


ನಿಷೇಧಾಜ್ಞೆಯ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ಸುತ್ತಮುತ್ತ ೨೦೦ ಮೀಟರ್ ಅಂತರದಲ್ಲಿ ದ್ವನಿವರ್ಧಕ ಉಪಯೋಗಿಸುವದನ್ನು ನಿಷೇಧಿಸಲಾಗಿದೆ ಹಾಗೂ ಪರೀಕ್ಷಾ ಕೇಂದ್ರಗಳ ಸುತ್ತಲೂ ಇರುವ ಸೈಬರ್ ಕೆಫೆ, ಝೆರಾಕ್ಸ್ ಅಂಗಡಿ ಹಾಗೂ ಇನ್ನಿತರ ಅಂತರ್ಜಾಲ ಕೇಂದ್ರಗಳನ್ನು ನಿಷೇಧಾಜ್ಞೆಯ ಕಾಲಕ್ಕೆ ಕಡ್ಡಾಯವಾಗಿ ಮುಚ್ಚಲು ಆದೇಶಿಸಲಾಗಿದೆ.


ಈ ಆಜ್ಞೆಯು ಅಂತ್ಯಕ್ರಿಯೆ ಮೆರವಣಿಗೆಗಳಿಗೆ ಮತ್ತು ಇನ್ನಿತರ ಕಾರಣಗಳಿಗಾಗಿ ಅನುಮತಿ ಪಡೆದು ತೆಗೆಯಿಸಲಾದ ಮೆರವಣಿಗೆಗಳಿಗೆ ಅನ್ವಯಿಸುವದಿಲ್ಲ.
ಸದರಿ ಆಜ್ಞೆಯನ್ನು ಉಲ್ಲಂಘಿಸುವವರ ವಿರುದ್ದ ಕಲಂ ೧೮೮ ಭಾರತೀಯ ದಂಡ ಸಂಹಿತೆಯ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಹೆಚ್ಚುವರಿ ದಂಡಾಧಿಕಾರಿ ಎಸ್. ಎನ್. ಸಿದ್ರಾಮಪ್ಪಾ ಅವರು ಆದೇಶದಲ್ಲಿ ತಿಳಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button