ಬೆಳಗಾವಿ ಅಧಿವೇಶನದಲ್ಲಿ ಶಿಸ್ತು ಉಲ್ಲಂಘಿಸಿದರೆ ಕಠಿಣ ಕ್ರಮ – ಕಾಗೇರಿ ಎಚ್ಚರಿಕೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ಇದೇ 13ರಿಂದ 24ರ ವರೆಗೆ ನಡೆಯಲಿರುವ ವಿಧಾನ ಮಂಡಳದ ಅಧಿವೇಶನದ ವೇಳೆ ಶಿಸ್ತು ಉಲ್ಲಂಘಿಸಿದರೆ ಅಂತಹ ಶಾಸಕರ ವಿರುದ್ಧ ಕಠಿಣ ಕ್ರಮ ಅನಿವಾರ್ಯವಾಗಲಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಎಚ್ಚರಿಕೆ ನೀಡಿದ್ದಾರೆ.
ಅಧಿವೇಶನದ ಸಿದ್ಧತೆಗಳ ಕುರಿತು ಕಾಗೇರಿ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪರಿಶೀಲನೆ ನಡೆಸಿ ನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಅಧಿವೇಶನ ಕುರಿತಂತೆ ವಿವರವಾದ ಸಮಾಲೋಚೆ, ಪೂರ್ವಸಿದ್ಧತೆ ಸಭೆ ನಡೆಸಿದ್ದೇವೆ. 3 ವರ್ಷದ ನಂತರ ಅಧಿವೇಶನ ನಡೆಯುತ್ತಿದೆ. 2018ರಲ್ಲಿ ನಡೆದ ನಂತರ 2 ವರ್ಷ ಕೊರೋನಾ ಕಾರಣದಿಂದ ಅಧಿವೇಶನ ನಡೆಸಲು ಆಗಿರಲಿಲ್ಲ. ಈಗ ಅಧಿವೇಶನ ನಡೆಸಲು ಹಲವಾರು ಸವಾಲುಗಳಿವೆ ಎಂದು ಕಾಗೇರಿ ಹೇಳಿದರು.
ಅಧಿವೇಶನ ನಡೆಸಲು ಪ್ರಮುಖವಾಗಿ 3 ಸವಾಲುಗಳಿವೆ. ಮೊದಲನೆಯದಾಗಿ ಕೊರೋನಾ ಸುದ್ದಿಗಳು ಸಾಕಷ್ಟು ಆತಂಕ ತಂದಿದೆ. ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಕೊರೋನಾ ನಿಯಂತ್ರಣದಲ್ಲಿಡಲು ಅಗತ್ಯ ಎಲ್ಲ ಕ್ರಮ ತೆಗೆದುಕೊಳ್ಳಬೇಕು. ಅಧಿವೇಶನ ನಡೆಸಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದೇವೆ.
ಎರಡನೆಯದಾಗಿ, ಅತಿವೃಷ್ಟಿ ಸಹ ತೀವ್ರವಾಗಿದೆ. ಎಷ್ಟು ಸಮಸ್ಯೆಯಾಗಿದೆ ಎನ್ನುವುದು ಗೊತ್ತಿದೆ. ಅಧಿಕಾರಿಗಳು ತಕ್ಷಣ ಸ್ಪಂದಿಸಿ, ಪರಿಹಾರ ಕೈಗೊಳ್ಳುವ ಜವಾಬ್ದಾರಿ ಇದೆ.
ಮೂರನೇಯದಾಗಿ, ಲೋಕಲ್ ಬಾಡಿ, ಪಂಚಾಯಿತಿ ಚುನಾವಣೆಗಳು ಇವೆ. ಚುನಾವಣೆ ನಿರ್ವಹಣೆ ಜವಾಬ್ದಾರಿ ಸಹ ಇದೆ. ಎಲ್ಲವನ್ನೂ ಸರಿದೂಗಿಸಿಕೊಂಡು ಅಧಿವೇಶನ ನಡೆಸುವ ಜವಾಬ್ದಾರಿ ಇದೆ. ಸವಾಲಾಗಿ ಸ್ವೀಕರಿಸಿ ಎಲ್ಲ ಪೂರ್ವಭಾವಿ ಸಿದ್ಧತೆ ಚೆನ್ನಾಗಿ ಮಾಡಿದ್ದಾರೆ. ಉತ್ತಮವಾಗಿ ಅಧಿವೇಶನ ನಡೆಯಲಿದೆ ಎಂದು ವಿಶ್ವೇಶ್ವರ ಹೆಗಡೆ ಹೇಳಿದರು.
ವಸತಿ ವ್ಯವಸ್ಥೆ, ಆಹಾರ ವ್ಯವಸ್ಥೆ, ವಾಹನ ವ್ಯವಸ್ಥೆ ಚರ್ಚೆಯಾಗಿದೆ. ಸೂಕ್ತ ಸಿದ್ಧತೆಗೆ ಸೂಚಿಸಲಾಗಿದೆ. ಇನ್ನೂ ನೂರಾರು ಕೆಲಸಗಳಿವೆ. ಹಿರಿಯ ಅಧಿಕಾರಿಗಳು ಬಂದು ಸಭೆಗಳನ್ನು ನಡೆಸಿದ್ದಾರೆ. ವಿದ್ಯಾರ್ಥಿಗಳಿಗೆ ಈ ಬಾರಿ ನೋಡಲು ಅವಕಾಶವಿಲ್ಲ. ಸಾರ್ವಜನಿಕರಿಗೆ ಅವಕಾಶವಿದೆ. ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ, ನಿಲುವಳಿ ಸೂಚನೆ, ಬಿಲ್ ಗಳ ಬಗ್ಗೆ ಚರ್ಚೆ ಎಲ್ಲವೂ ಎಂದಿನಂತೆ ನಡೆಯಲಿದೆ.ಸರಕಾರದಿಂದ ಈವರೆಗೆ ಯಾವುದೇ ಬಿಲ್ ಬಂದಿಲ್ಲ. ಇನ್ನೂ ಕೊಡಲು ಅವಕಾಶವಿದೆ ಎಂದರು.
ಪ್ರಜಾಪ್ರಭುತ್ವದ ವ್ಯವಸ್ಥೆಗೆ ಶಕ್ತಿಯನ್ನು ತುಂಬಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿ. ಸಾವಿರ ಸಾವಿರ ಕಣ್ಣುಗಳ ನಮ್ಮನ್ನು ನೋಡುತ್ತಿರುತ್ತವೆ. ಹಾಗಾಗಿ ರಾಜಕೀಯ ಭಿನ್ನಾಭಿಪ್ರಾಯ, ಸಿದ್ದಾಂತದ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಚೌಕಟ್ಟಿನಲ್ಲಿ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳುವ ಅನಿವಾರ್ಯತೆ ಬರುತ್ತದೆ. ಚರ್ಚೆಗೆ ಸಮಾನ ಅವಕಾಶ ಮಾಡಿಕೊಡುತ್ತೇವೆ. ಲೋಕಸಭೆ, ರಾಜ್ಯಸಭೆಯ ಇಂದಿನ ಕಲಾಪ ನೋಡಿದರೆ ಬೇಜಾರುತ್ತದೆ. ಇಲ್ಲಿ ಆ ರೀತಿಯಾದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಹಾಗಾಗಿ ಇದಕ್ಕೆ ಅವಕಾಶ ಕಲ್ಪಿಸದೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಅಶಿಸ್ತು ತೋರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರುವುದಿಲ್ಲ ಎಂದು ಕಾಗೇರಿ ಹೇಳಿದರು.
ಬೆಳಗಾವಿಯಲ್ಲಿ ಶಾಸಕರ ಭವನ ಕಟ್ಟಬೇಕೆನ್ನುವ ಸಲಹೆಯನ್ನು ಮುಖ್ಯಮಂತ್ರಿಗಳಿಗೆ ನೀಡಿದ್ದೇವೆ. ಈ ಬಗ್ಗೆ ಪ್ರಯತ್ನ ಮಾಡೋಣ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ವಿಧಾನಸಭಾ ಉಪಾಧ್ಯಕ್ಷ ಆನಂದ ಮಾಮನಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ