ಮಹಾರಾಷ್ಟ್ರದಿಂದ 3.44 ಲಕ್ಷ ಕ್ಯೂಸೆಕ್ಸ್ ನೀರು ಕರ್ನಾಟಕಕ್ಕೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಬೆಳಗಾವಿ ಜಿಲ್ಲೆಯಲ್ಲಿ ಇಂದು ಮಳೆಯ ಪ್ರಮಾಣ ಕಡಿಮೆಯಾಗಿದೆ. ಬಹುದಿನಗಳ ನಂತರ ಬೆಳಗಾವಿ ನಗರದಲ್ಲಿ ಸೂರ್ಯನ ದರ್ಶನವಾಗಿದೆ.
ಆದರೆ ಪ್ರವಾಹ ಪ್ರಮಾಣ ಇನ್ನೂ ಇಳಿಮುಖವಾಗಿಲ್ಲ. ಜಿಲ್ಲೆಯ ಎಲ್ಲ 14 ತಾಲೂಕುಗಳಲ್ಲೂ ಪ್ರವಾಹ ಪರಿಸ್ಥಿತಿ ಹಾಗೆಯೇ ಮುಂದುವರಿದಿದೆ. ನೀರಿನ ಪ್ರಮಾಣ ಹೆಚ್ಚಳವಾಗುತ್ತಿಲ್ಲ ಎನ್ನುವುದಷ್ಟೆ ಸಮಾಧಾನದ ಸಂಗತಿ.
ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 53 ಸಾವಿರ ಕ್ಯುಸೆಕ್ಸ್ ನೀರು ಹೊರಬಿಡಲಾಗುತ್ತಿದೆ. ರಾಜಾಪುರ, ದೂದಗಂಗಾ, ವಾರ್ನಾ ಸೇರಿದಂತೆ ಮಹಾರಾಷ್ಟ್ರದ 7 ಜಲಾಶಯಗಳಿಂದ ಒತ್ತೂ 3.44 ಲಕ್ಷ ಕ್ಯುಸೆಕ್ಸ್ ನೀರು ಕರ್ನಾಟಕದ ವಿವಿಧ ನದಿಗಳಿಗೆ ಹರಿದುಬರುತ್ತಿದೆ.
ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ, ವೇದಗಂಗಾ, ದೂದಗಂಗಾ ಸೇರಿದಂತೆ ಎಲ್ಲ ನದಿಗಳು, ಹಳ್ಳ ಕೊಳ್ಳಗಳು ಈಗಲೂ ಉಕ್ಕಿ ಹರಿಯುತ್ತಿವೆ. ಹಾಗಾಗಿ ನೂರಾರು ಹಳ್ಳಿಗಳು ಜಲಾವೃತವಾಗಿಯೇ ಇವೆ.
ನಗರಪ್ರದೇಶಗಳಲ್ಲೂ ಭೂಮಿಯಿಂದ ನೀರು ಉಕ್ಕುತ್ತಿರುವುದರಿಂದ ಕಾಂಪ್ಲೆಕ್ಸ್, ಅಪಾರ್ಟ್ ಮೆಂಟ್ ಗಳಲ್ಲಿ ನೀರಿನ ಪ್ರಮಾಣ ನಿಧಾನವಾಗಿ ಇಳಿಯುತ್ತಿದೆ. ಮಳೆ ಸಂಪೂರ್ಣ ನಿಂತಲ್ಲಿ ಇನ್ನೆರಡು ದಿನದಲ್ಲಿ ಪ್ರವಾಹ ಕಡಿಮೆಯಾಗಬಹುದು. ಆಗ ಮಾತ್ರ ಮನೆಗಳ, ಗ್ರಾಮಗಳ ನಿಜವಾದ ಚಿತ್ರಣ ಕಾಣಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ