ಪ್ರಗತಿವಾಹಿನಿ ಸುದ್ದಿ, ಶಿಲ್ಲಾಂಗ್: ಹದಿಹರೆಯದ ಯುವತಿ ಲೈಂಗಿಕತೆಯನ್ನು ನಿರ್ಧರಿಸಲು ಸಮರ್ಥಳಿರುತ್ತಾಳೆ ಎಂದು ಅಭಿಪ್ರಾಯಪಟ್ಟಿರುವ ಮೇಘಾಲಯ ಹೈಕೋರ್ಟ್ ಈ ಸಂಬಂಧ ಪೋಕ್ಸೋ ಕಾಯಿದೆಯಡಿ ದಾಖಲಾಗಿದ್ದ ಪ್ರಕರಣವೊಂದನ್ನು ರದ್ದುಗೊಳಿಸಿದೆ.
ಮನೆಗೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಆ ಮನೆಯ ಹುಡುಗಿ ಜತೆ ಪ್ರೇಮ ವ್ಯವಹಾರ ಕುದುರಿಸಿದ್ದ. ಇದು ಮುಂದುವರಿದು ಆಕೆಯ ಜತೆ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದ. ಇದನ್ನು ತಿಳಿದ ಯುವತಿ ತಾಯಿ ಮನೆಗೆಲಸದ ವ್ಯಕ್ತಿ ವಿರುದ್ಧ ಪೋಕ್ಸೋ ಕಾಯಿದೆಯಡಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ವೇಳೆ ಆರೋಪಿ ಪರ ವಕೀಲರು ಯುವತಿ ಐಪಿಸಿ ಸೆಕ್ಷನ್ 164ರಡಿ ನೀಡಿದ ಹೇಳಿಕೆಯಲ್ಲಿ ಸಮ್ಮತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಹೇಳಿಕೊಂಡಿದ್ದಾಳೆ ಎಂಬ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಈ ವಾದವನ್ನು ಎತ್ತಿಹಿಡಿದ ನ್ಯಾಯಾಲಯ ಆರೋಪಿಯ ವಿರುದ್ಧದ ಪೋಕ್ಸೋ ಪ್ರಕರಣ ರದ್ದುಗೊಳಿಸಿದೆ.
ಪ್ರಕರಣದ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ವಾನ್ಲುರಾ ಡಿಂಗ್ ಡೋ “ಹದಿಹರೆಯದವರ ವಯೋಮಾನ ಮತ್ತು ಮಾನಸಿಕ ಸಾಮರ್ಥ್ಯಗಳ ಆಧಾರದಲ್ಲಿ ಹೇಳುವುದಾದರೆ ಅವರು ವಯೋಮಾನದಲ್ಲಿ ಅಪ್ರಾಪ್ತರಾದರೂ ಪ್ರತ್ಯಕ್ಷ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವುದರ ಪರಿಣಾಮಗಳ ಬಗ್ಗೆ ಪ್ರಜ್ಞಾಪೂರ್ವಕ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ ಎಂದು ಪರಿಗಣಿಸಬೇಕಾಗುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅವರು ಪೋಕ್ಸೋ ಕಾಯಿದೆಯ ದುರ್ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಪೋಕ್ಸೋ ಕಾಯಿದೆಯ ಸೆಕ್ಷನ್ 3 ಮತ್ತು 4ರ ಅಡಿ ತನ್ನ ವಿರುದ್ಧ ದಾಖಲಾದ ಪ್ರಕರಣ ರದ್ದುಗೊಳಿಸುವಂತೆ ಕೋರಿ ಆರೋಪಿ ನ್ಯಾಯಾಲಯದ ಮೆಟ್ಟಿಲೇರಿದ್ದ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ