*ಕರಾವಳಿ ಜನರ ಬಹುದಿನಗಳ ಕನಸು ನನಸು*: *ಮೊದಲ ದಿನವೇ ಹೌಸ್‌ಫುಲ್ ಆದ ವಂದೇ ಭಾರತ್, ಗೊಮಟೇಶ್ವರ ರೈಲಿಗೂ ಬಿಗ್ ರಿಲೀಫ್*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕದ ಕರಾವಳಿ, ಗೋವಾ ಹಾಗೂ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಅಧಿಕೃತ ವಾಣಿಜ್ಯ ಸಂಚಾರ ಆರಂಭಿಸಿದೆ. ಮೊದಲ ದಿನವೇ ಪ್ರಯಾಣಿಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಹುತೇಕ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ. ಮಡಗಾಂವ್‌ನಿಂದ ಯಶವಂತಪುರಕ್ಕೆ ತೆರಳಿದ ರೈಲಿನ ಎಲ್ಲಾ ಸೀಟುಗಳು ಭರ್ತಿಯಾಗಿದ್ದರೆ, ಯಶವಂತಪುರದಿಂದ ಮಡಗಾಂವ್‌ಗೆ ತೆರಳಿದ ರೈಲಿನಲ್ಲೂ ಬಹುತೇಕ ಸೀಟುಗಳು ಭರ್ತಿಯಾಗಿದ್ದವು.
ಯಶವಂತಪುರದಿಂದ ಮಡಗಾಂವ್‌ಗೆ (ರೈಲು ಸಂಖ್ಯೆ 26655) ಹಾಗೂ ಮಡಗಾಂವ್‌ನಿಂದ ಯಶವಂತಪುರಕ್ಕೆ (ರೈಲು ಸಂಖ್ಯೆ 26656) ಮಂಗಳೂರು ಜಂಕ್ಷನ್ ಮೂಲಕ ರೈಲು ಸಂಚರಿಸಿದೆ. ಮಾರ್ಗಮಧ್ಯೆ ಕೆಲವು ನಿಲ್ದಾಣಗಳಲ್ಲಿ 5ರಿಂದ 10 ನಿಮಿಷ ವಿಳಂಬವಾದರೂ, ಮುಂದಿನ ನಿಲ್ದಾಣಗಳಲ್ಲಿ ನಿಗದಿತ ಸಮಯವನ್ನು ಕಾಯ್ದುಕೊಂಡಿದೆ.
ಬೆಂಗಳೂರಿನಿಂದ ಆಗಮಿಸಿದ ವಂದೇ ಭಾರತ್ ಮತ್ತು ಮಂಗಳೂರಿನಿಂದ ತೆರಳುತ್ತಿದ್ದ ವಾರದ ಮಂಗಳೂರು-ಯಶವಂತಪುರ ಎಕ್ಸ್‌ಪ್ರೆಸ್ ರೈಲುಗಳಿಗೆ ಘಾಟ್ ಪ್ರದೇಶದ ಕಡಗರವಳ್ಳಿಯಲ್ಲಿ ಕ್ರಾಸಿಂಗ್ ನೀಡಲಾಯಿತು. ಇದೇ ವೇಳೆ ಗೊಮಟೇಶ್ವರ ಎಕ್ಸ್‌ಪ್ರೆಸ್ ಕೂಡ ನಿಗದಿತ ವೇಳಾಪಟ್ಟಿಯಂತೆ ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸಿದೆ.
ವಂದೇ ಭಾರತ್ ರೈಲು ಉಡುಪಿ ನಿಲ್ದಾಣಕ್ಕೆ ಆಗಮಿಸಿದಾಗ ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ರೈಲ್ವೆ ಯಾತ್ರಿ ಸಮಿತಿಯ ಸದಸ್ಯರು ಸಿಹಿ ಹಂಚಿ ಸಂಭ್ರಮಿಸಿದರು.
ಇನ್ನೊಂದೆಡೆ, ವಂದೇ ಭಾರತ್ ರೈಲಿನ ವೇಳಾಪಟ್ಟಿ ಪ್ರಕಟವಾದ ಬಳಿಕ ಮಂಗಳೂರು-ಬೆಂಗಳೂರು ನಡುವೆ ಸಂಚರಿಸುವ ಗೊಮಟೇಶ್ವರ ಎಕ್ಸ್‌ಪ್ರೆಸ್ (16576) ರೈಲಿನ ಸಮಯ ಬದಲಾವಣೆಯ ಪ್ರಸ್ತಾಪಕ್ಕೆ ಕರಾವಳಿ ಭಾಗದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಬೆಳಗ್ಗೆ 7 ಗಂಟೆಗೆ ಹೊರಡುತ್ತಿದ್ದ ರೈಲಿನ ಸಮಯವನ್ನು 11 ಗಂಟೆಗೆ ಬದಲಾಯಿಸಲು ನೈಋತ್ಯ ರೈಲ್ವೆ ಪ್ರಕಟಣೆ ಹೊರಡಿಸಿತ್ತು.
ಈ ನಿರ್ಧಾರಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಸೇರಿದಂತೆ ರೈಲ್ವೆ ಸಂಘಟನೆಗಳ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಮಂಗಳೂರು ಭೇಟಿ ಸಂದರ್ಭದಲ್ಲೂ ಈ ವಿಚಾರ ಪ್ರಸ್ತಾಪವಾಗಿತ್ತು. ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೂ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಎಂಎಲ್‌ಸಿ ಕಿಶೋರ್ ಕುಮಾರ್ ಹಾಗೂ ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಮನವಿ ಸಲ್ಲಿಸಿದ್ದವು.
ಇದೀಗ ರೈಲ್ವೆ ಇಲಾಖೆ ಗೊಮಟೇಶ್ವರ ಎಕ್ಸ್‌ಪ್ರೆಸ್ ವೇಳಾಪಟ್ಟಿ ಬದಲಾವಣೆಯನ್ನು ಸದ್ಯಕ್ಕೆ ಕೈಬಿಟ್ಟಿದೆ. ಹೀಗಾಗಿ ರೈಲು ಹಳೆಯ ಸಮಯದಲ್ಲೇ ಸಂಚಾರ ಮುಂದುವರಿಸಲಿದೆ. ಇದು ಕರಾವಳಿ ಪ್ರಯಾಣಿಕರಿಗೆ ನೆಮ್ಮದಿ ತಂದಿದೆ.
ಯಶವಂತಪುರದಿಂದ ಮಡಗಾಂವ್‌ವರೆಗೆ ಸುಮಾರು 850 ಕಿ.ಮೀ. ದೂರ ಕ್ರಮಿಸುವ ವಂದೇ ಭಾರತ್ ರೈಲು ಹಾಸನ, ಸಕಲೇಶಪುರ, ಮಂಗಳೂರು, ಉಡುಪಿ, ಮುರ್ಡೇಶ್ವರ, ಗೋಕರ್ಣ ಮತ್ತು ಕಾರವಾರ ಸೇರಿದಂತೆ ಪ್ರಮುಖ ನಗರಗಳು ಹಾಗೂ ಪ್ರವಾಸಿ ತಾಣಗಳನ್ನು ಸಂಪರ್ಕಿಸಲಿದೆ.



