Kannada NewsKarnataka NewsNationalPolitics

*ಸೇವಾದಳ ಕಾರ್ಯಕರ್ತನಿಗೆ ಸಹಾಯಧನ, ಕಾಲು ಕಳೆದುಕೊಂಡ ಕಾರ್ಯಕರ್ತನ ಮಗನಿಗೆ ಉದ್ಯೋಗದ ಭರವಸೆ ನೀಡಿದ ಡಿಸಿಎಂ ಡಿ. ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಈಗ ನನ್ನ ವೈಯಕ್ತಿಕ ಹಣ 25 ಸಾವಿರ ನೀಡುತ್ತೇನೆ. ಯಾವುದಾದರು ಇಲಾಖೆಯಲ್ಲಿ ಉದ್ಯೋಗಕ್ಕೆ ಶಿಫಾರಸ್ಸು ಮಾಡುತ್ತೇನೆ” ಎಂದು ಡಿಸಿಎಂ ಭರವಸೆ ನೀಡಿದಾಗ, ಮಿಕ್ಕ ಕಾರ್ಯಕರ್ತರು ಎದ್ದು ನಿಂತು ಚಪ್ಪಾಳೆ ಹೊಡೆದು ಹರ್ಷ ವ್ಯಕ್ತಪಡಿಸಿದರು.

ಬೆಂಗಳೂರು ಭಾರತ್ ಜೋಡೋ ಭವನದಲ್ಲಿ ನಡೆದ “ಕಾರ್ಯಕರ್ತರೊಂದಿಗೆ ನಿಮ್ಮ ಡಿಸಿಎಂ” ಕಾರ್ಯಕ್ರಮದಲ್ಲಿ ಎಚ್.ಡಿ.ಕೋಟೆಯ ಸೇವಾದಳ ಕಾರ್ಯಕರ್ತನಾದ ಮಣಿಕಂಠ ಅವರ ಮನವಿಗೆ ಡಿ. ಕೆ. ಶಿವಕುಮಾರ್ ಅವರು ಸ್ಪಂದಿಸಿದ್ದು ಹೀಗೆ. 

ಲೋಕಸಭಾ ಚುನಾವಣೆಗೆ ಪ್ರಚಾರಕ್ಕೆ ತೆರಳುವ ವೇಳೆ ಅಪಘಾತವಾಗಿ ಕಾಲಿನ ಮೊಣಕಾಲು ಚಿಪ್ಪಿಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ಮಣಿಕಂಠ ಅವರು ತಮ್ಮ ನೋವು ಹೇಳಿಕೊಂಡರು.

ಪಶುಸಂಗೋಪನಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಪತ್ನಿ ಮೃತ ಪಟ್ಟಿದ್ದು, ನನ್ನ ಮಗನಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಕೊಡಿಸಿ. ನಾನು ಸಹ ಕೊರೋನ ಸಮಯದಲ್ಲಿ ಕಾಲು ಕಳೆದುಕೊಂಡೆ. ಆರ್ಥಿಕವಾಗಿ ಬಹಳ ತೊಂದರೆಯಲ್ಲಿ ಇದ್ದೇನೆ ಎಂದು ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್ ಕಾರ್ಯಕರ್ತ ಕಿರಣ್ ಅವಲತ್ತುಕೊಂಡಾಗ “ನಿಮಗೆ ಕೂಡಲೇ ಕೆಲಸ ಸಿಗುವಂತೆ ಮಾಡುತ್ತೇನೆ. ಸಚಿವರಾದ ವೆಂಕಟೇಶ್ ಅವರನ್ನು ಭೇಟಿಯಾಗಿ” ಎಂದು ತಿಳಿಸಿದರು.

ನನ್ನ ಜಮೀನನ್ನು ಸ್ಥಳೀಯ ಸಂಸ್ಥೆಯವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು, ಈ ಅನ್ಯಾಯ ಸರಿಪಡಿಸಿ ಎಂದು ಬಂಟ್ವಾಳದ ಗಿಲ್ಬರ್ಟ್ ಅವರ ಮನವಿಗೆ ಸ್ಪಂದಿಸಿದ ಶಿವಕುಮಾರ್ ಅವರು, “ಇನ್ನೊಂದು ವಾರದಲ್ಲಿ ನಿಮ್ಮ ಸಮಸ್ಯೆ ನಿವಾರಣೆಯಾಗಲಿದೆ” ಎಂದು ಭರವಸೆ ನೀಡಿದರು.

“ಶೀಘ್ರದಲ್ಲೇ ಅಧಿಕಾರಿಗಳನ್ನು ಕಳುಹಿಸಿ ಸಮಸ್ಯೆ ನಿವಾರಣೆ ಮಾಡಲಾಗುವುದು. ಧೈರ್ಯದಿಂದಿರಿ, ಚಿಂತೆ ಮಾಡಬೇಡಿ” ಎಂದು ತಮ್ಮ ಬಡಾವಣೆಯಲ್ಲಿನ ಮೂಲಸೌಕರ್ಯಗಳ ಸಮಸ್ಯೆ ಬಗ್ಗೆ ನಿವೃತ್ತ ಯೋಧ ರಾಮಮೂರ್ತಿ ನಗರದ ಆರ್ ಜಿ ಜಿ ನಾಯ್ಡು ಅವರು ಗಮನ ಸೆಳೆದಾಗ ಹೀಗೆ ವಾಗ್ದಾನ ನೀಡಿದರು.

ಯಶವಂತಪುರದ ಅಬ್ರಹಾಂ ಶಂಕರ್ ಅವರು ಮಗಳ ಶಾಲಾ ಶುಲ್ಕ ಮತ್ತು ಮನೆ ನೀಡಿ ಎಂದು ಮನವಿ ಸಲ್ಲಿಸಿದಾಗ “ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಮನೆ ದೊರೆಯುವಂತೆ ಮಾಡುತ್ತೇನೆ. ಯಾವುದೇ ಚಿಂತೆ ಬೇಡ” ಎಂದು ಧೈರ್ಯ ನೀಡಿದರು. 

ನಾನು 39 ವರ್ಷಗಳಿಂದ ಪಕ್ಷಕ್ಕೆ ಕೆಲಸ ಮಾಡುತ್ತಿದ್ದೇನೆ. ಎಂಎಸ್ ಐ ಎಲ್ ಗೆ ನಾಮನಿರ್ದೇಶನ ಮಾಡಿ ಎಂದು ತೇರದಾಳದ ಸಂಗಮೇಶ್ ಅವರ ಮನವಿಗೆ “ಗೃಹಸಚಿವರಾದ ಪರಮೇಶ್ವರ್ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದು ಅವರಿಗೆ ತಿಳಿಸುತ್ತೇನೆ” ಎಂದರು.

ಸಾರ್, ನಿಮ್ಮ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ ನನಗೆ ಮನೆ ಕೊಡಿ ಎಂದು ಹಾರೋಹಳ್ಳಿಯ ಮಂಜುಳಾ ಅವರು ಮನವಿ ಮಾಡಿದಾಗ “ನಿನಗೆ ಇನ್ನೂ ಮನೆ ಸಿಕ್ಕಿಲ್ಲವೇ? ಈ ಬಾರಿ ಸಿಗುತ್ತದೆ” ಎಂದು ಭರವಸೆ ನೀಡಿದರು. ಆಗ ಮಂಜುಳಾ ಅವರು ಭಾವುಕರಾದರು.

ಕುಡುಚಿಯ ಬಾಬಾ ಸಾಹೇಬ್ ಜಿನರಾಲ್ಕರ್, ಪಾವಗಡದ ರಾಮಮೂರ್ತಿ, ಬಬಲೇಶ್ವರದ ಫಯಾಜ್, ಬನಶಂಕರಿಯ ಪ್ರಸನ್ನ ಕುಮಾರ್ ಸೇರಿದಂತೆ ಅನೇಕರು ಪಕ್ಷದ ವಿವಿಧ ವಿಭಾಗಗಳಲ್ಲಿ ಪದಾಧಿಕಾರಿಗಳನ್ನಾಗಿ ನೇಮಕಾತಿ ಮಾಡಿಕೊಳ್ಳುವಂತೆ ಅಹವಾಲು ಸಲ್ಲಿಸಿದರು.

ನಿಗಮ ಮಂಡಳಿಗೆ ನೇಮಕ ಹಾಗೂ ಪಕ್ಷದಲ್ಲಿ ಆಯಕಟ್ಟಿನ ಸ್ಥಾನಮಾನ, ಮನೆ, ನಿವೇಶನ, ಜಮೀನು ಸಮಸ್ಯೆ, ಹಾಸ್ಟೆಲ್ ಸಮಸ್ಯೆ ಸೇರಿದಂತೆ ನೂರಾರು ಸಮಸ್ಯೆಗಳನ್ನು ಹೊತ್ತು ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದ ಕಾರ್ಯಕರ್ತರು ಡಿಸಿಎಂ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button