*2ಎ ಮೀಸಲಾತಿ ಹೋರಾಟ: ಪಂಚಮಸಾಲಿ ಲಿಂಗಾಯತ ಶಾಸಕರ ವಿರುದ್ಧ ಜಯಮೃತ್ಯುಂಜಯ ಶ್ರೀ ಆಕ್ರೋಶ*
ಪ್ರಗತಿವಾಹಿನಿ ಸುದ್ದಿ: ಪಂಚಮಸಾಲಿ ಲಿಂಗಾಯತ ಮೀಸಲಾತಿ ಹೋರಾಟಕ್ಕಾಗಿ ಸೆಪ್ಟೆಂಬರ್ 15 ರಂದು ಬೆಳಗಾವಿಯಲ್ಲಿ ಪಂಚಮಸಾಲಿ ಲಿಂಗಾಯತ ವಕೀಲರ ಮಹಾ ಪರಿಷತ್ ನಡೆಸಿ, ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಹೋರಾಟ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಜಯಮೃತ್ಯುಂಜಯ ಶ್ರೀಗಳು ತಿಳಿಸಿದ್ದಾರೆ.
ಖಾಸಗಿ ಹೋಟೆಲ್ ನಲ್ಲಿ ಬೆಳಗಾವಿ ಜಿಲ್ಲಾ ಮಟ್ಟದ ವಕೀಲರ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲಿಂಗಾಯತ ಒಳ ಪಂಗಡಗಳಿಗೆ ಒಬಿಸಿ ಮೀಸಲಾತಿಗಾಗಿ ಕಳೆದ ಮೂರುವರೆ ವರ್ಷದಿಂದ ಚಳುವಳಿ ಮಾಡುತ್ತಿದ್ದೇವೆ. ಆ ಚಳುವಳಿಗೆ ಸಿಗಬೇಕಾಗಿದ್ದ ಯಶಸ್ಸು ಇನ್ನೂ ಸಿಕ್ಕಿಲ್ಲ. ಬೆಂಗಳೂರಿನಲ್ಲಿ ನಡೆದ ಅಧಿವೇಶನದಲ್ಲಿ ಮಾತಾಡಬೇಕೆಂದು ನಮ್ಮ ಸಮುದಾಯದ ಶಾಸಕರ ಮನೆ ಬಾಗಿಲಿಗೆ ಹೋಗಿ ಮನವಿ ಮಾಡಿದ್ದೇವೆ. ಆದರೆ ಅಧಿವೇಶನದಲ್ಲಿ ಯಾರೂ ಧ್ವನಿ ಎತ್ತಲಿಲ್ಲ. ಆ ನೋವು ಇಡೀ ನಮ್ಮ ಸಮಾಜಕ್ಕೆ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಹೋರಾಟವನ್ನು ಸರ್ಕಾರ ನಿರ್ಲಕ್ಷ್ಯ ಮಾಡುವ ಕೆಲಸ ಮಾಡುತ್ತಿದೆ. ಹಾಗಾಗಿ ಲಿಂಗಾಯತ ವಕೀಲರ ಸಮಾವೇಶ ಮಾಡಬೇಕು ಎಂದು ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ವಕೀಲರ ಸಭೆ ಕರೆಯಲಾಗಿದೆ. ಸಪ್ಟೆಂಬರ್ 15 ರಂದು ಉತ್ತರ ಕರ್ನಾಟಕದ ಲಿಂಗಾಯತ ಪಂಚಮಸಾಲಿ ವಕೀಲರ ಮಹಾ ಪರಿಷತ್ ಬೆಳಗಾವಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಆ ಸಭೆಯಲ್ಲಿ ರಾಜ್ಯಮಟ್ಟದ ಸಮಾವೇಶ ಮಾಡುವ ಬಗ್ಗೆ ಚರ್ಚೆ ಮಾಡಲಾಗುದು ಎಂದು ಜಮಮೃತ್ಯುಂಜಯ ಶ್ರೀಗಳು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ