ಪ್ರಗತಿವಾಹಿನಿ ಸುದ್ದಿ, ತಾಳಿಕೋಟೆ : ತಾಳಿಕೋಟೆ ಪಟ್ಟಣಕ್ಕೆ ಹೊಂದಿಕೊಂಡು ಹರಿಯುವ ಡೋಣಿ ನದಿಯಲ್ಲಿ ಸೋಮವಾರ ಸಾಯಂಕಾಲ ಪ್ರವಾಹವು ಕಾಣಿಸಿಕೊಂಡಿದ್ದು ಕುರಿ ಮೇಯಿಸಲು ಹೋಗಿದ್ದ ೩ ಜನ ಕುರಿಗಾಹಿಗಳು ೩೦೦ ಕುರಿಗಳು, ೪ ನಾಯಿಗಳ ಸಮೇತ ಪ್ರವಾಹದ ನಡುಗಡ್ಡೆಯ ಪ್ರದೇಶದಲ್ಲಿ ಸಿಲುಕಿಹಾಕಿಕೊಂಡ ಘಟನೆ ನಡೆದಿದೆ. ಕುರಿಗಾಹಿಗಳ ರಕ್ಷಣೆಗೆ ತಾಲೂಕಾಡಳಿತ ಸನ್ನದಗೊಳ್ಳುತ್ತಿದೆ.
ಮಧ್ಯಾಹ್ನದವರೆಗೆ ದೋಣಿನದಿಯ ದಡದಲ್ಲಿ ಕುರಿ ಮೇಯಿಸುತ್ತಿದ್ದ ಕುರಿಗಾಹಿಗರು ಸಾಯಂಕಾಲ ೫ ಘಂಟೆಯ ಸುಮಾರಿಗೆ ನಧಿಯ ನಡುಗಡ್ಡೆಯ ಎತ್ತರ ಪ್ರದೇಶವಾದ ಕಾಮನಕಲ್ಲ ಪ್ರದೇಶದಲ್ಲಿ ಕುರಿಗಳನ್ನು ಮೇಯಿಸುತ್ತಾ ಕುಳಿತುಕೊಂಡಾಗ ಏಕಾಏಕಿ ನಧಿಯಲ್ಲಿ ಹೆಚ್ಚು ನೀರು ಕಾಣಿಸಿಕೊಂಡಿದೆ ಇದರಿಂದ ಕಾಮನಕಲ್ಲ ಪ್ರದೇಶವನ್ನು ಸುತ್ತುವರೆದಿದ್ದರಿಂದ ಕುರಿಗಳ ಸಮೇತ ಸಿಲುಕಿಕೊಂಡಿದ್ದಾರೆ.
ಸದರಿ ನಡುಗಡ್ಡೆಯಲ್ಲಿ ಸಿಲುಕಿಕೊಂಡವರನ್ನು ಗುರಿಗಾಹಿಗಳಾದ ರಮೇಶ ಪೂಜಾರಿ, ಮಾನಪ್ಪ ರಾಠೋಡ, ಹಣಮಂತ ರಾಠೋಡ, ಎಂದು ಗುರುತಿಸಲಾಗಿದ್ದು ಅವರು ಮಿಣಜಗಿ ಗ್ರಾಮದವರೆಂದು ತಿಳಿದುಬಂದಿದೆ.
ಜಿಲ್ಲೆಯ ಯಾವ ಭಾಗದಲ್ಲಿಯೂ ಮಳೆಯಾಗದಿದ್ದರೂ ನದಿಯಲ್ಲಿ ಏಕಾಏಕಿ ಪ್ರವಾಹ ಕಾಣಿಸಿಕೊಳ್ಳಲು ಕಾರಣವೇನೆಂಬುದು ತಿಳಿದಿಲ್ಲ. ಬಲ್ಲಮೂಲಗಳ ಪ್ರಕಾರ ಮಹಾರಾಷ್ಟ್ರದ ಜತ್ತ ತಾಲೂಕಿನ ಕೆಲವು ಭಾಗಗಳಲ್ಲಿ ಮಳೆಯಾಗಿದೆ ಎಂಬ ವರದಿ ಲಭ್ಯವಾಗಿದ್ದು ನೀರು ಸೋಮವಾರ ಸಾಯಂಕಾಲದ ಹೊತ್ತಿಗೆ ನದಿಯಲ್ಲಿ ಕಾಣಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಡೋಣಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದರೆ ಕಾಮನಕಲ್ಲ ಪ್ರದೇಶ ಮುಳಗಲಿದ್ದು ಇದರಲ್ಲಿ ೩ ಜನ ಕುರಿಗಾಹಿಗಳನ್ನೊಳಗೊಂಡು ೩೦೦ ಕುರಿಗಳು, ೪ ನಾಯಿಗಳು ನೀರಿನಲ್ಲಿ ಕೊಚ್ಚಿಹೋಗುವ ಅಪಾಯ ಇದೆ.
ಸ್ಥಳದಲ್ಲಿ ತಹಶಿಲ್ದಾರ ಅನೀಲಕುಮಾರ ಢವಳಗಿ, ಪಿ.ಎಸ್.ಆಯ್.ವಸಂತ ಬಂಡಗಾರ, ಅಗ್ನಿ ಶಾಮಕದಳದ ಸಿಬ್ಬಂದಿ ರಕ್ಷಣಾ ಕಾರ್ಯಚರಣೆಗೆ ಸಿದ್ದತೆ ನಡೆಸಿದ್ದಾರೆ. ಆದರೂ ತಡರಾತ್ರಿ ಕತ್ತಲ ಪ್ರದೇಶವಾಗಿದ್ದರಿಂದ ಕಾರ್ಯಚರಣೆಗೆ ಅಡಚಣೆ ಉಂಟಾಗಬಹುದು. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ವಿಪತ್ತು ನಿರ್ವಹಣಾ ತಂಡ ವಿಜಯಪುರದ ಬೇಗಂ ತಲಾಬನಲ್ಲಿರುವ ಬೋಟ್ ಗಳೊಂದಿಗೆ ಆಗಮಿಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ