*ಕಾವೇರಿ ಕಿಚ್ಚಿನ ನಡುವೆ ಡಿಕೆಶಿ ಜೊತೆ ಕಾಣಿಸಿಕೊಂಡ ವಿಜಯ್ *:*ತಮಿಳುನಾಡು ರಾಜಕೀಯದಲ್ಲಿ ಭಾರೀ ಚರ್ಚೆ!*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕದ ನಾಯಕರೊಂದಿಗಿನ ಭೇಟಿಯ ವೇಳೆ ಮೇಕೆದಾಟು ಅಣೆಕಟ್ಟು ವಿಚಾರ ಪ್ರಸ್ತಾಪಿಸದ ತಮಿಳುನಾಡು ಮುಖ್ಯಮಂತ್ರಿ ವಿಜಯ್ ವಿರುದ್ಧ ರಾಜಕೀಯ ಸಮರ ಶುರುವಾಗಿದೆ. ತಮಿಳುನಾಡಿನ ಹಿತಾಸಕ್ತಿಯನ್ನು ಕಡೆಗಣಿಸಿ ಕಾಂಗ್ರೆಸ್ ನಾಯಕರ ಮುಂದೆ ಮೌನವಾಗಿದ್ದಾರೆ ಎಂದು ಎಐಎಡಿಎಂಕೆ ತೀವ್ರ ವಾಗ್ದಾಳಿ ನಡೆಸಿದೆ.
ಸೋಮವಾರ ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರ ಆತ್ಮಕಥನ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಬಿಡುಗಡೆ ಕಾರ್ಯಕ್ರಮದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳು ಭೇಟಿಯಾಗಿದ್ದರು. ಈ ಭೇಟಿಯ ಸಂದರ್ಭದಲ್ಲಿ ಮೇಕೆದಾಟು ವಿಚಾರ ಚರ್ಚೆಗೆ ಬರದಿರುವುದು ತಮಿಳುನಾಡಿನ ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
ವಿಜಯ್ ಅವರು ಕಾಂಗ್ರೆಸ್ ಬೆಂಬಲದಿಂದಲೇ ಸರ್ಕಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ಬೆಂಬಲ ಹಿಂಪಡೆದರೆ ಸರ್ಕಾರ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅದರ ವಿರುದ್ಧ ಮಾತನಾಡಲು ಧೈರ್ಯ ತೋರುತ್ತಿಲ್ಲ ಎಂದು ಎಐಎಡಿಎಂಕೆ ಆರೋಪಿಸಿದೆ. ತಮಿಳುನಾಡಿನ ಹಕ್ಕುಗಳನ್ನು ರಕ್ಷಿಸುವುದಕ್ಕಿಂತ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುವುದೇ ಅವರಿಗೆ ಮುಖ್ಯವಾಗಿದೆ. ಅಧಿಕಾರಕ್ಕೆ ತಂದ ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಟೀಕಿಸಿದೆ.
ಇನ್ನು ಡಿಎಂಕೆ ಕೂಡ ವಿಜಯ್ ವಿರುದ್ಧ ವಾಗ್ದಾಳಿ ನಡೆಸಿದೆ. ಮೇಕೆದಾಟು ವಿಚಾರದಲ್ಲಿ ಮುಖ್ಯಮಂತ್ರಿ ಸಿನಿಮಾ ಶೈಲಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿರುವ ಡಿಎಂಕೆ, ಇದು ಕೋಟ್ಯಂತರ ಜನರ ಬದುಕಿಗೆ ಸಂಬಂಧಿಸಿದ ಗಂಭೀರ ವಿಷಯವಾಗಿದ್ದು, ಏಕಾಂಗಿಯಾಗಿ ನಿರ್ಧಾರ ಕೈಗೊಳ್ಳುವ ಬದಲು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದೆ.
ಡಿಎಂಕೆಯ ಮುಖವಾಣಿ ‘ಮುರಸೋಲಿ’ಯಲ್ಲಿಯೂ ಕರ್ನಾಟಕ ಕಾಂಗ್ರೆಸ್ ನಾಯಕರ ವಿರುದ್ಧ ಟೀಕೆ ವ್ಯಕ್ತವಾಗಿದೆ. ಮೇಕೆದಾಟು ಅಣೆಕಟ್ಟು ನಿರ್ಮಾಣವೇ ತಮ್ಮ ಜೀವನದ ಏಕೈಕ ಗುರಿ ಎಂಬಂತೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡುತ್ತಿದ್ದಾರೆ ಎಂದು ಪತ್ರಿಕೆ ಆಕ್ಷೇಪಿಸಿದೆ.
ಮೇಕೆದಾಟು ವಿಚಾರ ಸಿನಿಮಾ ಅಲ್ಲ, ಇದು ತಮಿಳರ ಜೀವನೋಪಾಯಕ್ಕೆ ಸಂಬಂಧಿಸಿದ ವಿಷಯ. ಇಂತಹ ಗಂಭೀರ ವಿಚಾರದಲ್ಲಿ ಸಿನಿಮಾ ಸಂಭಾಷಣೆಗಳಂತೆ ಮಾತನಾಡುತ್ತಾ ಆರು ತಿಂಗಳು ವ್ಯರ್ಥ ಮಾಡಲಾಗಿದೆ. ಮುಖ್ಯಮಂತ್ರಿಯಾಗಿ ಕಾವೇರಿ ಮತ್ತು ಮೇಕೆದಾಟು ವಿಷಯಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಾಗಬೇಕು. ಸಿನಿಮಾಗಳಲ್ಲಿ ಬೇಕಾದರೆ ಏಕಾಂಗಿಯಾಗಿ ನಟಿಸಲಿ ಎಂದು ಮುರಸೋಲಿ ಟೀಕಿಸಿದೆ.
ಒಟ್ಟಿನಲ್ಲಿ, ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳ ಭೇಟಿಯ ಬಳಿಕ ಮೇಕೆದಾಟು ವಿವಾದ ಮತ್ತೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.




