ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಜಿಲ್ಲೆಯಲ್ಲಿ ಕೋರೊನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಶನಿವಾರ (ಜೂನ್ 12) ಬೆಳಿಗ್ಗೆ 06.00 ಗಂಟೆಯಿಂದ ಸೋಮವಾರ (ಜೂನ್ 14) ಬೆಳಿಗ್ಗೆ 06.00 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಾದ್ಯಂತ ಕೋವಿಡ್-19 ಹರಡುವುದನ್ನು ತಡೆಗಟ್ಟಲು ಜೂನ್ 14 ರ ಬೆಳಿಗ್ಗೆ 06.00 ಗಂಟೆಯವರೆಗೆ ಸಾರ್ವಜನಿಕರು ಅನಾವಶ್ಯಕವಾಗಿ ಓಡಾಡುವುದನ್ನು ಸಂಪೂರ್ಣವಾಗಿ ದಂಡ ಪ್ರಕ್ರಿಯಾ ಸಂಹಿತೆ 1973 ಕಲಂ 144 ರಡಿ ನಿಷೇಧಿಸಿ ಆದೇಶಿಸಲಾಗಿತ್ತು.
ಆದರೆ, ಬೆಳಗಾವಿ ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ವಾರಾಂತ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅವಕಾಶ:
ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಸಂಚರಿಸಲು, ಅಗತ್ಯ ವಸ್ತುಗಳಾದ ಹಾಲು, ಔಷಧಿ ಪೂರೈಕೆ ಮತ್ತು ಖರೀದಿಗೆ ಹಾಗೂ ಆನ್‌ಲೈನ್ ಫುಡ್ ಸರ್ವಿಸಿಸ್‌ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಅಲ್ಲದೇ, ಸರ್ಕಾರಿ ಅಧಿಕಾರಿಗಳಿಗೆ ಸರ್ಕಾರಿ ಸಭೆಗೆ ಹಾಜರಾಗಲು ಮಾತ್ರ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.
ರೈತ ಸಂಬಂಧಿ ಚಟುವಟಿಕೆಗಳಿಗೆ ಅವಕಾಶ:
ಲಾಕ್ ಡೌನ್ ಷೋಷಿಸಿರುವ ದಿನಗಳಂದು ಸಾರ್ವಜನಿಕ ವಿತರಣಾ ಪದ್ದತಿಯಡಿಯಲ್ಲಿ ಬರುವ ನ್ಯಾಯಬೆಲೆ ಅಂಗಡಿಗಳು ಬೆಳಿಗ್ಗೆ 06.00 ಗಂಟೆಯಿಂದ ಬೆಳಿಗ್ಗೆ 10.00 ಗಂಟೆಯವರೆಗೆ ಮಾತ್ರ ಕಾರ್ಯ ನಿರ್ವಹಿಸಬೇಕು.
ಅದೇ ರೀತಿ, ರೈತ ಸಂಪರ್ಕ ಕೇಂದ್ರ ಹಾಗೂ ಹೆಚ್ಚುವರಿ ಮಳಿಗೆಗಳು ಬೆಳಿಗ್ಗೆ 06.00 ಗಂಟೆಯಿಂದ ಮಧ್ಯಾಹ್ನ 12.00 ಗಂಟೆಯವರೆಗೆ ಅಂಗಡಿಗಳನ್ನು ತೆರೆದು ಬೀಜ ಹಾಗೂ ರಸಗೊಬ್ಬರಗಳನ್ನು ವಿತರಿಸಲು ಅವಕಾಶವಿರುತ್ತದೆ. ಪ್ರತಿ ಗ್ರಾಮದಿಂದ 05 ಜನರಿಗೆ ಮಾತ್ರ ರೈತ ಸಂಪರ್ಕ ಕೇಂದ್ರ ಹಾಗೂ ಹೆಚ್ಚುವರಿ ಮಳಿಗೆಗಳಿಗೆ ಹೋಗಲು ಅವಕಾಶವಿರುತ್ತದೆ.
ಬೆಳಗಾವಿ ನಗರದಲ್ಲಿ ಬೀಜ, ರಸಗೊಬ್ಬರ ಹಾಗೂ ಇತರೆ ಪರಿಕರಗಳ ಮಾರಾಟ ಮಳಿಗೆಗಳು ಲಾಕ್ ಡೌನ್ ದಿನಗಳಂದು ಬೆಳಿಗ್ಗೆ 06.00 ಗಂಟೆಯಿಂದ ಮಧ್ಯಾಹ್ನ 12.00 ಗಂಟೆಯವರೆಗೆ ತೆರೆಯಲು ಅವಕಾಶವಿದ್ದು, ಅಲ್ಲಿ ತೆರಳುವ ರೈತರು ಗ್ರಾಮ ಪಂಚಾಯತಿ P.D.O. ಹಾಗೂ ಗ್ರಾಮಲೆಕ್ಕಿಗರ ಅನುಮತಿ ಪಡೆಯಬೇಕು.
ಅಲ್ಲದೇ, ಆದೇಶದಲ್ಲಿ ಸೂಚಿಸಿರುವ ದಿನಗಳಂದು ಈಗಾಗಲೇ ಪೂರ್ವಾನುಮತಿ ಪಡೆದುಕೊಂಡು
ನಿಗದಿಪಡಿಸಿರುವಂತಹ ಮದುವೆ ಸಮಾರಂಭಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮ :
ಸಂಪೂರ್ಣ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆ 188 ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾಗಿರುವ ಎಂ.ಜಿ.ಹಿರೇಮಠ ಎಚ್ಚರಿಕೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ