ಬೆಳೆ ವಿಮಾ ಪಡೆಯಲು ರೈತರಲ್ಲಿ ಡಿಸಿ ಎಂ.ಜಿ ಹಿರೇಮಠ ಮನವಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ೨೦೨೧-೨೨ ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಜಿ ಹಿರೇಮಠ ಅವರು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯ ಉದ್ದೇಶ:
೧) ಸ್ಥಳ ನಿರ್ಧಿಷ್ಟ ಪ್ರಕೃತಿ ವಿಕೋಪ, ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆ ಹಾಗೂ ಕೀಟ/ ರೋಗ ಭಾದೆಗಳಿಂದ ಅಧಿಸೂಚಿತ ಬೆಳೆ ವಿಫಲವಾದ ಸಂದರ್ಭದಲ್ಲಿ ವಿಮಾ ರಕ್ಷಣೆ ಒದಗಿಸುವುದು.
೨ ) ಮಳೆ ಅಭಾವ ಅಥವಾ ಇತರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಧಿಸೂಚಿತ ಘಟಕದಲ್ಲಿ ಶೇಕಡಾ ೭೫ ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಟ ಶೇಕಡಾ ೨೫ ರಷ್ಟು ಪರಿಹಾರವನ್ನು ವಿಮಾ ಸಂಸ್ಥೆಯು ವಿಮೆ ಮಾಡಿಸಿದ ರೈತರಿಗೆ ನೀಡಲಾಗುವದು.
೩ ) ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಕಟಾವು ಮಾಡಿದ ಎರಡು ವಾರಗಳೊಳಗೆ (೧೪ ದಿನ) ಚಂಡಮಾರುತ, ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ವೈಯಕ್ತಿಕವಾಗಿ ವಿಮಾ ಸಂಸ್ಥೆಯು ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರವನ್ನು ನೀಡಲಾಗುತ್ತದೆ.
ರೈತರು ಸದರಿ ಬೆಳೆ ವಿಮೆ ಯೋಜನೆಯಲ್ಲಿ ಪಾಲ್ಗೊಂಡು ಅಧಿಸೂಚಿತ ಬೆಳೆಗಳಿಗೆ ವಿಮಾ ರಕ್ಷಣೆಯನ್ನು ಒದಗಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮಾರ್ಗಸೂಚಿಯನ್ವಯ ಪ್ರಸಕ್ತ ಸಾಲಿನಿಂದ ಈ ಯೋಜನೆಯು ಐಚ್ಛಿಕವಾಗಿದ್ದು, ಬೆಳೆ ಸಾಲ ಪಡೆದ ರೈತರಿಗೆ ಸದರಿ ಯೋಜನೆಯಿಂದ ಹೊರಗುಳಿಯುವ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಬೆಳೆ ಸಾಲ ಮಂಜೂರಾದ ಎಲ್ಲಾ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿಯಲ್ಲಿ ಒಳಪಡಿಸಬಹುದಾಗಿ, ಆದರೆ ಬೆಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಚೆ ಪಡದೇ ಇದ್ದಲ್ಲಿ, ಈ ಕುರಿತು ಸಂಬಂಧಿಸಿದ ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಕ್ಕಿಂತ ೭ ದಿನಗಳು ಮುಂಚಿತವಾಗಿ ಲಿಖಿತವಾಗಿ ನಿಗದಿತ ನಮೂನೆಯಲ್ಲಿ ಮುಚ್ಚಳಿಕೆ ಪತ್ರವನ್ನು ನೀಡಿದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು.
ಬೆಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಪಾಲಗೊಳ್ಳಲು ಕಡ್ಡಾಯವಾಗಿ ನಿಗದಿತ ನಮೂನೆಯಲ್ಲಿ ಮುಚ್ಚಳಿಕೆ ಪತ್ರವನ್ನು ಬ್ಯಾಂಕಿನ ವ್ಯವಸ್ಥಾಪಕರಿಗೆ ನೀಡಬೇಕು.
ರೈತರು ತಮ್ಮ ವ್ಯಾಪ್ತಿಯಲ್ಲಿನ ಬ್ಯಾಂಕ್, ಸಹಕಾರಿ ಸಂಘ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ವಿಮೆ ಕಂತನ್ನು ಪಾವತಿಸಿ ಬೆಳೆ ವಿಮೆ ನೋಂದಣಿ ಮಾಡಬಹುದಾಗಿದೆ.
ಸಂಬಂಧಿಸಿದ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಮಾನ್ಯ ಸೇವಾ ಕೇಂದ್ರಗಳ ಹೆಚ್ಚಿನ ಮಾಹಿತಿಗಾಗಿ ಸಾಮಾನ್ಯ ಸೇವಾ ಕೇಂದ್ರದ ಜಿಲ್ಲಾ ಸಂಯೋಜಕರು ಇವರನ್ನು ದೂರವಾಣಿ ಸಂಖ್ಯೆ ೯೪೪೯೯೭೬೨೧೮ ಹಾಗೂ ೯೦೦೮೫೯೩೦೬೬ ಗೆ ಸಂಪರ್ಕಿಸಬಹುದಾಗಿದೆ.
ಪ್ರಸಕ್ತ ಹಂಗಾಮಿನಲ್ಲಿ ರೈತರು ಈ ಬೆಳೆ ವಿಮೆ ಯೋಜನೆಯಲ್ಲಿ ಪಾಲ್ಗೊಳ್ಳಲು ಹೆಸರು (ಮಳೆ ಆಶ್ರಿತ) ಬೆಳೆಗೆ ಜುಲೈ ೧೫ ಹಾಗೂ ಉಳಿದ ಎಲ್ಲಾ ಅಧಿಸೂಚಿತ ಬೆಳೆಗಳಿಗೆ ಜುಲೈ ೩೧ ಕೊನೆಯ ದಿನಾಂಕವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ರೈತ ಬಾಂಧವರು ಸ್ಥಳೀಯ ಬ್ಯಾಂಕ್‌ಗಳು, ಸಹಕಾರ ಸಂಘಗಳು, ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಯ ಅಧಿಕಾರಿಗಳನ್ನು ಹಾಗೂ ವಿಮಾ ಸಂಸ್ಥೆಯ ಪ್ರತಿನಿಧಿಗಳನ್ನು ೯೯೬೪೦೬೪೪೫೧, ೬೩೬೩೯೨೧೨೬೮, ೮೧೦೫೪೧೨೪೧೫ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಜಿ. ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ
೨೦೨೧-೨೨ ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಮೂಲಕ ದಾಖಲಿಸುವ ವಿನೂತನ ಯೋಜನೆಯನ್ನು ರಾಜ್ಯ ಸರಕಾರ ವತಿಯಿಂದ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರು ಜಮೀನುಗಳಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಬೆಳೆ ಸಮೀಕ್ಷೆ ಮೊಬೈಲ್ ಆಪ್‌ನಲ್ಲಿ ಅಪ್‌ಲೋಡ್ ಮಾಡಬಹುದಾಗಿದೆ.
ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಹಾಗೂ ಸಾಂಖಿಕ ಇಲಾಖೆಯ ಜಂಟಿ ಸಹಯೋಗದಲ್ಲಿ ಈ ಕಾರ್ಯ ನಡೆಯಲಿದ್ದು, ಸಂಗ್ರಹವಾದ ಬೆಳೆಗಳ ಮಾಹಿತಿಯನ್ನು ತಾಲುಕು ಆಡಳಿತ ಪರಿಶೀಲಿಸಿದೆ.
ರೈತರು ಸ್ಮಾರ್ಟ್ ಫೋನ್ ಉಪಯೋಗಿಸಿ ಬೆಳೆ ಸಮೀಕ್ಷೆ ಮೊಬೈಲ್ ಆಪ್‌ಅನ್ನು ಗೂಗಲ್‌ನ ಪ್ಲೇ ಸ್ಟೋರ್ ದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಅಲ್ಲದೇ, ರೈತರ ಪರವಾಗಿ ಅವರ ಕುಟುಂಬದ ಸದಸ್ಯರು ಸಂಬಂಧಿಕರು ಅಥವಾ ಮೊಬೈಲ್ ಮಾಹಿತಿ ಹೊಂದಿರುವ ಕಂದಾಯ/ ಕೃಷಿ ಇಲಾಖೆ ವತಿಯಿಂದ ನಿಯೋಜನೆಗೊಂಡ ತಮ್ಮದೇ ಗ್ರಾಮದ ಮಾಹಿತಿ ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ಇರುವ ಯುವಕರ (ಖಾಸಗಿ ನಿವಾಸಿ/ ಪಿ.ಆರ್) ಸಹಾಯದೊಂದಿಗೆ ರೈತರು ತಮ್ಮ ಮೊಬೈಲ್ ಸಂಖ್ಯೆಗೆ ಒ.ಟಿ.ಪಿ ಪಡೆಯುವ ಮೂಲಕ ತಮ್ಮ ಜಮೀನುಗಳಲ್ಲಿ (ಹಿಸ್ಸಾವಾರು) ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಮೂಲಕ ಅಪ್‌ಲೋಡ್ ಮಾಡಬಹುದಾಗಿದೆ.
ರೈತರು ನಿಗದಿತ ಸಮಯದೊಳಗೆ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಅಪ್‌ಲೋಡ್ ಮಾಡದೇ ಇದ್ದ ಪಕ್ಷದಲ್ಲಿ ಪ್ರತಿ ಗ್ರಾಮಕ್ಕೆ ನಿಯೋಜನೆಗೊಂಡ ಬೆಳೆ ಸಮೀಕ್ಷಕರು (ಖಾಸಗಿ ನಿವಾಸಿ/ ಪಿ.ಆರ್) ತಮ್ಮ ಹೊಲಗಳಿಗೆ ಭೇಟಿ ನೀಡಿ ಮೊಬೈಲ್ ಆಪ್ ಬಳಸಿ ಬೆಳೆ ಮಾಹಿತಿ ಸಂಗ್ರಹಿಸಿ ಅಪ್‌ಲೋಡ್ ಮಾಡುತ್ತಾರೆ.
ಬೆಳೆ ಸಮೀಕ್ಷೆ ಯೋಜನೆಯಡಿ ಸಂಗ್ರಹವಾಗುವ ಈ ಕೆಳಕಂಡ ಮಾಹಿತಿಯನ್ನು ಒಳಗೊಂಡಿದೆ.
೧. ಸಾಂಖ್ಯಿಕ ಇಲಾಖೆಯ ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆ ವಿಸ್ತೀರ್ಣ ಏಣಿಕಾ ಕಾರ್ಯದಲ್ಲಿ ಬಳಸಲು ಅನುಮತಿಸಲಾಗಿದೆ.
೨. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ಓಆಖಈ/Sಆಖಈ ಅಡಿಯಲ್ಲಿ ಸಹಾಯಧನ ನೀಡಲು ವರದಿ ತಯಾರಿಸಲು.
೩. ಬೆಳೆ ವಿಮೆ ಯೋಜನೆಯಡಿ ರೈತರ ತಾಕುವಾರು ಬೆಳೆ ಪರಿಶೀಲಿಸಲು
೪. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು
೫. ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನಕ್ಕಾಗಿ.
೬. ಆರ್.ಟಿ.ಸಿ.ಯಲ್ಲಿ ಬೆಳೆ ವಿವರ ದಾಖಲಾತಿಗಾಗಿ
ಜಿಲ್ಲ್ಲೆಯ ಎಲ್ಲಾ ರೈತರು ತಮ್ಮ ಜಮೀನುಗಳಲ್ಲಿ (ಹಿಸ್ಸಾವಾರು) ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಬೆಳೆ ಸಮೀಕ್ಷೆ ಮೊಬೈಲ್ ಆಪ್‌ನಲ್ಲಿ ನಿಗದಿತ ಸಮಯದೊಳಗೆ ಅಪ್ಲೋಡ್ ಮಾಡಿ ಕಡ್ಡಾಯವಾಗಿ ಈ ಒಂದು ವಿನೂತನ ಬೆಳೆ ಸಮೀಕ್ಷೆ ಯೋಜನೆಯಲ್ಲಿ ಭಾಗವಹಿಸಬೇಕೆಂದು ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ಗುರುವಾರ ಸಾರ್ವಜನಿಕರಿಗೆ ಸಚಿವರು ಲಭ್ಯ: ಡಿಸಿಎಂ ಸವದಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ