ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಕಸ್ಟಮ್ಸ್ ಅಧಿಕಾರಿ ಎಂದು ಕರೆ ಮಾಡಿದ್ದ ವ್ಯಕ್ತಿ 2.24 ಕೋಟಿ ರೂ. ವಂಚಿಸಿದ್ದಾನೆ.
ನಿಮ್ಮ ಪಾರ್ಸಲ್ ದೆಹಲಿಯ ಕಸ್ಟಮ್ಸ್ನಲ್ಲಿ ಸೀಜ್ ಮಾಡಲಾಗಿದೆ. ಅದರಲ್ಲಿ ನಿಮ್ಮ ಹೆಸರಿನ ನಕಲಿ ಪಾಸ್ ಪೋರ್ಟ್, ಬ್ಯಾಂಕ್ ಎಟಿಎಂ ಕಾರ್ಡ್ಗಳು, ಎಂಡಿಎಂಎ ಡ್ರಗ್ಸ್ ಇದೆ ಎಂದು ಸುಳ್ಳು ಹೇಳಿದ್ದ. ಈ ವಿಚಾರ ಆ್ಯಂಟಿ ನಾರ್ಕೊಟಿಕ್ ಬ್ಯೂರೊಗೆ ತಿಳಿದಿದೆ, ಹಾಗಾಗಿ ದೂರು ದಾಖಲು ಮಾಡಬೇಕು ಎಂದು ಹೆದರಿಸಲಾಗಿದೆ.
ದೂರು ನೀಡಲು ಸ್ಕೈಪ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಎಂದು ಆರೋಪಿ ಸೂಚನೆ ನೀಡಿದ್ದ. ಇದನ್ನು ನಂಬಿ ಸ್ಕೈಪ್ ಆ್ಯಪ್ ಡೌನ್‌ಲೋಡ್ ಮಾಡಿದ ಟೆಕ್ಕಿ ಅದರ ಮೂಲಕ ದೂರು ನೀಡಲು ವಂಚಕ ಹೇಳಿದಂತೆಯೇ ಮಾಡಿದ್ದಾರೆ. ಸ್ಕೈಪ್ ಆ್ಯಪ್ನಲ್ಲಿ ವಿಡಿಯೋ ಕಾಲ್ನಲ್ಲಿ ಕಾಣಿಸಿಕೊಂಡ, ಪೊಲೀಸ್ ಸಮವಸ್ತ್ರದಂತೆಯೇ ಬಟ್ಟೆ ಧರಿಸಿದ್ದ ವ್ಯಕ್ತಿ, ನಿಮ್ಮ ಮೇಲೆ ಮನಿ ಲಾಂಡರಿಂಗ್ ಪ್ರಕರಣ ಕೂಡ ಇದೆ. ಸಿಬಿಐನವರು ಈ ಬಗ್ಗೆ ವಿಚಾರಣೆ ಮಾಡುತ್ತಾರೆ ಎಂದು ಹೆದರಿಸಿದ್ದಾನೆ.
ಪ್ರಕರಣವನ್ನು ಮುಕ್ತಾಯಗೊಳಿಸಲು ಹಣ ನೀಡುವಂತೆ ಕೇಳಿ, ಹಂತ ಹಂತವಾಗಿ ಸುಮಾರು 8 ಖಾತೆಗೆಗಳಿಗೆ ಒಟ್ಟು 2.24 ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ. ಕೆಲ ದಿನಗಳ ನಂತರ ಟೆಕ್ಕಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಈ ಕುರಿತು ಪೊಲೀಸ್ ದೂರು ದಾಖಲಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ