3ನೇ ರೈಲ್ವೆ ಗೇಟ್ ಮೇಲ್ಸೆತುವೆ ಕಾಮಗಾರಿಗೆ ಸಂಸದ ಸುರೇಶ ಅಂಗಡಿ ಚಾಲನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ರಾಜಧಾನಿ ಬೆಂಗಳೂರಿಗೆ ಪರ್ಯಾಯವಾಗಿ ಬೆಳಗಾವಿ ನಗರ ಬೆಳೆಸಲಾಗುವುದು ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.
3ನೇ ರೈಲ್ವೆ ಗೇಟ್ ರಸ್ತೆ ಮೇಲ್ಸೇತುವೆ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿ, ರಾಜಕೀಯ ಮತ್ತು ಆಡಳಿತ ಯಾವುದೇ ಪಕ್ಷದವರು ಮಾಡಿದರೂ ಸಹ ಎಲ್ಲರ ಮುಖ್ಯ ಅಜೆಂಡಾ ಬೆಳಗಾವಿ ಅಭಿವೃದ್ಧಿ ಆಗಬೇಕಿದೆ. ಈ ದಿಸೆಯಲ್ಲಿ ರಾಜಕೀಯ ಸಮನ್ವತೆ ಕಾಯ್ದುಕೊಳ್ಳಲಾಗುವುದು ಎಂದರು.
ಬಹುದಿನಗಳ ಬೇಡಿಕೆಯ ನಾಲ್ಕು ರಸ್ತೆ ಮೇಲ್ಸೇತುವೆ ಕಾಮಗಾರಿ ಪೈಕಿ ಮೂರು ಮುಗಿದಿರುವುದು ಸಂತಸಕರ. ಮೊದಲ ಹಾಗೂ ಎರಡನೇ ಗೇಟ್ ಮೇಲ್ಸೇತುವೆ ಕಾಮಗಾರಿಯನ್ನು ಸಹ ಕೇಂದ್ರ- ರಾಜ್ಯ ಸಹಯೋಗದಲ್ಲಿ ಮಾಡಲಾಗುತ್ತದೆ ಎಂದರು.
ಸಂಸದ ಸುರೇಶ ಅಂಗಡಿ ಮಾತನಾಡಿ, ರಸ್ತೆ ಮತ್ತು ಸೇತುವೆಗಳ ನಿರ್ಮಾಣವೇ ದೇಶದ ಪ್ರಗತಿ ಹೊಂದಲು ಬುನಾದಿ ಎಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಂಬಿದ್ದರು. ಅದರಂತೆ ಬೆಳಗಾವಿ ನಾಗರಿಕರ ಅನುಕೂಲಕ್ಕೆ ಸೇತುವೆಗಳನ್ನು ಕಟ್ಟಿಸಲಾಗಿದೆ. ಮುಂದಿನ ದಿನಗಳಲ್ಲಿ 10ಸಾವಿರ ಸ್ಥಳೀಯ ಉದ್ಯೋಗ ಸೃಷ್ಟಿಸಲು ನಾನು ಮತ್ತು ಸಚಿವ ಸತೀಶ ಜಾರಕಿಹೊಳಿ ನಿರ್ಧಾರ ತಳೆದಿದ್ದೇವೆ ಎಂದು ಹೇಳಿದರು.
ಮಹಾತ್ಮಾ ಗಾಂಧೀಜಿ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರ ಸ್ಮಾರಕವಾಗಿ ಬೆಳಗಾವಿ ರೈಲು ನಿಲ್ದಾಣವನ್ನು ಸಾಬರಮತಿ ಆಶ್ರಮದಂತೆ ಅಭಿವೃದ್ಧಿ ಮಾಡಲಾಗುವುದು. ಘಟಪ್ರಭಾ ರೈಲ್ವೇ ನಿಲ್ದಾಣವನ್ನು ಅತ್ಯಾಧುನಿಕವಾಗಿ ಮಾರ್ಪಡಿಸಲಾಗುವುದು ಎಂದು ಸಂಸದ ಸುರೇಶ ಅಂಗಡಿ ಘೋಷಿಸಿದರು.
ರಾಣಿ ಚನ್ನಮ್ಮ ಎಕ್ಸಪ್ರೆಸ್ ರೈಲಿನ ಪ್ರಯಾಣಿಕರ ಒತ್ತಡ ತಗ್ಗಿಸಲು ಈಗಿರುವ 20ಬೋಗಿಗಳ ಬದಲಾಗಿ ಇನ್ನೂ ಹೆಚ್ಚುವರಿ 4ಬೋಗಿ ಸೇರಿಸಿ 24ಬೋಗಿ ಮಾಡುವಂತೆ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರಸಿಂಗ್ ಅವರಿಗೆ ಸಂಸದ ಸುರೇಶ ಅಂಗಡಿ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಅಭಯ ಪಾಟೀಲ ಮಾತನಾಡಿ, ಪರಿಸರ ಪೂರಕ ಪ್ರವಾಸೋದ್ಯಮ ಬೆಳೆಸಬೇಕಿದೆ. ಬೆಳಗಾವಿ ವಿಭಾಗದ ಅರಣ್ಯದಲ್ಲಿ ಜಂಗಲ್ ಸಫಾರಿ ಪರಿಚಯಿಸಬೇಕು ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರನ್ನು ಒತ್ತಾಯಿಸಿದರು.
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಎಲ್ಲ ರಸ್ತೆಗಳನ್ನು ಅಂತಾರಾಷ್ಟ್ರೀಯ ಗುಣಮಟ್ಟದ ಕಾಂಕ್ರೀಟ್ ರಸ್ತೆಗಳನ್ನಾಗಿ ಮಾಡಲಾಗುವುದು, ಕಾಮಗಾರಿ ಮುಂದಿನ ತಿಂಗಳಲ್ಲಿ ಪ್ರಾರಂಭವಾಗುತ್ತದೆ ಎಂದರು. ಕಾರ್ಗೋ ಮತ್ತು ಐಟಿ ಪಾರ್ಕ್ ಸ್ಥಾಪನೆಗೆ ಸಹ ಪ್ರಯತ್ನಿಸಲಾಗುತ್ತದೆ ಎಂದು ಅಭಯ ಪಾಟೀಲ ಘೋಷಿಸಿದರು.
ಶಾಸಕ ಅನೀಲ ಬೆನಕೆ, ಮೇಯರ್ ಬಸಪ್ಪ ಚಿಕ್ಕಲದಿನ್ನಿ, ಉಪಮೇಯರ್ ಮಧುಶ್ರೀ ಪೂಜಾರ್, ರೈಲ್ವೆ ಅಧಿಕಾರಿಗಳು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ