ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಲಕ್ಷ್ಮೀ ಹೆಬ್ಬಾಳಕರ ಜನ್ಮ ದಿನದ ಪ್ರಯುಕ್ತ ಬೆಳಗಾವಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕನ್ನಡ, ಇಂಗ್ಲಿಷ, ಮರಾಠಿ, ಉರ್ದು ಮಾಧ್ಯಮದ ಪ್ರತಿಭಾವಂತ 188 ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ನಗರದ ಕ್ಲಬ್ ಆವರಣದಲ್ಲಿ ಭಾನುವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ, ವಿವಿಧ ಮಠಾಧೀಶರ ಸಮ್ಮುಖದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ 8 ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಮತ್ತು ಐ ಪ್ಯಾಡ್ ನೀಡಿದರೆ, ಇತರ 180 ವಿದ್ಯಾರ್ಥಿಗಳಿಗೆ ಗೋಲ್ಡ್ ಹಾಗೂ ಸಿಲ್ವರ್ ಮೆಡಲ್ ಜೊತೆಗೆ ಸ್ಮರಣಿಕೆಗಳನ್ನು ನೀಡಲಾಯಿತು.
ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ, ಮುತ್ನಾಳ ಕೇದಾರ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ, ಬಡೆಕೊಳ್ಳಮಠದ ನಾಗೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿ, ಶಾಸಕ ಲಕ್ಷ್ಮಿ ಹೆಬ್ಬಾಳಕರ್ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಇಂತಹ ಅಪರೂಪದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ, ಕ್ಷೇತ್ರದ ಸಮಗ್ರ ಅಭಿವೃದ್ಧಿ ಪಡಿಸುವುದಲ್ಲದೆ, ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡುವುದಾಗಿ ಘೋಷಿಸಿದರು.
ಗ್ರಾಮೀಣ ಕ್ಷೇತ್ರ ಶಿಕ್ಷಣದಲ್ಲಿ ಅತ್ಯಂತ ಹಿಂದುಳಿದಿದೆ. ಇಲ್ಲಿಯ ಶಾಲೆಗಳು ಅಭಿವೃದ್ಧಿ ಕಂಡಿರಲಿಲ್ಲ. ನಾನು ಆಯ್ಕೆಯಾದ ನಂತರ ಹಲವಾರು ಶಾಲೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಭಾಗದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಏನಾಗಬೇಕೋ ಎಲ್ಲವನ್ನೂ ಹಂತಹಂತವಾಗಿ ಮಾಡಲಾಗುವುದು. ಗ್ರಾಮೀಣ ಕ್ಷೇತ್ರದ ಜನರು ನನಗೆ ಸ್ವಾಭಿಮಾನದ ಮರುಹುಟ್ಟು ನೀಡಿದ್ದಾರೆ. ಅವರ ಸಂಪೂರ್ಣ ಋಣ ನನ್ನ ಮೇಲಿದೆ. ಜೀವನ ಪರ್ಯಂತ ಅವರ ಸೇವೆ ಮಾಡುತ್ತೇನೆ ಎಂದು ಅವರು ತಿಳಿಸಿದರು.
ಸಿ.ಸಿ.ಪಾಟೀಲ, ಚನ್ನರಾಜ ಹಟ್ಟಿಹೊಳಿ, ಮೃಣಾಲ ಹೆಬ್ಬಾಳಕರ್, ಬಸವರಾಜ ಮ್ಯಾಗೋಟಿ, ಯುವರಾಜ ಕದಂ ಸೇರಿದಂತೆ ನೂರಾರು ಜನಪ್ರತಿನಿಧಿಗಳು, ಸಾವಿರಾರು ನಾಗರಿಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ