Kannada NewsKarnataka NewsLatest

*2 ಕೋಟಿ ರೂ. ವೆಚ್ಚದಲ್ಲಿ 15 ಎಕರೆಯಲ್ಲಿ ಸ್ಮೃತಿ ವನ ನಿರ್ಮಾಣ: ಈಶ್ವರ ಖಂಡ್ರೆ*

ಪ್ರಗತಿವಾಹಿನಿ ಸುದ್ದಿ, ಸಿದ್ದಗಂಗೆ: ಜ.21: ಜಾತಿರಹಿತ, ವರ್ಗರಹಿತ, ಶ್ರೇಣಿರಹಿತ, ಅಸ್ಪೃಶ್ಯತೆ ಭೇದ ರಹಿತ ಸಮಾಜ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ ಕನಸಾಗಿತ್ತು. ಅದನ್ನು ಸಾಕಾರಗೊಳಿಸುವ ಕಾರ್ಯ ನಾವೆಲ್ಲರೂ ಮಾಡಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.


ಸಿದ್ದಗಂಗೆಯಲ್ಲಿಂದು ನಡೆದ ಡಾ. ಶಿವಕುಮಾರಸ್ವಾಮೀಜಿ ಅವರ 5ನೇ ಪುಣ್ಯ ಸ್ಮರಣೆಯ ಅಂಗವಾಗಿ ಸ್ಮೃತಿವನದ ಉದ್ಘಾಟನೆ ಬಳಿಕ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಎಲ್ಲ ಜಾತಿ, ಧರ್ಮ, ಜನಾಂಗದ ವಿದ್ಯಾರ್ಥಿಗಳಿಗೂ ಆಶ್ರಯ, ಅಕ್ಷರ ಮತ್ತು ಅನ್ನ ನೀಡಿದ ಮಠ ಸಿದ್ದಗಂಗಾ ಮಠವಾಗಿದ್ದು, ಒಂದು ಸರ್ಕಾರ ಮಾಡಬೇಕಾದ ಕಾರ್ಯವನ್ನು ಶ್ರೀಗಳು ಮಾಡಿದ್ದಾರೆ ಎಂದರು.


ತಮ್ಮ ನಡೆ-ನುಡಿಯಿಂದ ಜಗತ್ತಿಗೇ ಮಾದರಿಯಾಗಿರುವ ಡಾ. ಶಿವಕುಮಾರ ಸ್ವಾಮೀಜಿ ಅವರು ಸಿದ್ಧಪುರುಷರಾಗಿದ್ದು, ಇವರ ಸಂಸ್ಮರಣೆಗಾಗಿ ಊರ್ಡಿಗೆರೆ ಮತ್ತು ಬಸವಪಟ್ಟಣದ ಸುಮಾರು 15 ಎಕರೆ ಪ್ರದೇಶದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಈ ಸೃತಿವನ ನಿರ್ಮಿಸಲಾಗಿದ್ದು, ಇದರಲ್ಲಿ ಶ್ರೀಗಳ ಜೀವನಸಾಧನೆ ಕುರಿತ ಪ್ರತಿಕೃತಿ, ಶಿವವನ, ಹಸಿರು ವಲಯ ರಚನೆ, ಪಾದಚಾರಿ ಪಥ ಮತ್ತು ಬಾಲವನ ನಿರ್ಮಿಸಲಾಗಿದ್ದು, ಇದು ಸದಾ ಶ್ರೀಗಳ ಸ್ಮರಣೆ ಮಾಡುವಂತೆ ಮಾಡುತ್ತದೆ ಎಂದರು. ಅರಣ್ಯ ಸಚಿವನಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿರುವುದು ತಮ್ಮ ಸೌಭಾಗ್ಯ ಎಂದರು.


ಇಂದು ಪರಿಸರ ಮಾಲಿನ್ಯ ಅತಿಯಾಗುತ್ತಿದೆ. ಅರಣ್ಯ ಒತ್ತುವರಿಯಾಗುತ್ತಿದೆ. ಹಸಿರುವ ವ್ಯಾಪ್ತಿ ಕ್ಷೀಣಿಸುತ್ತಿದೆ. ಇದರಿಂದಾಗಿ ಹವಾಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನದಂತಹ ಸಮಸ್ಯೆಗಳು ಜಗತ್ತನ್ನು ಕಾಡುತ್ತಿದ್ದು, ನಾವು ಪ್ರಕೃತಿ ಪರಿಸರ ಉಳಿಸಲು ಕಾಡನ್ನು ಸಂರಕ್ಷಿಸಬೇಕು ಎಂದು ಹೇಳಿದರು..

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button