*ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಶೀಘ್ರದಲ್ಲಿ ಜಾರಿ*: *ಓಂ ಬಿರ್ಲಾ ಭರವಸೆ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಮಹಿಳೆಯರು ಇಂದು ಎಲ್ಲ ರಂಗಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ಸಂಸತ್ನಲ್ಲಿ ಶೇ.33ರಷ್ಟು ಮೀಸಲಾತಿ ಶೀಘ್ರದಲ್ಲಿ ಜಾರಿಯಾಗಲಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತಿಳಿಸಿದರು.
ವಿಧಾನಸೌಧದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕಾಮನ್ ವೆಲ್ತ್ ಮಹಿಳಾ ಸಂಸದೀಯರ ಭಾರತ ಪ್ರಾದೇಶಿಕ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಧುನಿಕ ಭಾರತದಲ್ಲಿ ಮಹಿಳೆಯರು ಸೇನೆ, ಅಂತರಿಕ್ಷೆ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾರೆ. ದೇಶದ ಗಡಿಗಳಲ್ಲೂ ದೇಶಕಾಯುವ ಕೆಲಸ ಮಾಡುತ್ತಿದ್ದಾರೆ. ಸಮಾಜದ ಕಟ್ಟಕಡೆಯ ಮಹಿಳೆಗೂ ಸರ್ಕಾರದ ಸೌಲಭ್ಯಗಳು ದೊರಕಬೇಕು. ಅತೀ ಶೀಘ್ರದಲ್ಲಿ ವಿಧಾನಸಭಾ, ಲೋಕಸಭೆಯಲ್ಲಿ ಶೇ.33 ಮಹಿಳಾ ಮೀಸಲಾತಿ ಜಾರಿಯಾಗಲಿದೆ. ಈ ಮೂಲಕ ಪಂಚಾಯಿತಿಯಿಂದ ಲೋಕಸಭೆವರೆಗೂ ಮಹಿಳೆಯರಿಗೆ ಮೀಸಲಾತಿ ಸಿಕ್ಕಂತಾಗಲಿದೆ ಎಂದು ಹೇಳಿದರು.
ಮಹಿಳಾ ಸಮಾನತೆ ಬಗ್ಗೆ 12 ಶತಮಾನದಲ್ಲಿಯೇ ಚರ್ಚೆ ನಡೆಸಲಾಗಿತ್ತು. ಅನುಭವ ಮಂಟಪದಲ್ಲಿ ಮಹಿಳೆಯರಿಗೂ ಅವಕಾಶ ಸಿಕ್ಕಿತ್ತು. ಮಹಿಳೆಯರ ಭಾಗಿಯಿಂದ ದೇಶದ ಪ್ರಜಾಪ್ರಭುತ್ವ ಮತ್ತಷ್ಟು ಬಲಗೊಳ್ಳಲಿದೆ. ಸ್ವತಂತ್ರ ಹೋರಾಟದಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಸೇರಿದಂತೆ ಹಲವು ಮಹಿಳೆಯರು ಭಾಗಿಯಾಗಿದ್ದಾರೆ. ರಾಜಕೀಯದಲ್ಲಿ ಮಹಿಳೆಯರ ಸಹಭಾಗಿತ್ವ ಮುಖ್ಯವಾಗಿದ್ದು, ಪಂಚಾಯ್ತಿಯಿಂದ ಪಾರ್ಲಿಮೆಂಟ್ವರೆಗೂ ಮೀಸಲಾತಿ ಸಿಕ್ಕಂತಾಗಲಿದೆ. ಮಹಿಳೆಯರಿಗೆ ಪ್ರಾತಿನಿಧ್ಯ ಸಿಕ್ಕರೆ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲಿದೆ. ಪಂಚಾಯ್ತಿಗಲ್ಲಿಯೂ ಎಐ ತಂತ್ರಜ್ಞಾನ ಬಳಕೆಯಾಗಬೇಕು ಮತ್ತು ಮಹಿಳಾ ಪ್ರತಿನಿಧಿಗಳು ಡಿಜಿಟಲ್ ಸಶಕ್ತರಾಗಬೇಕು ಎಂದು ಅವರು ಆಶಿಸಿದರು.
ದೇಶದ ಪ್ರತಿಯೊಂದು ಪಂಚಾಯಿತಿ, ನಗರಸಭೆ, ವಿಧಾನಸಭೆಯಿಂದ ಹಿಡಿದು ಲೋಕಸಭೆಯವರೆಗಿನ ಜನಪ್ರತಿನಿಧಿಗಳ ಸಾಮರ್ಥ್ಯವನ್ನು ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಹೆಚ್ಚಿಸಲು ಬಲವಾದ ಸಾಂಸ್ಥಿಕ ವ್ಯವಸ್ಥೆ ರೂಪಿಸಬೇಕು. ತಂತ್ರಜ್ಞಾನದ ಬಳಕೆಯಿಂದ ಆಡಳಿತದಲ್ಲಿ ಪಾರದರ್ಶಕತೆ ಮೂಡಲಿದ್ದು, ಜವಾಬ್ದಾರಿಯುತ ಮೇಲ್ವಿಚಾರಣೆ ವ್ಯವಸ್ಥೆ ಬಲಗೊಳ್ಳಲಿದೆ ಎಂದರು.
ದೇಶದ ಇತಿಹಾಸ ಮತ್ತು ಪರಂಪರೆಯಲ್ಲಿ ಮಹಿಳೆಯರಿಗೆ ಪ್ರಮುಖ ಸ್ಥಾನವಿದೆ. ಮಹಿಳೆಯರ ಸ್ವಾತಂತ್ರ್ಯ, ಉದ್ಯಮಶೀಲತೆ ಹಾಗೂ ನಾಯಕತ್ವದ ಸಾಮರ್ಥ್ಯ ಅಪಾರವಾಗಿದೆ. ಡಿಜಿಟಲ್ ತಂತ್ರಜ್ಞಾನದಲ್ಲಿ ಮಹಿಳೆಯರನ್ನು ಸಬಲಗೊಳಿಸುವುದರ ಜೊತೆಗೆ, ಪ್ರಜಾಪ್ರಭುತ್ವದ ಆಡಳಿತದಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಗಣನೀಯವಾಗಿ ಹೆಚ್ಚಿಸಬೇಕಿದೆ. ಮಹಿಳಾ ನಾಯಕತ್ವವು ರಾಷ್ಟ್ರದ ಸಮಗ್ರ, ಸಮತೋಲಿತ ಮತ್ತು ಒಳಗೊಳ್ಳುವಿಕೆಯ ಅಭಿವೃದ್ಧಿಗೆ ಹೊಸ ದೃಷ್ಟಿಕೋನ ನೀಡಲಿದೆ ಎಂದು ಅಭಿಪ್ರಾಯಪಟ್ಟರು.
ಜನಪ್ರತಿನಿಧಿಗಳು ಕೇವಲ ವ್ಯಕ್ತಿಗಳಲ್ಲ, ಅವರು ಒಂದು ಸಂಸ್ಥೆಯ ಪ್ರತಿನಿಧಿಗಳು. ವಿಭಿನ್ನ ಆಲೋಚನೆಗಳು, ಅಭಿಪ್ರಾಯಗಳು ಮತ್ತು ದೃಷ್ಟಿಕೋನಗಳ ವಿನಿಮಯವೇ ಪ್ರಜಾಪ್ರಭುತ್ವದ ಮೂಲ ಶಕ್ತಿ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳಿಗೂ ಅವಕಾಶವಿರಬೇಕು ಮತ್ತು ಅದೇ ವ್ಯವಸ್ಥೆಯ ಅತಿ ದೊಡ್ಡ ಸಾಮರ್ಥ್ಯ. ಸಂವಾದ ಮತ್ತು ಚರ್ಚೆಯ ಮೂಲಕ ಸಮಸ್ಯೆಗಳಿಗೆ ಜವಾಬ್ದಾರಿಯುತವಾಗಿ ಪರಿಹಾರ ಕಂಡುಕೊಳ್ಳುವುದು ಎಲ್ಲರ ಬದ್ಧತೆಯಾಗಬೇಕು ಎಂದರು.




